ರಾಜ್ಯದಲ್ಲಿ ಕೊರೋನಾದಿಂದಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಏರುಪೇರಾಗಿರುವ ಪರಿಣಾಮ ಈ ಬಾರಿ ಬೇಸಿಗೆ ರಜೆ ರದ್ದುಗೊಳಿಸಲಾಗಿದೆ. ಕೊರೊನಾ ಮಹಾಮಾರಿ ಕಡಿಮೆಯಾಗುತ್ತಿದ್ದರೂ ಮುನ್ನೆಚ್ಚರಿಕ ಕ್ರಮವಾಗಿ ಸರ್ಕಾರ ಈ ಕ್ರಮಕೈಗೊಳ್ಳಲು ಮುಂದಾಗಿದೆ.
ಶಾಲಾ, ಕಾಲೇಜುಗಳು ವಿಳಂಬವಾಗಿ ಆರಂಭವಾಗಿರುವ ಕಾರಣ ಈ ಬಾರಿ ಬೇಸಿಗೆ ರಜೆಯನ್ನೂ ಬಳಸಿಕೊಂಡು ಮೇ ವರೆಗೆ ತರಗತಿಗಳನ್ನು ನಡೆಸುವ ಇಂಗಿತವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಬುಧವಾರ ‘ಸ್ಮಾರ್ಟ್‌ಕ್ಲಾಸ್’ ವೀಕ್ಷಿಸಿದ ನಂತರ ಈ ಮಾಹಿತಿ ನೀಡಿದ್ದಾರೆ.
ಕೊರೋನಾದಿಂದಾಗಿ ಶಾಲಾಕಾಲೇಜುಗಳು ವಿಳಂಬವಾಗಿ ಆರಂಭವಾಗಿವೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಿನ್ನೆಡೆಯಾಗಿದೆ. ಈ ಹಿನ್ನೆಲೆಯಲ್ಲಿ ಬೇಸಿಗೆ ರಜೆ ಬಳಸಿಕೊಂಡು ಮೇ ತಿಂಗಳವರೆಗೆ ತರಗತಿಗಳನ್ನು ನಡೆಸಲಾಗುವುದು. ಈಗಾಗಲೇ ಸಾಕಷ್ಟು ರಜೆಗಳನ್ನು ಕಳೆದಿದ್ದೀರಿ. ಉಳಿದ ನಾಲ್ಕೂವರೆ ತಿಂಗಳು ಶಿಕ್ಷಕರು ಪಾಠದ ಕಡೆ, ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.
ಪಠ್ಯಕ್ರಮ ನಿಗದಿ ಕುರಿತು ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಲ್ಲೂ ಒಂದೂವರೆ ತಿಂಗಳು ಸೇತುಬಂಧ ಶಿಕ್ಷಣಕ್ಕೆ ಮೀಸಲಿಡಲಾಗುವುದು. ಹಿಂದಿನ ವರ್ಷದ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಪುನರ್‌ಮನನ ಮಾಡಿಸಿದ ನಂತರ ಹೊಸ ಪಠ್ಯ ಕಲಿಕೆಗೆ ಸಿದ್ಧಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.