News

ಇಂದು ಒಡಿಶಾಗೆ ಅಪ್ಪಳಿಸಲಿದೆ ತಿತ್ಲಿ

11 October, 2018 3:22 PM IST By:

ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ತಿತ್ಲಿ ಚಂಡಮಾರುತವು ಬುಧವಾರ ತೀವ್ರತೆ ಪಡೆದಿದ್ದು, ಗುರುವಾರ ಬೆಳಗ್ಗೆ 5.30ರ ವೇಳೆಗೆ ಒಡಿಶಾ ಕರಾವಳಿಯನ್ನು ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು 5 ಕರಾವಳಿ ಜಿಲ್ಲೆಗಳ 3 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. 

ಗಾಳಿಯ ವೇಗ ಗಂಟೆಗೆ 160 ಕಿ.ಮೀ. ಇರಲಿದ್ದು, ಭಾರೀ ಮಳೆ ಹಾಗೂ ಹಾನಿ ಉಂಟಾಗುವ ಭೀತಿಯಿರುವ ಕಾರಣ, ಕರಾವಳಿ ಪ್ರದೇಶಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಕರೆಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡ ಮಾರುತದ ಪ್ರಭಾವದಿಂದಾಗಿ ಆಂಧ್ರ ಕರಾವಳಿ ಯಲ್ಲೂ ಭಾರೀ ಮಳೆಯಾಗಲಿದ್ದು, ಅಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದೇ ವೇಳೆ, ತಿತ್ಲಿ ಭೀತಿಯಿಂದಾಗಿ ಒಡಿಶಾದ ಜನತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಪೆಟ್ರೋಲ್‌ ಪಂಪ್‌ಗ್ಳಲ್ಲೂ ಬುಧವಾರ ಸರತಿ ಸಾಲು ಕಂಡುಬಂದಿದೆ. ಇನ್ನೊಂದೆಡೆ, 3 ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಸೋಮವಾರದಿಂದ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಒಂದು ಸಾವಿರ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ಒಡಿಶಾ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳಕ್ಕೆ ಕಳುಹಿಸಿದೆ. ಜೊತೆಗೆ, ಆಹಾರ ಸಾಮಗ್ರಿ ಹಾಗೂ ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವಂತೆಯೂ ಈ ರಾಜ್ಯಗಳಿಗೆ ಸೂಚಿಸಿದೆ. ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಪೂರ್ವ ಕರಾವಳಿ ರೈಲ್ವೆಯು ಒಡಿಶಾದ ಖುರ್ದಾ ರೋಡ್‌ ಮತ್ತು ಆಂಧ್ರದ ವಿಜಯನಗರಂ ನಡುವೆ ಸಂಚರಿಸುವ 8 ರೈಲುಗಳನ್ನು ರದ್ದು ಮಾಡಿದೆ.