News

ಹಾಲಿನ ದರ ಕಡಿತ, 2 ಸಾವಿರ ಕೋವಿಡ್ ಪರಿಹಾರ- ತಮಿಳುನಾಡು ಸಿಎಂ ಸ್ಟಾಲಿನ್ ಘೋಷಣೆ

07 May, 2021 4:09 PM IST By:

ತಮಿಳುನಾಡು ಮುಖ್ಯಮಂತ್ರಿಯಾಗಿ ಎಂ.ಕೆ ಸ್ಟಾಲಿನ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ತಮಿಳುನಾಡಿನ ರಾಜ್ಯದ ಜನತೆಗೆಭರ್ಜರಿ ಗಿಫ್ಟ್ ನೀಡಿದ್ದಾರೆ. ಸಿಎಂ ಆಗಿ ಅಧಿಕಾರವಹಿಸಿಕೊಂಡ ಅವರು ಜನಪರ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ, ಬಡ ಕುಟುಂಬಗಳಿಗೆ 4 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ಪ್ರಕಟಿಸಿದ್ದಾರೆ.

ತಮಿಳುನಾಡಿನ 2.07 ಕೋಟಿ ಬಡ ಕುಟುಂಬಗಳಿಗೆ ಈ ಆರ್ಥಿಕ ನೆರವು ಯೋಜನೆಯ ಲಾಭ ಸಿಗಲಿದೆ.  ತಮಿಳುನಾಡು ನಗರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಯೋಜನೆಯನ್ನು ಪ್ರಕಟಿಸಿದ್ದಾರೆ. ತಮಿಳುನಾಡಿನ ನಗರ ಸಾರಿಗೆ ಬಸ್‌ಗಳಲ್ಲಿ ಇನ್ನು ಮುಂದೆ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಪ್ರಯಾಣ ದರ ನೀಡಬೇಕಾಗಿಲ್ಲ. ಚುನಾವಣೆ ಪೂರ್ವದಲ್ಲಿ ಡಿಎಂಕೆ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ.
ತಮಿಳುನಾಡಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬಡವರಿಗೆ ವಿಮಾ ಯೋಜನೆಯ ಸೌಲಭ್ಯವನ್ನು ಜಾರಿ ಮಾಡುವ ಆದೇಶವನ್ನು ಹೊರಡಿಸಿದ್ದಾರೆ.

ತಮಿಳುನಾಡಿನ ಹಾಲಿನ ಮಾರಾಟ ದರವನ್ನು ಸ್ಟಾಲಿನ್ 3ರೂಪಾಯಿ ಕಡಿಮೆ ಮಾಡುವ ಘೋಷಣೆಯನ್ನು ಮಾಡಿದ್ದು, ಇನ್ನು ಮುಂದೆ ತಮಿಳುನಾಡಿನಲ್ಲಿ ಹಾಲಿನ ಮಾರಾಟ ದರ 3 ರೂಪಾಯಿ ಕಡಿಮೆಯಾಲಿದೆ. ಮೇ 16 ರಿಂದ ಜಾರಿಗೆ ಬರುವಂತೆ ಸರ್ಕಾರ ಪೂರೈಸುವ ಆವಿನ್ ಹಾಲಿನ ಬೆಲೆಯಲ್ಲಿ ಲೀಟರ್ ಗೆ 3 ರೂಪಾಯಿ ಇಳಿಕೆ ಮಾಡಿ ಮತ್ತೊಂದು ಆದೇಶಕ್ಕೆ ಸಹಿ ಹಾಕಿದರು. ಶನಿವಾರದಿಂದ ರಾಜ್ಯ ಸಾರಿಗೆ ನಿಗಮವು ನಿರ್ವಹಿಸುವ ಎಲ್ಲಾ ಸಾಮಾನ್ಯ ಶುಲ್ಕ ನಗರ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.