News

ಅಡಿಕೆ ಬೆಲೆ ಏರಿಕೆ ಬೆನ್ನಲ್ಲೇ ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿ ಹಸಿ ಅಡಿಕೆ ಕದಿಯುತ್ತಿರುವ ಕಳ್ಳರು

22 September, 2021 7:33 PM IST By:

ಅಡಿಕೆ ಬೆಲೆ ಹೆಚ್ಚಾಗಿದ್ದೇ ತಡ ದಾವಣಗೆರೆ ಜಿಲ್ಲೆಯ ರೈತರು ರಾತ್ರಿಯಿಡೀ ತೋಟಗಳ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ, ಕಳ್ಳರ ಹಾವಳಿ. ನಿಜ, ದಾವಣಗೆರೆ ಜಿಲ್ಲೆಯ ಹಲವೆಡೆ ತೋಟಗಳಲ್ಲಿ ಅಡಿಕೆ ಮರಗಳಿಂದ ಹಸಿ ಅಡಿಕೆ ಕೊಯ್ದು ಕಳವು ಮಾಡಿರುವ ಪ್ರಕರಣಗಳು ವರದಿಯಾಗುತ್ತಿವೆ. ರಾತ್ರೋರಾತ್ರಿ ತೋಟಗಳಿಗೆ ನುಗ್ಗುವ ಖದೀಮರು, ಕೈಲಾದಷ್ಟು ಅಡಿಕೆ ಕೊಯ್ದುಕೊಂಡು ಪರಾರಿಯಾಗುತ್ತಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.

ಜಿಲ್ಲೆಯ ಚನ್ನಗಿರಿ, ಹರಿಹರ, ಹೊನ್ನಾಳಿ ತಾಲೂಕುಗಳ ಭಾಗದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ಚನ್ನಗಿರಿ ತಾಲೂಕಿನ ಹೆಬ್ಳಿಗೆರೆ ಸೇರಿ ಹಲವು ಹಳ್ಳಿಗಳಲ್ಲಿ ಅಡಿಕೆ ಕಳುವಾಗಿರುವ ಬಗ್ಗೆ ವರದಿಯಾಗಿದೆ. ಮುಖ್ಯ ರಸ್ತೆಗೆ ಹೊಂದಿಕೊAಡAತೆ ಇರುವ ತೋಟಗಳನ್ನೇ ಕಳ್ಳರು ಟಾರ್ಗೆಟ್ ಮಾಡಿಕೊಂಡಿದ್ದು, ನಡು ರಾತ್ರಿ ತೋಟಗಳಿಗೆ ನುಗ್ಗಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿAದ ಕೆಂಪು ಅಡಿಕೆ ಬೆಲೆ ಹೆಚ್ಚಾಗಿದೆ. ಬುಧವಾರ ತುಮ್ಕೋಸ್‌ನಲ್ಲಿ ಒಂದು ಕ್ವಿಂಟಾಲ್ ಅಡಿಕೆ ಬೆಲೆ 52,000 ರೂ. ಇದ್ದು, ಶಿವಮೊಗ್ಗ ಹಾಗೂ ಇತರೆ ಮಾರುಕಟ್ಟೆಗಳಲ್ಲೂ 52,000 ರಿಂದ  54,000 ರೂ. ಧಾರಣೆ ಕಂಡುಬAದಿದೆ. ಇನ್ನು ಹಸಿ ಅಡಿಕೆ (ಸಿಪ್ಪೆ ಸಹಿತ) ಬೆಲೆ ಒಂದು ಕ್ವಿಂಟಾಲ್‌ಗೆ 7,000 ರೂ. ಇದೆ. ತೋಟಗಳಿಗೆ ದಾಂಗುಡಿಯಿಟ್ಟು ಕೈಗೆ ಸಿಕ್ಕಷ್ಟು ಮರಗಳಿಂದ ಅಡಿಕೆ ಕೊಯ್ಯುವ ಕಳ್ಳರು ಅವುಗಳನ್ನು ಸಿಪ್ಪೆ ಸಹಿತ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ.

ಕದಿಯುವ ಬಗೆ ಹೇಗೆ?

ಮೊದಲೇ ಹೇಳಿದಂತೆ ಮುಖ್ಯ ರಸ್ತೆ ಪಕ್ಕದಲ್ಲಿ ಇರುವ ತೋಟಗಳನ್ನು ಗುರಿಯಾಗಿಸಿಕೊಂಡು ಕಳ್ಳರು ಹಸಿ ಅಡಿಕೆ ಕಳವು ಮಾಡುತ್ತಿದ್ದಾರೆ. ರಸ್ತೆ ಬದಿ ವಾಹನ ನಿಲ್ಲಿಸಿ, ಅದರಲ್ಲಿ ಚಾಲಕನನ್ನು ಬಿಟ್ಟು ಉಳಿದವರು ತೋಟಗಳಿಗೆ ನುಗ್ಗುತ್ತಾರೆ. ಸಾಮಾನ್ಯವಾಗಿ ಈ ಕಳ್ಳರ ತಂಡಗಳಲ್ಲಿ ಐದಕ್ಕೂ ಹೆಚ್ಚು ಮಂದಿ ಇರುತ್ತಾರೆ. ಈ ವೇಳೆ ಯಾರಾದರೂ ದಾರಿಯಲ್ಲಿ ಹೋಗುವವರು ಇಲ್ಲೇಕೆ ವಾಹನ ನಿಲ್ಲಿಸಿದ್ದೀಯ ಎಂದು ಕೇಳಿದರೆ, ನಿದ್ದೆ ಮಾಡುತ್ತಿದ್ದೆ ಅಂತಲೋ, ಮೂತ್ರ ವಿಸರ್ಜನೆ ಮಾಡಲು ನಿಲ್ಲಿಸಿದೆ ಅಂತಲೋ ಹೇಳಿ ಸಾಗುಹಾಕುತ್ತಾರೆ. ಅನುಮಾನಗೊಂಡು ಹೆಚ್ಚು ಪ್ರಶ್ನೆ ಕೇಳಿದರೆ ‘ರಸ್ತೆಯೇನು ನಿನ್ನ ಆಸ್ತಿಯಾ?’ ಎಂದು ಜಗಳಕ್ಕೆ ಬರುತ್ತಾರೆ ಎಂದು ಚನ್ನಗಿರಿ ಜಿಲ್ಲೆ ಪಾಂಡೋಮಟ್ಟಿ ಗ್ರಾಮದ ಅಡಿಕೆ ಬೆಳೆಗಾರರೊಬ್ಬರು ಮಾಹಿತಿ ನೀಡಿದ್ದಾರೆ. ಅಡಿಕೆ ಕದಿಯಲು ಹೆಚ್ಚಾಗಿ ಕದ್ದ ಹಳೇ ವಾಹನಗಳು ಬಳಕೆಯಾಗುತ್ತಿವೆ. ಒಂದು ವೇಳೆ ಪೊಲೀಸರು ಹಿಡಿಯಲು ಬಂದರೆ ವಾಹನವನ್ನು ಬಿಟ್ಟು ಓಡುತ್ತಾರೆ. ಕದ್ದ ವಾಹನವಾದ್ದರಿಂದ ಕಳ್ಳ ಯಾರು ಎಂದು ಗೊತ್ತಾಗುವುದಿಲ್ಲ.

ಅಡಿಕೆ ಮಾರಿ ಬಂದ 18 ಲಕ್ಷ ರೂ. ಕಳವು!

ಚನ್ನಗಿರಿ ಜಿಲ್ಲೆಯ ಹೆಬ್ಳಿಗೆರೆ ಗ್ರಾಮದಲ್ಲಿ ಇತ್ತೀಚೆಗಷ್ಟೇ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಮನೆಯವರಿಗೆ ಚಾಕು ಮತ್ತಿತರ ಆಯುಧಗಳನ್ನು ತೋರಿಸಿ, ಬೆದರಿಸಿ, 18 ಲಕ್ಷ ರೂ. ನಗದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಒಡವೆ, ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಹಿಂದಿನ ಬೆಳೆಯ ಅಡಿಕೆ ಮಾರಾಟ ಮಾಡದೆ ಹಾಗೇ ಇರಿಸಿಕೊಂಡಿದ್ದ ರೈತ, ಕಳೆದ ವಾರ ಒಳ್ಳೆಯ ಬೆಲೆ ಬಂದ ಕಾರಣ ಮಾರಾಟ ಮಾಡಿದ್ದರು. ಅಡಿಕೆ ಮಾರಿದ ಹಣ 18 ಲಕ್ಷ ರೂಪಾಯಿಗಳನ್ನು ಮರುದಿನ ಬ್ಯಾಂಕ್ ಖಾತೆಗೆ ಹಾಕಿದರಾಯಿತು ಎಂದು ಮನೆಯಲ್ಲೇ ಇರಿಸಿಕೊಂಡಿದ್ದರು. ಆದರೆ ಅದೇ ದಿನ ರಾತ್ರಿ ಮನೆಗೆ ನುಗ್ಗಿದ 7 ಜನರಿದ್ದ ಕಳ್ಳರ ಗುಂಪು ಮನೆಯವರಿಗೆ ಮಾರಕಾಸ್ತ್ರ ತೋರಿಸಿ ಹೆದರಿಸಿ ಹಣ, ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದೆ.

ಕಳವಿಗೆ ಇಳಿದ ವಿದ್ಯಾರ್ಥಿಗಳು

ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣ, ಕುಂಬಳೂರು ಮತ್ತು ಜಿಗಳಿ ಗ್ರಾಮಗಳಲ್ಲಿ ಕೂಡ ಅಡಿಕೆ ಕಳವು ಹೆಚ್ಚಾಗಿದೆ. ವಾರದ ಹಿಂದೆ ಮಧ್ಯರಾತ್ರಿ ಜಿಗಳಿ ಗ್ರಾಮದ ತೋಟವೊಂದಕ್ಕೆ ನುಗ್ಗಿ ಅಡಿಕೆ ಕದ್ದು ಟ್ರಾಕ್ಟರ್‌ನಲ್ಲಿ ಹೋಗುತ್ತಿದ್ದ ಕಳ್ಳರ ತಂಡವನ್ನು ಹೆದ್ದಾರಿಯಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸರು ಹಿಡಿದಿದ್ದರು. ಈ ವೇಳೆ ಬಂಧನಕ್ಕೆ ಒಳಗಾದ 10 ಮಂದಿ ಕಳ್ಳರು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಎರಡು ದಿನಗಳ ಹಿಂದಷ್ಟೇ ಮಲೇಬೆನ್ನೂರು ಗ್ರಾಮದ ಹರಳಹಳ್ಳಿ ರಸ್ತೆಯಲ್ಲಿರುವ ತೋಟದಲ್ಲೂ ಹಸಿ ಅಡಿಕೆ ಕಳವಾಗಿವೆ. ಸುಮಾರು 40 ಗಿಡಗಳಲ್ಲಿದ್ದ ಅಡಿಕೆ ಗೊನೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಹಾಗೇ, ಮಲೇಬೆನ್ನೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಕುಂಬಳೂರು ಗ್ರಾಮದಲ್ಲಿ ಕೂಡ ಒಂದು ತೋಟದಲ್ಲಿ ಹಸಿ ಅಡಿಕೆ ಕಳುವಾಗಿರುವ ಬಗ್ಗೆ ವರದಿಯಾಗಿದೆ.

ಮೆಕ್ಕೆಜೋಳದ ಕಣಜ ಎಂದು ಹೆಸರಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚೆಗೆ ಅಡಿಕೆ ಕ್ಷೇತ್ರ ಸಾಕಷ್ಟು ವಿಸ್ತರಣೆಯಾಗುತ್ತಿದ್ದು, ಅಡಿಕೆ ಈ ಭಾಗದÀ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. 2010ರಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಗೆ ಕೇವಲ 10,000-15,000 ರೂಪಾಯಿ ದರವಿತ್ತು. 2014ರಲ್ಲಿ ಒಂದು ಕ್ವಿಂಟಾಲ್ ಅಡಿಕೆ ದರ 99,000ದಿಂದ ಒಂದು ಲಕ್ಷ ರೂಪಾಯಿ ಸನಿಹ ಹೋಗಿತ್ತು. ಆಗಲೂ ಖದೀಮರು ಅಡಿಕೆ ತೋಟಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದರು. ಈಗ ಮತ್ತೊಮ್ಮೆ ಅಡಿಕೆ ಕಳ್ಳರ ಹಾವಳಿ ಹೆಚ್ಚಾಗಿದೆ. 2021ರ ಆರಂಭದಲ್ಲಿ ಹೊನ್ನಾಳಿ ತಾಲೂಕಿನ ಮಾದಾಪುರ ಗ್ರಾಮದ ಬಸವನಗೌಡ ಎಂಬ ರೈತನ ನಾಲ್ಕು ಲಕ್ಷ ರೂ. ಮೌಲ್ಯದ ಅಡಿಕೆ ಕಳ್ಳತನ ಆಗಿತ್ತು. ಹರಿಹರ ತಾಲೂಕಿನ ನಂದಿತಾವರೆ ಗ್ರಾಮದಲ್ಲಿ ಒಂದು ಲಕ್ಷ ರೂ. ಬೆಲೆಯ ಅಡಿಕೆ ಕಳುವಾಗಿತ್ತು. ಈ ಅವಧಿಯಲ್ಲಿ ಒಂದು ತಿಂಗಳಲ್ಲಿ ಹತ್ತು ಅಡಿಕೆ ಕಳವು ಪ್ರಕರಣಗಳು ಪತ್ತೆ ಆಗಿದ್ದವು.

ಕದ್ದವರಿಗೆ ಶಿಕ್ಷೆ ಕಡಿಮೆ

ಅಡಿಕೆ ಕದ್ದವರ ವಿರುದ್ಧ ಐಪಿಸಿ 379 ಪ್ರಕಾರ ಮೂರರಿಂದ ಏಳು ವರ್ಷ ಸಾದಾ ಜೈಲು ಶಿಕ್ಷೆ ಇದ್ದು, ಐದಾರುದಿನದಲ್ಲಿ ಬೇಲ್ ಸಿಗುತ್ತದೆ. ಜಾಮೀನು ಸಿಕ್ಕ ನಂತರ ಬೇರೆ ಕೆಲಸ ಮಾಡದ ಖದೀಮರು ಮತ್ತೆ ಅಡಿಕೆ ಕಳ್ಳತನಕ್ಕೆ ಇಳಿಯುತ್ತಿದ್ದಾರೆ.