News

ರಾತ್ರೋರಾತ್ರಿ ಕುರಿ ಹಿಂಡು ಬಿಟ್ಟು 20 ಎಕರೆ ಮೆಕ್ಕೆಜೋಳ ಮೇಯಿಸಿದ ದುಷ್ಟರು!

22 July, 2021 2:11 PM IST By:

ಆ ಮಹಿಳೆಯ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಆಕೆಯ ಗೋಳಾಟದ ಗಂಭೀರತೆಗೆ ಸುತ್ತಲ ವಾತಾವರಣವೆಲ್ಲಾ ಸ್ತಬ್ಧಗೊಂಡಂತಿತ್ತು. ಆ ಹೆಣ್ಣಿನ ಕಣ್ಣೀರು ಕಂಡ ಮಳೆರಾಯ ಕೂಡ ಸ್ವಲ್ಪಹೊತ್ತು ಮರೆಯಾಗಿ ಹೋಗಿದ್ದ..!!

ಇದು ಯಾವುದೋ ಅಪಘಾತದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಹೆಣ್ಣಿನ ಅಳು ಅಥವಾ ಆಕ್ರಂದನದ ಚಿತ್ರಣವಲ್ಲ. ಬದಲಿಗೆ ಈಗತಾನೇ ಕುಡಿಯೊಡೆದು, ಹಚ್ಚ ಹಸುರಾಗಿ ಕಂಗೊಳಿಸುತ್ತಿದ್ದ ಬೆಳೆ ಕುರಿಗಳ ಹೊಟ್ಟೆ ಸೇರಿದ್ದರಿಂದ ಕಂಗಾಲಾಗಿದ್ದ ರೈತ ಮಹಿಳೆಯ ಅಳಲು, ಆಕ್ರೋಶದ ಚಿತ್ರಣ. ಆ ರೈತ ಮಹಿಳೆಯ ಅಳುವಿನೊಂದಿಗೆ, ಗದ್ಗಧಿತ ಕಂಠದಿಂದ ಹಿಡಿ ಶಾಪದ ನುಡಿಗಳೂ ಹೊರಹೊಮ್ಮುತ್ತಿದ್ದವು. ಆಕೆಯ ಏರು ಧ್ವನಿಯ ಆಕ್ರಂದನ, ಅದಾವ ದುಷ್ಟರು ಹೀಗೆ ಮಾಡಿದರೋ ಎಂಬ ಆಕ್ರೋಶ ತೋರುತ್ತಿದ್ದರೆ, ಆ ಧ್ವನಿಯ ಹಿಂದೇ ಸುರಿಯುತ್ತಿದ್ದ ಕಣ್ಣೀರಿನ ಹನಿಗಳು, ಬಿತ್ತಿದ ಬೆಳೆ ಹಾಳಾಯಿತಲ್ಲಾ... ಮುಂದಿನ ಜೀವನದ ಗತಿಯೇನು? ಎಂಬ ಪ್ರಶ್ನಾರ್ಥಕ ಚಿಹ್ನೆಯನ್ನು ಹೊತ್ತು ನೆಲಕ್ಕೆ ಬೀಳುತ್ತಿದ್ದವು!

ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಸುಮಾರು 20 ಎಕರೆ ಮೆಕ್ಕೆಜೋಳದ ಹೊಲದೊಳಗೆ, ಯಾರೋ ದುಷ್ಕರ್ಮಿಗಳು ಕುರಿಗಳ ಹಿಂಡು ಬಿಟ್ಟು, ಬೆಳೆಯನ್ನೆಲ್ಲಾ ಮೇಯಿಸಿ, ಹಾಳು ಮಾಡಿರುವ ಘಟನೆ ನಡೆದಿದೆ. ಗಂಗಾಧರ ಎಂಬುವವರು ಮಂಗಳವಾರ ಸಂಜೆ ಹೊಲಕ್ಕೆ ಹೋಗಿ ನೋಡಿದಾಗ ಬೆಳೆ ಹಸಿರಾಗಿ ನಳನಳಿಸುತ್ತಿತ್ತು. ಆದರೆ, ಮಾರನೆಯ ದಿನ ಬೆಳಗ್ಗೆ ಜಮೀನಿಗೆ ಹೋದಾಗ ಅಲ್ಲಿನ ಚಿತ್ರಣವೇ ಬೇರೆಯಿತ್ತು. ಬರೋಬ್ಬರಿ 20 ಎಕರೆ ಭೂಮಿಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆ ಮತ್ತೆ ಮೇಲೇಳದಂತೆ ಹಾಳಾಗಿ ಹೋಗಿತ್ತು. ವಿಷಯ ತಿಳಿದು ಏದುಸಿರು ಬಿಡುತ್ತಾ ಹೊಲಕ್ಕೆ ಬಂದ ಹಾಲಮ್ಮ ಎಂಬ ರೈತ ಮಹಿಳೆ, ಹಾಳಾದ ಬೆಳೆ ಕಂಡು ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿದು ಬಿದ್ದರು. ನೆಲವನ್ನೇ ಬಿಗಿದಪ್ಪಿ ಗೋಳಾಡಿದ ಹಾಲಮ್ಮ, ಮಣ್ಣು ಹಿಡಿದು ಗಾಳಿಗೆ ತೂರಿ, ಕುರಿ ಮೇಯಿಸಿದ ದುಷ್ಟರಿಗೆ ಹಿಡಿ ಶಾಪ ಹಾಕಿದರು.

ಇದು ಹಾಲಮ್ಮ ಅಥವಾ ಗಂಗಾಧರಪ್ಪ ಅವರಿಗೆ ಆದ ನಷ್ಟ ಮಾತ್ರವಲ್ಲ, ಈ 20 ಎಕರೆ ಜಮೀನು ಮತ್ತು ಅದರಲ್ಲಿ ಬೆಳೆಯುವ ಬೆಳಯನ್ನೇ ನಂಬಿಕೊAಡು 8 ಕುಟುಂಬಗಳು ಜೀವನ ನಡೆಸುತ್ತಿವೆ. 20 ಎಕರೆ ಪೈರು ನಾಶವಾದ ವಿಷಯ ಕೇಳಿ ಜಗಳೂರಿನ ಹೊಸಕೆರೆ ಗ್ರಾಮವೇ ಆ ಹೊಲದಲ್ಲಿ ನೆರೆದಿತ್ತು.

ಈ ಬಗ್ಗೆ ಮಾತನಾಡಿದ ರೈತ ಚಂದ್ರಶೇಖರಪ್ಪ, “ನಮ್ಮ ಭಾಗದಲ್ಲಿ ಮೊದಲೇ ಮಳೆ ಕಡಿಮೆ. ಅದರಲ್ಲೂ ಈ ಬಾರಿ ಸ್ವಲ್ಪ ಉತ್ತಮ ಎನ್ನುವ ಮಟ್ಟಿಗೆ ಮಳೆಯಾಗಿತ್ತು. ಮಳೆ ಬಿದ್ದಿದ್ದರಿಂದ ಖುಷಿಯಾಗಿ ಮೆಕ್ಕೆಜೋಳ ಬಿತ್ತಿದ್ದೆವು. ಬಿತ್ತನೆ ಮಾಡಿದ ಸಮಯದಿಂದ ಆರಂಭವಾಗಿ ಬಿತ್ತನೆ ಬೀಜ, ಮೂಲ ಗೊಬ್ಬರ, ಕಳೆ ನಾಶಕಕ್ಕೆ ಮಾಡಿರುವ ವೆಚ್ಚ ಸೇರಿ ಇದುವರೆಗೆ ಎಕರೆಗೆ ಸುಮಾರು 20 ಸಾವಿರ ರೂ. ಖರ್ಚಾಗಿತ್ತು. ಬೆಳೆಯ ಬೆಳವಣಿಗೆ ಉತ್ತಮವಾಗಿತ್ತು. ಜೊತೆಗೆ ರೋಗ ಬಾಧೆಯೂ ಇರಲಿಲ್ಲ. ಹೀಗಾಗಿ ಒಳ್ಳೆಯ ಇಳುವರಿ ನಿರೀಕ್ಷಿಸುತ್ತಿದ್ದವು. ಈಗ ದುಷ್ಕರ್ಮಿಗಳು ಜಮೀನಿಗೆ ಕುರಿ ಹಿಂಡು ಬಿಟ್ಟು ನಮ್ಮ ಕನಸನ್ನೆಲ್ಲಾ ನುಚ್ಚುನೂರು ಮಾಡಿದ್ದಾರೆ,” ಎಂದು ಅಳಲು ತೋಡಿಕೊಂಡರು.

ಮತ್ತೊಬ್ಬ ರೈತ ರಾಮಣ್ಣ ಎಂಬುವವರು ಮಾತನಾಡಿ, ನಮಗೆ ಇರುವುದು 2 ಎಕರೆ ಭೂಮಿ ಮಾತ್ರ. ಅದರಲ್ಲಿ ಮೆಕ್ಕೆಜೋಳ ಬಿತ್ತಿದ್ದೆವು. ನಾವು ಬೆಳೆಯುವುದು ವರ್ಷಕ್ಕೆ ಒಂದೇ ಬೆಳೆ. ಅದೂ ಈಗ ಕೈಗೆ ಬಾರದಂತಾಗಿದೆ. ಮತ್ತೊಮ್ಮೆ ಬಿತ್ತನೆ ಮಾಡಬೇಕೆಂದರೆ ಕೈಯಲ್ಲಿ ಬಿಡಿಗಾಸು ಕೂಡ ಇಲ್ಲ. ಮನೆ ಖರ್ಚಿಗೆ ಇರಿಸಿದ್ದ ಹಣವನ್ನೆಲ್ಲಾ ಬೆಳೆ ಮೇಲೆ ಹಾಕಿದ್ದೆ. ಮುಂದೆ ಏನು ಮಾಡುವುದು ಎಂಬ ಚಿಂತೆ ಕಾಡತೊಡಗಿದೆ,” ಎಂದು ಕಣ್ಣೀರಾದರು.

ವೈಯಕ್ತಿಕ ದ್ವೇಶದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಒಬ್ಬರ ಮೇಲೆ ಸಿಟ್ಟಿದ್ದರೆ ಅವರ ಹೊಲದಲ್ಲಿ ಮಾತ್ರ ಮೇಯಿಸುತ್ತಿದ್ದರು. ಇಲ್ಲಿ 8 ಕುಟುಂಬಗಳಿಗೆ ಸೇರಿರುವ 20 ಎಕರೆ ಜಮೀನಿನಲ್ಲಿ ಬೆಳೆದ ಪೈರು ಕುರಿಗಳ ಪಾಲಾಗಿದೆ. ಹೀಗಾಗಿ, ದ್ವೇಶದ ಹಿನ್ನೆಲೆಯಲ್ಲಿ ಮಾಡಿರುವ ಕೃತ್ಯ ಎನ್ನಲಾಗದು ಎಂದು ಗ್ರಾಮಸ್ಥರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಘಟನೆ ಸಂಬAಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.