ರಾಜ್ಯ ಸರಕಾರವು ಎಲ್ಲ ಸಹಕಾರಿ ಸಂಸ್ಥೆಗಳ ಮೂಲಕ ಈ ವರ್ಷ 14,500 ಕೋ.ರೂಪಾಯಿ ಸಾಲ ನೀಡುವ ಗುರಿ ಹೊಂದಿದ್ದು, ಇಲ್ಲಿಯವರೆಗೆ 4,432 ಕೋ.ರೂ. ಸಾಲವನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ (ಎಸ್‌ಸಿಡಿಸಿಸಿ) ಸಹಕಾರ ಬ್ಯಾಂಕ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪ ತಂತ್ರಾಂಶ ಅಳವಡಿಕೆ, ಟ್ಯಾಬ್ ಬ್ಯಾಂಕಿಂಗ್, ಎಸ್‌ಸಿಡಿಸಿಸಿ ಬ್ಯಾಂಕ್ ಆ್ಯಪ್ ಹಾಗೂ ವೀಡಿಯೋ ಕಾನ್ಫರೆನ್ಸ್ ಉದ್ಘಾಟನೆ ಮಾಡಿದ ನಂತರ ಮಾತನಾಡಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ರೈತರಿಗೆ 14,500 ಕೋಟಿ ಸಾಲ ನೀಡಲಾಗುವುದು. ಕಳೆದ ವರ್ಷ ರೈತರಿಗೆ ಸಹಕಾರ ಸಂಸ್ಥೆಗಳ ಮೂಲಕ 13,500 ಕೋಟಿ ಸಾಲ ನೀಡಲಾಗಿತ್ತು. ಈ ಬಾರಿ ಅದನ್ನು ಹೆಚ್ಚಿಸಲಾಗಿದೆ. ನಬಾರ್ಡ್ ಸಾಲ ವಿತರಣೆಗೆ 1,750 ಕೋಟಿಯನ್ನು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ. ಏಪ್ರಿಲ್ 1ರಿಂದ ಈವರೆಗೆ ರಾಜ್ಯದ ರೈತರಿಗೆ 4,432 ಕೋಟಿ ಸಾಲ ವಿತರಣೆ ಮಾಡಲಾಗಿದೆ. ತ್ವರಿತವಾಗಿ ಸಾಲ ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಅಪೆಕ್ಸ್ ಬ್ಯಾಂಕ್, 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ರಾಜ್ಯದ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಏಕರೂಪದ ತಂತ್ರಾಂಶ ಬಳಕೆ ಜಾರಿಗೊಳಿಸುವ ಪ್ರಸ್ತಾವವಿದೆ. ಆದಷ್ಟು ಬೇಗ ಏಕರೂಪದ ತಂತ್ರಾಂಶ ಜಾರಿಗೊಳಿಸಲಾಗುವುದು ಈ ಕುರಿತಂತೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ನೇತೃತ್ವದ ಸಮಿತಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ ಎಂದರು.