News

ಇಂದಿನಿಂದ ರಾಜ್ಯದಲ್ಲಿ ಮೂರು ದಿನ ಮಳೆಯಾಗುವ ಸಾಧ್ಯತೆ

18 November, 2020 8:19 AM IST By:

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಕರಾವಳಿ  ದಕ್ಷಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಇಂದಿನಿಂದ ಮತ್ತೆ ಮೂರು ದಿನಗಳ ಕಾಲ ಮುಂದುವರೆಯಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ 19ರವರೆಗೆ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ನ. 18ರಿಂದ ಮುಂದಿನ ಮೂರು ದಿನ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.

ರಾಜ್ಯದಲ್ಲಿ ಹಿಂಗಾರು ಚುರುಕಾಗಿರುವ ನಡುವೆಯೇ ಹವಾಮಾನ ಇಲಾಖೆಯ ಮುನ್ಸೂಚನೆಯಿಂದ ಬೆಳೆ ಕಟಾವು ಮಾಡುತ್ತಿರುವ ರೈತರಿಗೆ ಆತಂಕ ಎದುರಾಗಿದೆ.  ಕಳೆದೆರಡು ದಿನಗಳಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಲೆಯಾಗಿದೆ. ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿಯೂ ತುಂತುರು ಮಳೆಯಾಗಿದೆ.

ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದಾಗಿ ಕಟಾವು ಹಂತಕ್ಕೆ ಬಂದ ರಾಗಿ ಬೆಳೆಗಾರರಿಗೆ ಆತಂಕದ ಕಾರ್ಮೋಡ ಸೃಷ್ಟಿಸಿದೆ.ರಾಗಿ ಹೆಚ್ಚಾಗಿ ಬೆಳೆಯುವ ಹಳೆಯ ಮೈಸೂರು ಭಾಗದಲ್ಲಿ ಕಟಾವಿಗೆ ಬಂದ ಕಾಳು ತುಂಬಿದ ರಾಗಿ ತೆನೆಗಳು ನೆಲಕ್ಕೊರಗಿ ಹೊಲದಲ್ಲಿಯೇ ಮೊಳಕೆಯೊಡೆಯುತ್ತಿವೆ.