News

ಕಾಡಾನೆಗಳ ಕಾಲ ಕೆಳಗೆ ಸಿಲುಕಿ ನಲುಗುತ್ತಿದೆ ಕೋಲಾರ ಜಿಲ್ಲೆಯ ಕೃಷಿಕರ ಭವಿಷ್ಯ!

02 August, 2021 5:17 PM IST By:
ಆನೆಗಳ ದಾಳಿ (ಸಾಂದರ್ಭಿಕ ಚಿತ್ರ).

‘ಜುಲೈ ತಿಂಗಳಲ್ಲೇ ಮೆಲಿಂದ ಮೇಲೆ ಮೂರು ಬಾರಿ ಆನೆಗಳು ದಾಳಿ ಮಾಡಿವೆ. ನಾನು ಎರಡೂವರೆ ಎಕರೆಯಲ್ಲಿ ಬಾಳೆ ಬೆಳೆದಿದ್ದೇನೆ. ಇದುವರೆಗೆ ಗೊನೆ ಬಿಟ್ಟಿದ್ದ 1000 ಬಾಳೆ ಗಿಡಗಳು ಆನೆ ದಾಳಿಯಿಂದಾಗಿ ನೆಲ ಕಚ್ಚಿವೆ. ಬಹುತೇಕ ಎರಡೂವರೆ ಎಕರೆ ತೋಟವೇ ನಿರ್ನಾಮವಾಗಿದೆ. ಜುಲೈ 7ರಂದು ಮೊದಲ ಬಾರಿ ತೋಟದ ಮೆಲೆ ದಾಳಿ ಮಾಡಿದ್ದ ಕಾಡಾನೆಗಳ ಹಿಂಡು ಮತ್ತೆ ಜುಲೈ 15ರಂದು ದಾಳಿ ಮಾಡಿ ಅರ್ಧ ತೋಟ ಹಾಳುಮಾಡಿತ್ತು. ಈಗ ಎರಡು ದಿನಗಳ ಹಿಂದೆ, ಜುಲೈ 31ರಂದು ಮತ್ತೆ ತೋಟಕ್ಕೆ ನುಗ್ಗಿ ಇಡೀ ತೋಟವನ್ನು ಹಾಳುಗೆಡವಿವೆ. ಹೀಗಾದರೆ ನಮ್ಮ ಮುಂದಿನ ಜೀವನ ಗತಿಯೇನು?’

ಹೀಗೆ  ಪ್ರಶ್ನಿಸಿದವರು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕಾಮಸಮುದ್ರಂ ಹೋಬಳಿಯ ಬತ್ತಲಹಳ್ಳಿ ಗ್ರಾಮದ ಯುವ ರೈತ ಸುಬ್ರಮಣಿ ಬಿ.ಎಂ ಅವರು. ಎರಡೂವರೆ ಎಕರೆಯಲ್ಲಿ ಬೆಳೆಸಿರುವ ಏಲಕ್ಕಿ ಹಾಗೂ ಪಚ್ಚಬಾಳೆ ಗಿಡಗಳು ಒಳ್ಳೆಯ ಗೊನೆ ಬಿಟ್ಟಿದ್ದವು. ಕಳೆದ ಬಾರಿ ಲಾಕ್‌ಡೌನ್ ವೇಳೆ ಟೊಮೇಟೊ ಬೆಳೆದು 1.50 ಲಕ್ಷ ರೂ. ನಷ್ಟ ಮಾಡಿಕೊಂಡಿರುವ ಸುಬ್ರಮಣಿ, ಈ ಬಾರಿ ಬಾಳೆ ಫಸಲಿನಲ್ಲಿ ಆ ನಷ್ಟ ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ, ಕಟಾವು ಹಂತಕ್ಕೆ ಬಂದಿದ್ದ ಬಾಳೆ ಗೊನೆಗಳು ಆನೆಗಳ ಕಾಲ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿವೆ. ಗಜಪಡೆಯ ಸತತ ದಾಳಿಯಿಂದಾಗಿ ಗೊನೆ ಬಿಟ್ಟಿದ್ದ 500ಕ್ಕೂ ಹೆಚ್ಚು ಏಲಕ್ಕಿ ಬಾಳೆ ಮತ್ತು 500ಕ್ಕೂ ಅಧಿಕ ಪಚ್ಚಬಾಳೆ ಗಿಡಗಳು ನೆಲಸಮವಾಗಿದ್ದು, ಕನಿಷ್ಠ 5 ಲಕ್ಷ ರೂ. ನಷ್ಟವಾಗಿದೆ.

ಗಿಡಕ್ಕೆ 69 ರೂ. ಪರಿಹಾರ

‘ಬೆಳೆ ಹಾನಿಗೆ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಒಂದು ಗಿಡಕ್ಕೆ 69 ರೂ. ಪರಿಹಾರ ನೀಡುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಏಲಕ್ಕಿ ಬಾಳೆಗೆ 40 ರೂ. ಬೆಲೆ ಇದೆ. ಒಂದು ಗೊನೆ ಕನಿಷ್ಠ 15 ಕೆ.ಜಿ. ತೂಗಲಿದ್ದು, ಒಂದು ಗಿಡದಿಂದ ಸರಾಸರಿ 500 ರೂ. ಆದಾಯ ಬರುತ್ತದೆ. ಆದರೆ ಅರಣ್ಯ ಇಲಾಖೆ ನೀಡುತ್ತಿರುವುದು ಬರೀ 69 ರೂ. ನಾವು ಒಂದು ಬಾಳೆ ಸಸಿ ಖರೀದಿಸಿ, ಗುಣಿ ತೆಗಿಸಿ, ಮೂಲ ಗೊಬ್ಬರ ಕೊಡಲು 70 ರೂ.ಗಿಂತ ಹೆಚ್ಚು ಖರ್ಚಾಗುತ್ತದೆ. ಹೀಗಿರುವಾಗ ಈ ಅಲ್ಪ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಅರಣ್ಯಾಧಿಕಾರಿಗಳ ಬಳಿ ನಮ್ಮ ಅಳಲು ತೋಡಿಕೊಂಡರೆ, ಸರ್ಕಾರದಿಂದ ಬರುವುದು ಇಷ್ಟೇ ಪರಿಹಾರ ಎನ್ನುತ್ತಾರೆ. ಅತ್ತ ಆನೆಗಳ ಹಾವಳಿ ತಪ್ಪಿಸಲು ಕ್ರಮ ಕೂಡ ಕೈಗೊಳ್ಳುವುದಿಲ್ಲ. ಮೇಲಿಂದ ಮೇಲೆ ಆನೆಗಳು ದಾಳಿ ನಷ್ಟ ಅನುಭವಿಸುವುದಾದರೆ ನಾವು ಹೊಲದಲ್ಲಿ ಬೆಳೆಗಳನ್ನಾದರೂ ಏಕೆ ಬೆಳೆಯಬೇಕು? ಎಂಬುದು ಸುಬ್ರಮಣಿ ಅವರ ಗಂಭೀರ ಪ್ರಶ್ನೆ.

ಆನೆ ದಾಳಿಗೆ ನೆಲಸಮವಾದ ಸುಬ್ರಮಣಿ ಅವರ ಬಾಳೆ ತೋಟ.

ಸುಬ್ರಮಣಿ ಅವರದ್ದು ಒಂದು ಕಷ್ಟವಾದರೆ, ಅತ್ತ ಮಾಲೂರು ತಾಲೂಕಿನ ದಿನ್ನಹಳ್ಳಿಯ ರೈತ ಶ್ರೀನಿವಾಸ ರೆಡ್ಡಿ ಅವರದ್ದು ಮತ್ತೊಂದು ವ್ಯಥೆ. ‘ಸರಿಯಾಗಿ ಬೆಳೆ ಕೈಗೆ ಬರುವ ಹೊತ್ತಿಗೇ ಹಾಳು ಕಾಡಾನೆಗಳು ದಾಳಿ ಮಾಡಿ ಎಲ್ಲ ಸರ್ವನಾಶ ಮಾಡುತ್ತವೆ. ಒಂದೆರಡು ಬಾರಿ ಆದರೆ, ಹೋಗಲಿ ಮೂಕ ಪ್ರಾಣಿಗಳು ಎಂದು ಸಮ್ಮನಾಗಬಹುದು. ತಿಂಗಳಲ್ಲಿ ಮೂರು ಮೂರು ಬಾರಿ ಹೊಲಗಳ ಮೇಲೆ ದಂಡೆತ್ತಿ ಬರುವ ಆನೆಗಳ ಹಿಂಡು ನಮ್ಮ ನಿದ್ದೆಗೆಡಿಸುತ್ತಿವೆ. ನನ್ನ ಹೆಗಲ ಮೇಲೆ ಈಗಾಗಲೇ ಸಾಕಷ್ಟು ಸಾಲದ ಭಾರವಿದೆ. ಅದರ ನಡುವೆ ಆನೆಗಳು ಹೀಗೆ ಮಾಡಿದರೆ ನಾನು ಸಾಲ ಹೇಗೆ ತೀರಿಸಲಿ?’

ಹೀಗೆ  ಹೇಳುತ್ತಲೇ ಶ್ರೀನಿವಾಸ ರೆಡ್ಡಿ ಭಾವುಕರಾದರು. ಕಳೆದ ವರ್ಷ ಜನವರಿಯಲ್ಲಿ ಇವರ ಕಲ್ಲಂಗಡಿ ತೋಟದ ಮೇಲೆ ದಾಳಿ ಮಾಡಿದ್ದ ಕಾಡಾನೆಗಳು, ಒಂದು ಎಕರೆಯಲ್ಲಿ ಬೆಳೆದಿದ್ದ, ಕಟಾವಿಗೆ ಬಂದ ಕಲ್ಲಂಗಡಿ ಹಣ್ಣುಗಳನ್ನು ಧ್ವಂಸ ಮಾಡಿ ಹೋಗಿದ್ದವು. ಈ ಬಾರಿ ಅವರ ಟೊಮೇಟೊ ಬೆಳೆ ಆನೆಗಳ ಕಾಲ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿದೆ.

ಆಂಧ್ರ, ತಮಿಳುನಾಡಿನ ಆನೆಗಳು

ಕೋಲಾರ ಜಿಲ್ಲೆಯ ರೈತರು ಕಾಡಾನೆಗಳ ಕಾಟದಿಂದ ಅಕ್ಷರಷಃ ಕಂಗೆಟ್ಟು ಹೋಗಿದ್ದಾರೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಗೆ ಹೊಂದಿಕೊAಡಿರುವ ಮಾಲೂರು ಮತ್ತು ಬಂಗಾರ ಪೇಟೆ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಜುಲೈ 31ರಂದು ಕೃಷಿ ಭೂಮಿ, ಹಣ್ಣು, ತರಕಾರಿ ತೋಟಗಳ ಮೇಲೆ ದಾಳಿ ನಡೆಸಿರುವ ಗಜಪಡೆ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ. ತಮಿಳುನಾಡು ಆಂಧ್ರಪ್ರದೇಶದ ಕಾಡುಗಳಿಂದ ರಾಜ್ಯದ ಗಡಿ ಜಿಲ್ಲೆ ಕೋಲಾರವನ್ನು ಪ್ರವೇಶಿಸಿರುವ ಕಾಡಾನೆಗಳ ಉಪಟಳ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಗಡಿಗೆ ಹೊಂದಿಕೊAಡಿರುವ ಗ್ರಾಮಗಳ ರೈತರು ಬೇಸತ್ತು ಹೋಗಿದ್ದು, ಅವುಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ಜನರ ಪ್ರಾಣಕ್ಕೂ ಕಂಟಕ

ಆAಧ್ರಪ್ರದೇಶದ ಗುಡಪಲ್ಲಿ, ವಿ.ಕೋಟಾ, ಕುಪ್ಪಂ, ಬಿಸಾನತ್ತಂ ಮತ್ತು ತಮಿಳುನಾಡಿನ ಕೃಷ್ಣಗಿರಿ, ವ್ಯಾಪನಪಲ್ಲಿ ಅರಣ್ಯ ಪ್ರದೇಶಕ್ಕೆ ಹತ್ತಿರದಲ್ಲಿರುವ ಕೋಲಾರ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕಾಡಾನೆಗಳ ಪುಂಡಾಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಅದರಲ್ಲೂ ಕೃಷ್ಣಗಿರಿ ಅರಣ್ಯದಿಂದ ಮಾಲೂರು ಮತ್ತು ಬಂಗಾರಪೇಟೆ ತಾಲೂಕಿನ ಗಡಿ ಗ್ರಾಮಗಳಿಗೆ ಲಗ್ಗೆಯಿಡುವ ಆನೆಗಳು ಬೆಳೆ ನಾಶ ಮಾಡುವ ಜೊತೆಗೆ, ಜತೆಗೆ ಜನರ ಪ್ರಾಣಕ್ಕೂ ಕಂಟಕವಾಗುತ್ತಿವೆ.

ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ, ಬೂದಿಕೋಟೆ, ಗುಲ್ಲಹಳ್ಳಿ, ಬಲಮಂದೆ, ದೋಣಿಮಡುಗು ಹಾಗೂ ಮಾಲೂರು ತಾಲೂಕಿನ ದಿನ್ನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು ಕಾಡಾನೆಗಳ ಸತತ ಹಾವಳಿಯಿಂದ ತತ್ತರಿಸಿವೆ. ಒಂದು ದಾಳಿಯಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಆನೆಗಳ ಹಿಂಡು ಮತ್ತೆ ದಂಡೆತ್ತಿ ಬಂದು ಕೃಷಿಕರನ್ನು ಕಂಗೆಡಿಸುತ್ತಿವೆ.

‘ಸಾಮಾನ್ಯವಾಗಿ ರಾತ್ರಿ ವೇಳೆ ಹೊಲಗಳ ಮೇಲೆ ದಾಳಿ ಮಾಡುವ ಕಾಡಾನೆಗಳು, ಹಿಂಡು ಹಿಂಡಾಗಿ ಬರುತ್ತವೆ. ಒಂದು ಹಿಂಡಿನಲ್ಲಿ ಏನಿಲ್ಲವೆಂದರೂ ಐದಾರು ಆನೆಗಳು ಇರುತ್ತವೆ. ಇಂತಹ ಎರಡು ಹಿಂಡು ಆನೆಗಳು ಒಂದೇ ರಾತ್ರಿಗೆ ನೂರಾರು ಎಕರೆ ಕೃಷಿ ಬೆಳೆಗಳನ್ನು ತುಳಿದು ಹಾಳು ಮಾಡುತ್ತವೆ. ವಿಷಯ ಗೊತ್ತಾಗಿ ಅವುಗಳನ್ನು ಹೆದರಿಸಿ, ಓಡಿಸಲು ಹೋದರೆ ನಮ್ಮ ಮೇಲೇ ದಾಳಿ ಮಾಡುತ್ತವೆ. ಹೀಗೇ, ಬೆಳೆ ಉಳಿಸಿಕೊಳ್ಳಲು ಹೋಗಿ ಬಹಳಷ್ಟು ರೈತರು ಪ್ರಾಣ ಕಳೆದುಕೊಂಡಿದ್ದಾರೆ,’ ಎನ್ನುತ್ತಾರೆ ಬಂಗಾರಪೇಟೆ ರೈತ ಕೆ.ಎಲ್.ಹರಿಶಂಕರ್.

ಆಹಾರದ ಕೊರತೆಯಿಂದ ದಾಳಿ

ಮೊದಲೆಲ್ಲಾ ಬೇಸಿಗೆ ವೇಳೆ ಆಹಾರ ನೀರಿನ ಅಭಾವ ಉಂಟಾಗುತ್ತಿದ್ದರಿAದ ಆನೆಗಳು ಊರತ್ತ ಬಂದು ಬೆಳೆಗಳನ್ನು ತಿಂದು ಹೋಗುತ್ತಿದ್ದವು. ಆದರೆ, ಈಗ ಮಳೆಗಾಲ. ಕಾಡಲ್ಲಿ ಸಾಕಷ್ಟು ಮೇವು ಬೆಳೆದಿರುತ್ತದೆ. ಆದಾಗ್ಯೂ ಆನೆಗಳು ಹೊಲ, ತೋಟಗಳ ಮೇಲೆ ಹಾವಳಿ ಇಡುತ್ತಿವೆ. ಅರಣ್ಯ ಅಧಿಕಾರಿಗಳು ಹೇಳುವ ಪ್ರಕಾರ, ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಸಾಕಷ್ಟು ಆಹಾರ ಮತ್ತು ನೀರು ಸಿಗುತ್ತಿಲ್ಲ. ಹೀಗಾಗಿ ಆಹಾರ ಮತ್ತು ನೀರು ಅರಸಿ ಇತ್ತ ವಲಸೆ ಬರುತ್ತಿವೆ. ಮಾರ್ಗ ಮಧ್ಯೆ ಸಿಗುವ ತೋಟ, ಹೊಲಗಳಲ್ಲಿ ಬೆಳೆದ ಬೆಳೆಯನ್ನು ಬೆಕಾದಷ್ಟು ತಿಂದು, ಹಾಳು ಮಾಡುತ್ತಿವೆ. ಅರಣ್ಯ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸಿ ನಾಲ್ಕು ದಿನ ಕಳೆಯುವಷ್ಟರಲ್ಲೇ ಮತ್ತೆ ಬೇರೆ ಭಾಗದಲ್ಲಿ ಆನೆಗಳ ಹಿಂಡು ಪ್ರತ್ಯಕ್ಷವಾಗುತ್ತದೆ. ಕಾಡಿನ ಅಂಚಿನಲ್ಲಿ ಟ್ರಂಚ್ ತೆಗೆದು, ತೋಟಗಳ ತಂತಿ ಬೆಲಿಗೆ ವಿದ್ಯುತ್ ಸಂಪರ್ಕ ನೀಡುವುದೂ ಸೇರಿ ಏನೆಲ್ಲಾ ಪ್ರಯತ್ನ ಮಾಡಿದರೂ ಆನೆಗಳು ಮಾತ್ರ ದಾಳಿ ಮಾಡುವುದನ್ನು ಬಿಟ್ಟಿಲ್ಲ.