News

ಶಿವರಾತ್ರಿಯಂದು ರಾಜ್ಯದಲ್ಲಿ ಸುರಿಯಿತು ಗುಡುಗು ಸಹಿತ ಮಳೆ

12 March, 2021 9:41 AM IST By:
ಸಾಂದರ್ಭಿಕ ಚಿತ್ರ

ಕರ್ನಾಟಕದ ಉತ್ತರಕರ್ನಾಟಕ, ಮೈಸೂರು, ಚಿಕ್ಕಮಗಳೂರು, ದಾವಣಗೆರೆ ಶಿವಮೊಗ್ಗ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಗುರುವಾರ ಅನಿರೀಕ್ಷಿತವಾಗಿ ಮಳೆ ಸುರಿದಿದೆ. ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿತ್ತು. ಹವಾಮಾನ ಇಲಾಖೆಯ ವರದಿಯಂತೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ.

ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯಯ ಶಿರಸಿ ತಾಲೂಕಿನ ಹಲವೆಡೆ ಗುರುವಾರ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಿತು. ಒಂದು ತಾಸಿಗೂ ಹೆಚ್ಚು ಕಾಲ ರಭಸದ ಗಾಳಿ ಬೀಸಿತು.

ಒಂದೇ ಸವನೆ ಸುರಿದ ರಭಸದ ಮಳೆಗೆ ಶಿರಸಿ ಪಟ್ಟಣದ ಅಶ್ವಿನಿ ಸರ್ಕಲ್ ಬಳಿ ರಸ್ತೆ ಮೇಲೆ ಒಂದು ಅಡಿಗೂ ಹೆಚ್ಚು ನೀರು ನಿಂತಿದ್ದರಿಂದ ವಾಹನ ಗಳ ಸಂಚಾರಕ್ಕೆ ತೊಂದರೆಯಾಯಿತು. ಶಿವ ದೇವಾಲಯಗಳಿಗೆ ಭಕ್ತರು ಮಳೆಯಲ್ಲೇ ನೆನೆಯುತ್ತ ತೆರಳಿದರು. ಮಳೆ ಕಾರಣಕ್ಕೆ ಮಧ್ಯಾಹ್ನದ ನಂತರ ಶಿವತಾಣಗಳಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಯಿತು. ಸಿದ್ದಾಪುರ ಪಟ್ಟಣ ಹಾಗೂ ಕೆಲವು ಹಳ್ಳಿಗಳಲ್ಲಿ ಮಳೆ ಸುರಿದಿದೆ.

ಸಿದ್ದಾಪುರ ಪಟ್ಟಣದ ರವೀಂದ್ರ ನಗರದ ರೋಹಿಣಿ ಅಂಬಿಗ ಅವರ ವಾಸದ ಮನೆಯ ಸ್ವಿಚ್‌ ಬೋರ್ಡ್‌ ಹಾಗೂ ತೆಂಗಿನಮರಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ, ಸಬ್ಬೇನಹಳ್ಳಿ, ಹೆಸಗೋಡು, ಬಿ. ಹೊಸಳ್ಳಿ, ತಳವಾರ, ಕುಂದೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಅರ್ಧ ತಾಸಿಗೂ ಅಧಿಕ ಮಳೆ ಸುರಿಯಿತು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಒಂದು ಗಂಟೆ ಸಾಧಾರಣವಾಗಿ ಸುರಿದಿದ್ದು, ಕೆ.ಆರ್.ನಗರ, ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಕೊಡಗಿನ ಅಮ್ಮತ್ತಿ, ಪೊನ್ನಂಪೇಟೆ, ಶ್ರೀಮಂಗಲ, ವಿರಾಜಪೇಟೆ ಸುತ್ತಮುತ್ತ ಉತ್ತಮ ಮಳೆಯಾಗಿದೆ.

 

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೆಲ ಸಮಯ ಭಾರಿ ಮಳೆ ಸುರಿದಿದೆ. ಕೋಣಂದೂರು, ರಿಪ್ಪನ್‌ಪೇಟೆ, ಶಿವಮೊಗ್ಗ ಭಾಗದಲ್ಲಿ ಉತ್ತಮ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯ ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗದ ಸುತ್ತಮುತ್ತ ಗುರುವಾರ ಸಂಜೆ ತುಂತುರು ಮಳೆಯಾಗಿದೆ. ಬೇಸಿಗೆ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಸಾರ್ವಜನಿಕರಿಗೆ ಮಳೆ ಹನಿ ಸಂತಸ ಮೂಡಿಸಿತು.