News

ಭಾರತ-ಇಸ್ರೇಲ್ ಕೃಷಿ ಯೋಜನೆಯಡಿ ರಾಜ್ಯದಲ್ಲಿ ಮೂರು ಕೃಷಿ ಉತ್ಕೃಷ್ಟತಾ ಕೇಂದ್ರ ಆರಂಭ

18 June, 2021 4:44 PM IST By:

ಭಾರತ-ಇಸ್ರೇಲ್ ಕೃಷಿ ಯೋಜನೆ (ಐಐಎಪಿ) ಅಡಿ ಕರ್ನಾಟಕದಲ್ಲಿ ಸ್ಥಾಪಿಸಿರುವ 3 ಉತ್ಕೃಷ್ಟತಾ ಕೇಂದ್ರಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಜಂಟಿಯಾಗಿ ಉದ್ಘಾಟಿಸಿದರು. 

ತೋಟಗಾರಿಕಾ ಕ್ಷೇತ್ರದಲ್ಲಿ ಇಸ್ರೇಲ್ ತಂತ್ರಜ್ಞಾನಗಳ ಅಳವಡಿಕೆಗಾಗಿ ಇಂಡೋ-ಇಸ್ರೇಲ್ ಕೃಷಿ ಯೋಜನೆಯಡಿಯಲ್ಲಿ ಈ ಮೂರು ಉತ್ಕೃಷ್ಟತಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳು ಇಂಡೋ-ಇಸ್ರೇಲ್ ಕೃಷಿ ಯೋಜನೆಯ ಒಂದು ಭಾಗವಾಗಿದ್ದು, ಬಾಗಲಕೋಟೆಯಲ್ಲಿ ದಾಳೆಂಬ ಉತ್ಕೃಷ್ಟ ಕೇಂದ್ರ, ಕೋಲಾರದಲ್ಲಿ ಮಾವು ಉತ್ಕೃಷ್ಟತಾ ಕೇಂದ್ರ ಮತ್ತು ಧಾರವಾಡದಲ್ಲಿ ತರಕಾರಿ ಬೆಳೆಗಳ ಉತ್ಕೃಷ್ಟತಾ  ಕೇಂದ್ರಗಳು ಆರಂಭವಾಗಲಿವೆ.

ಕೋಲಾರದಲ್ಲಿ ಮಾವು ಉತ್ಕೃಷ್ಟ ಕೇಂದ್ರದ ಸ್ಥಾಪನೆಗಾಗಿ 1.98 ಕೋಟಿ ರೂಪಾಯಿ ಕೇಂದ್ರ ಸರ್ಕಾರ ಗೂ 3.60 ಕೋಟಿ ರೂಪಾಯಿ ರಾಜ್ಯ ಸರ್ಕಾರ ಒದಗಿಸಿದೆ. ಬಾಗಲಕೋಟೆಯಲ್ಲಿ ದಾಳಿಂಬೆ ಉತ್ಕೃಷ್ಟ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ 3.43 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರ 1.56 ಕೋಟಿ ರೂಪಾಯಿ ನೀಡಿದೆ. ಅದೇ ರೀತಿ ಧಾರವಾಡದಲ್ಲಿ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರವು 5 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರವು 2.60 ಕೋಟಿ ರೂಪಾಯಿ ಒದಗಿಸಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆಯ ನಂತರ ಮಾತನಾಡಿ, ರಾಜ್ಯದಲ್ಲಿರುವ ಈ ಮೂರು ಉತ್ಕೃಷ್ಟತಾ ಕೇಂದ್ರಗಳು ರೈತರಿಗೆ ಜ್ಞಾನವನ್ನು ವೃದ್ಧಿಸುವ, ಉತ್ತಮ ಕೃಷಿ ಪದ್ಧತಿಗಳ್ನು ಪ್ರಾತ್ಯಕ್ಷಿಸುವ ಮತ್ತು ರೈತರಿಗೆ ತರಬೇತಿ ನೀಡುವ ಒಂದು ಅತ್ಯಾಧುನಿಕ ಕೃಷಿ ಕೇಂದ್ರಗಳಾಗಲಿವೆ. ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಇಂಡೋ-ಇಸ್ರೇಲ್ ಕೃಷಿ ಯೋಜನೆಯಡಿಲ್ಲಿರುವ ಈ ಉತ್ಕೃಷ್ಟತಾ ಕೇಂದ್ರಗಳು ನೆರವಾಗಲಿವೆ ಎಂದರು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, “ಈ ಕೇಂದ್ರಗಳು ಕರ್ನಾಟಕದ ಕೃಷಿಕ ಸಮುದಾಯಕ್ಕೆ ಇತ್ತೀಚಿನ ಇಸ್ರೇಲಿ ತಂತ್ರಜ್ಞಾನಗಳು ಲಭ್ಯವಾಗಲು ಸಹಾಯ ಮಾಡುತ್ತವೆ ಮತ್ತು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ” ಎಂದರು.  

ಭಾರತದಲ್ಲಿನ ಇಸ್ರೇಲ್ ರಾಯಭಾರಿ ಡಾ.ರಾನ್ ಮಲ್ಕಾ ಅವರು ಮಾತನಾಡಿ, “ಇಂಡೋ-ಇಸ್ರೇಲಿ ಸಹಭಾಗಿತ್ವದಲ್ಲಿ ನಾವು ಮೂರು ವಿಭಿನ್ನ ಕೇಂದ್ರಗಳನ್ನು ಉದ್ಘಾಟಿಸಿದ್ದೇವೆ. ಇದು ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲಾಗಿದ್ದು, ಸ್ಥಳೀಯ ರೈತರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧೆಯ ಅವಕಾಶವನ್ನು ನೀಡುತ್ತದೆ ಎಂದರು.

ಸಮಾರಂಭದಲ್ಲಿ ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಅಗರ್ವಾಲ್, ಇಸ್ರೇಲಿ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು, ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು.