News

ಮೊದಲ ಬಾರಿ ಶಾಸಕನಾದ ರೈತನ ಮಗನಿಗೆ ರಾಜಸ್ಥಾನ ಸಿಎಂ ಪಟ್ಟ! ಯಾರಿದು ಭಜನ್‌ಲಾಲ್ ಶರ್ಮಾ?

13 December, 2023 2:15 PM IST By: Maltesh
who is Bhajanlal Sharma

ಸಾಕಷ್ಟು ಕಸರತ್ತುಗಳು ಹಾಗೂ ತೀವ್ರ ಕುತೂಹಲಗಳ ನಡುವೆ ರಾಜಸ್ಥಾನಕ್ಕೆ ನೂತನ ಸಿಎಂ ಆಯ್ಕೆ ಆಗಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ನಿರಂತರ ಸಭೆಗಳ ನಂತರ ರಾಜಸ್ಥಾನ್‌ ಮಾಜಿ ಸಿಎಂ ವಸುಂಧರಾ ರಾಜೇ ಅವರು ಭಜನ್‌ಲಾಲ್ ಶರ್ಮಾ (Bhajanlal Sharma) ಅವರನ್ನು ರಾಜ್ಯದ ನೂತನ ಸಿಎಂ ಎಂದು ಘೋಷಣೆ ಮಾಡಿದ್ದಾರೆ.

ಸಿಎಂ ಜೊತೆ 2 ಡಿಸಿಎಂ ಹುದ್ದೆಗಳನ್ನು ಕೂಡ ಘೋಷಣೆ ಮಾಡಲಾಗಿದ್ದು,  ನೂತನ ಡಿಸಿಎಂಗಳಾಗಿ ಪ್ರೇಮ್​ಚಂದ್​​ ಭೈರ್ವಾ​​ ಮತ್ತು ದಿಯಾ ಕುಮಾರಿ​​​  ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಶಾಸಕರಾಗಿರುವ ಭಜನ್‌ಲಾಲ್ ಶರ್ಮಾ (Bhajanlal Sharma) ಅವರು ಚೊಚ್ಚಲ ಯತ್ನದಲ್ಲೇ ಸಿಎಂ ಗಾದಿ ಏರಿರುವುದು ಇದೀಗ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ.

ರೈತಾಪಿ ಕುಟುಂಬದಿಂದ ಬಂದಿರುವ ಭಜನ್‌ಲಾಲ್ ಶರ್ಮಾ (Bhajanlal Sharma) ಅವರು ರೈತನ ಮಗನಿಗೆ ಬಿಜೆಪಿ ಈ ಹುದ್ದೆಯನ್ನು ನೀಡಿರುವುದದಕ್ಕಾಗಿ ಧನ್ಯವಾದಗಳನ್ನು ಕೂಡ ತಿಳಿಸಿದ್ದಾರೆ. ಸದ್ಯ ಈ ಲೇಖನದಲ್ಲಿ ಭಜನ್‌ಲಾಲ್ ಶರ್ಮಾ (Bhajanlal Sharma)  ಅವರ ಕುರಿತು ಒಂದಿಷ್ಟು ರೋಚಕ ಸಂಗತಿಗಳನ್ನು ತಿಳಿದುಕೊಳ್ಳೋಣ.

ಯಾರೀದು ಭಜನ್‌ಲಾಲ್ ಶರ್ಮಾ (Bhajanlal Sharma)

ಭಜನ್ ಲಾಲ್ ಶರ್ಮಾ ಅವರು ಪ್ರಸ್ತುತವಾಗಿ ರಾಜಸ್ಥಾನದ ಸಂಗನೇರ್ ಕ್ಷೇತ್ರದ ಶಾಸಕರಾಗಿದ್ದಾರೆ. ರಾಜಸ್ಥಾನದ ಭರತ್‌ಪುರ ಜಿಲ್ಲೆಯ ನಡಬೈಯ ಅಟ್ಟಾರಿ ಗ್ರಾಮದಲ್ಲಿ ಜನಿಸಿದ ಇವರು ರಾಜಸ್ಥಾನ ವಿಶ್ವವಿದ್ಯಾನಿಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಾಲ್ಕು ಬಾರಿ ಭಾರತೀಯ ಜನತಾ ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದ ಭಜನ್ ಲಾಲ್ ಶರ್ಮಾ ಅವರು ತಮ್ಮ ರಾಜಕೀಯ ಜೀವನವನ್ನ RSS ಹಾಗೂ ABVP ಯಿಂದ ಆರಂಭಿಸಿದರು. ಇವರ ಕುಟುಂಬ ಸಾಕಷ್ಟು ವರ್ಷಗಳಿಂದ ಕೃಷಿಯಲ್ಲಿ ನಿರತರಾಗಿದ್ದು, ಇವರ ತಂದೆ ಕೂಡ ವೃತ್ತಿಯಿಂದ ಕೃಷಿಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

56 ವರ್ಷದ ಭಜನ್‌ಲಾಲ್ ಶರ್ಮಾ ಆಸ್ತಿ ಎಷ್ಟು?

ಸದ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ಲ್ಲಿನೀಡಿರುವ ಮಾಹಿತಿಯ ಅನುಗುಣವಾಗಿ 1.5 ಕೋಟಿ ರೂಪಾಯಿಗಳನ್ನು ಘೋಷಿಸಿದ್ದಾರೆ. ಇದರಲ್ಲಿ 43.6 ಲಕ್ಷ ಚರ ಆಸ್ತಿ ಮತ್ತು 1 ಕೋಟಿ ಸ್ಥಿರ ಆಸ್ತಿಗಳು ಸೇರಿವೆ. ಇದರಲ್ಲಿ 6.9 ಲಕ್ಷ ಸ್ವಯಂ ಆದಾಯವಿದೆ.

ಭಜನ್‌ಲಾಲ್ ಶರ್ಮಾ RSS ನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಆಪ್ತ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಚುನಾವಣೆಯಲ್ಲಿ 40 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಭೇರಿ ಬಾರಿಸಿದ ಬಳಿಕ ರಾಜಸ್ಥಾನ ಸಿಎಂ ಸ್ಥಾನಕ್ಕೆ ಇವರ ಹೆಸರು ಜೋರಾಗಿಯೇ ಕೇಳಿ ಬಂದಿತ್ತು.  ಸಿಎಂ ರೇಸ್‌ನಲ್ಲಿದ್ದ ಮಾಜಿ ಸಿಎಂ ವಸುಂಧರಾ ರಾಜೇ ಹಾಗೂ ಭಜನ್‌ಲಾಲ್ ಶರ್ಮಾ ನಡುವೆ ಸಿಎಂ ಯಾರು ಎಂಬ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್‌ ಸದ್ಯ ಅಚ್ಚರಿಯ ಉತ್ತರ ನೀಡಿದೆ.