News

ಗುಣಮಟ್ಟದ ತೆಂಗಿನಕಾಯಿಯಿಂದ ಅಂಗಾಂಶ ಕಸಿಯ ಮೂಲಕ ಹಲವು ಸಸ್ಯಗಳ ಸೃಷ್ಟಿಗೆ ಸಂಶೋಧನೆ

07 September, 2020 9:31 AM IST By:

ಕಲ್ಪವೃಕ್ಷವೆಂದೇ ಹೆಸರಾದ ತೆಂಗಿನಕಾಯಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆಹಾರ, ಪಾನೀಯ, ಎಣ್ಣೆ, ನಾರು, ಮರ ಮತ್ತು ಸೌಂದರ್ಯವರ್ಧಕಗಳಿಗೆ ಸೇರಿದಂತೆ ಹಲವಾರು ರೀತಿಯಲ್ಲಿ ಟೆಂಗಿನಕಾಯಿ ಮಾನವಕುಲಕ್ಕೆ ನೈಸರ್ಗಿಕ ಕೊಡುಗೆಯಾಗಿದೆ.

ಜಾಗತಿಕವಾಗಿ, ತೆಂಗಿನಕಾಯಿ ಉತ್ಪಾದನೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಶುದ್ಧ ನೀರಿನ ಬೇಡಿಕೆ, ತೆಂಗಿನ ಎಣ್ಣೆಯ ಬಳಕೆ ಮತ್ತು ತೆಂಗಿನ ಮರದ ಕರಕುಶಲ ವಸ್ತುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ತೆಂಗಿನಕಾಯಿ ಉತ್ಪಾದನೆ ಹೆಚ್ಚಿಸುವ ಅವಶ್ಯಕತೆಯಿದೆ. ಕಳೆದ ಒಂದು ದಶಕದಲ್ಲಿ ತೆಂಗಿನಕಾಯಿ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದ್ದರಿಂದ ತಮಿಳುನಾಡಿನ ಕೃಷಿ ವಿಶ್ವವಿದ್ಯಾಲಯವು ಗುಣಮಟ್ಟದ ತೆಂಗಿನಕಾಯಿಗಳ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ  ಒಂದು ಬಲಿತ ತೆಂಗಿನಕಾಯಿಯಿಂದ ಕನಿಷ್ಠ 20 ಸಸಿಗಳನ್ನು ಸೃಷ್ಟಿಸುವ ಅಂಗಾಂಶ ಕಸಿ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಅಂಗಾಂಶ ಕಸಿಯ ಮೂಲಕ ಗುಣಮಟ್ಟದ ತೆಂಗಿನಕಾಯಿಯಿಂದ ಹಲವು ಸಸ್ಯಗಳನ್ನು ಸೃಷ್ಟಿಸುವ ವಿವಿಯ ಸಂಶೋಧಕರ ಪ್ರಯತ್ನ ಫಲಕೊಟ್ಟಿದೆ.

ಪ್ರಸ್ತುತ ಒಂದು ತೆಂಗಿನಕಾಯಿಯಿಂದ ಒಂದು ಗಿಡವನ್ನಷ್ಟೇ ಉತ್ಪಾದಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ಬೀಜದ ಉದ್ದೇಶಕ್ಕಾಗಿ ಬೇಡಿಕೆಯ ಶೇ.30ರಷ್ಟು ತೆಂಗಿನಕಾಯಿ ಮಾತ್ರ ಪೂರೈಕೆಯಾಗುತ್ತಿದೆ. (1 ಕೋಟಿ ಗಿಡಗಳಿಗೆ ಬೇಡಿಕೆಯಿದ್ದರೆ 30ರಿಂದ 35 ಲಕ್ಷ ಗಿಡಗಳು ಲಭ್ಯವಾಗುತ್ತಿವೆ). ಆದರೆ ಹೊಸ ಆವಿಷ್ಕಾರದ ಪ್ರಕಾರ ಒಂದು ಬೀಜದಿಂದ 20 ಗಿಡಗಳನ್ನು ತಯಾರಿಸಲು ಸಾಧ್ಯವಿದೆ ಹಾಗೂ ಗುಣಮಟ್ಟದಲ್ಲಿ ಯಾವುದೇ ನಷ್ಟವೂ ಆಗುವುದಿಲ್ಲಎಂದು ವಿವಿಯ ಸಂಶೋಧಕರು ಭರವಸೆ ವ್ಯಕ್ತಪಡಿಸಿದ್ದಾರೆ

500 ಪಟ್ಟು ಬೇಡಿಕೆ ಹೆಚ್ಚಳ!

ಕಳೆದ ಒಂದು ದಶಕದಲ್ಲಿ ತೆಂಗಿನಕಾಯಿಯ ಬೇಡಿಕೆ 500 ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಬೇಡಿಕೆ ಹಾಗೂ ಪೂರೈಕೆ ನಡುವೆ ಬೃಹತ್‌ ಅಂತರ ಸೃಷ್ಟಿಯಾಗಿದೆ. ಬೇಡಿಕೆಗೆ ತಕ್ಕ ಹಾಗೆ ತೆಂಗಿನಕಾಯಿಗಳನ್ನು ಬೆಳೆಯಬೇಕಿದ್ದರೆ ವೈಜ್ಞಾನಿಕ ನೆರವು ಅತ್ಯಗತ್ಯವಾಗಿತ್ತು. ಅದೇ ರೀತಿ ಸುಸಜ್ಜಿತ ತೆಂಗಿನ ತೋಟಗಳನ್ನು ಸೃಷ್ಟಿಸಲು ಹಾಗೂ ಈಗಾಗಲೇ ವಯಸ್ಸು ದಾಟಿರುವ ತೆಂಗಿನ ಮರಗಳನ್ನು ತೆಗೆದು ಹೊಸ ಸಸಿಗಳನ್ನು ನೆಡುವುದಕ್ಕೆ ಹೆಚ್ಚು ಸಸಿಗಳ ಅಗತ್ಯವಿದೆ ಎಂದು ವಿವಿಯು ತಿಳಿಸಿದೆ.