ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದರಿಂದ ಎಲ್ಲ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಜುಲೈ 15ರವರೆಗೆ ರದ್ದುಪಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ತಿಳಿಸಿದೆ. ಆದರೆ ಈ ನಿಷೇಧ ಸರಕು ಸಾಗಣೆ ವಿಮಾನಗಳು ಹಾಗೂ ಹಾಗೂ ಡಿಜಿಸಿಎ ಒಪ್ಪಿಗೆ ಇರುವ ವಿಮಾನ ಯಾನಗಳಿಗೆ ಅನ್ವಯಿಸುವುದಿಲ್ಲ. ದೇಶೀ ವಿಮಾನ ಹಾರಾಟವನ್ನು ಮೇ. 25 ರಂದು ಆರಂಭಿಸಲಾಗಿದೆ. ಕೊರೋನಾ ವೈರಸ್ ಬಿಕ್ಕಟ್ಟನ್ನು ಗಮನಿಸಿಕೊಂಡು ಜುಲೈ ತಿಂಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಸದ್ಯ, ವಂದೇ ಭಾರತ್ ಮಿಷನ್ ಅಡಿ ಏರ್ ಇಂಡಿಯಾ ಮತ್ತು ಕೆಲ ಖಾಸಗಿ ವೈಮಾನಿಕ ಸಂಸ್ಥೆಗಳು ಕೆಲವೊಂದು ವಿಮಾನ ಸೇವೆಯನ್ನು ಒದಗಿಸುತ್ತಿವೆ. ವಂದೇ ಭಾರತ್ ಮಿಷನ್ ನಡಿಯಲ್ಲಿ ಭಾರತ ವಿದೇಶಗಳಲ್ಲಿ ಸಿಲುಕಿಕೊಂಡಿರುವ ತನ್ನ ಪ್ರಜೆಗಳನ್ನು ಕರೆದುಕೊಂಡು ಬಂದಿರುವಂತೆ ತಮ್ಮ ವಿಮಾನಗಳಿಗೂ ದೇಶದಲ್ಲಿ ಇಳಿಯಲು ಅನುವು ಮಾಡಿಕೊಡಬೇಕೆಂದು ಅಮೆರಿಕಾ, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವಾರು ರಾಷ್ಟ್ರಗಳ ಸಂಬಂಧಿತ ಇಲಾಖೆಗಳು ಸಚಿವಾಲಯಕ್ಕೆ ಮನವಿಗಳನ್ನು ಸಲ್ಲಿಸಿದ್ದು ಇವುಗಳನ್ನೆಲ್ಲಾ ಪರಿಶೀಲಿಸಲಾಗುತ್ತಿದೆ ಎಂದು ಸಚಿವಾಲಯದ ಮಾಹಿತಿಗಳು ತಿಳಿಸಿವೆ.
ಮುಂಬಯಿಯಿಂದ ಪ್ಯಾರಿಸ್ ಗೆ ಹಾರಾಟ ನಡೆಸಬೇಕಿದ್ದ ಏರ್ ಇಂಡಿಯಾ ವಿಮಾನದ ಹಾರಾಟಕ್ಕೆ ಫ್ರಾನ್ಸ್ ಸರಕಾರ ಅಂತಿಮ ಕ್ಷಣದಲ್ಲಿ ಒಪ್ಪಿಗೆ ನಿರಾಕರಿಸಿತ್ತು ಮತ್ತಿದು ಹಲವು ಪ್ರಯಾಣಿಕರ ತೊಂದರೆಗೆ ಕಾರಣವಾಗಿತ್ತು.
ಇನ್ನೊಂದೆಡೆ ಹಲವಾರು ರಾಷ್ಟ್ರಗಳು ವಂದೇ ಭಾರತ್ ಮಿಷನ್ ಕೈಗೊಳ್ಳಲು ಬಾರತ ಮುಂಚಿತವಾಗಿಯೇ ಅನುಮತಿಯನ್ನು ಪಡೆದುಕೊಳ್ಳಬೇಕೆಂದು ಸೂಚಿಸಿರುವ ಹಿನ್ನಲೆಯಲ್ಲಿ ನಾಗರಿಕ ವಿಮಾನ ಯಾನ ಸಚಿವಾಲಯವು ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದೆ.