News

ಭಾರತದ ಗ್ರಾಮೀಣ ಆರ್ಥಿಕತೆಗೆ FPO ನೇತೃತ್ವದ ಅಗ್ರಿವೋಲ್ಟಾಯಿಕ್ಸ್‌ನ ಭರವಸೆ

26 March, 2026 4:39 PM IST By: KJ Staff
ಕರ್ನಾಟಕದ ತಿಪಟೂರಿನ ಭಾರತೀಯ ಅಗ್ರೋ ಇಂಡಸ್ಟ್ರೀಸ್ ಫೌಂಡೇಶನ್ ಆವರಣದಲ್ಲಿ ಸ್ಥಾಪಿಸಲಾದ 200 ಕಿಲೋವ್ಯಾಟ್ ಅಗ್ರಿವೋಲ್ಟಾಯಿಕ್ಸ್ ಘಟಕ.

ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಸಮೂಹಾಧಾರಿತ ಉದ್ಯಮಗಳ ಮೂಲಕ ಸಬಲಗೊಳಿಸುವ ಭಾರತದ ಪ್ರಯತ್ನಗಳಲ್ಲಿ ರೈತ ಉತ್ಪಾದಕರ ಸಂಘಟನೆಗಳು (FPOಗಳು) ಪ್ರಮುಖ ಸ್ತಂಭಗಳಾಗಿ ಹೊರಹೊಮ್ಮಿವೆ. ಅವರ ಸಾಮರ್ಥ್ಯವನ್ನು ಗುರುತಿಸಿ, ಭಾರತ ಸರ್ಕಾರವು 2020ರಲ್ಲಿ ‘10,000 ರೈತ ಉತ್ಪಾದಕರ ಸಂಸ್ಥೆಗಳ (FPO) ಸ್ಥಾಪನೆ ಮತ್ತು ಪ್ರೋತ್ಸಾಹ’ ಎಂಬ ಯೋಜನೆಯನ್ನು ಪ್ರಾರಂಭಿಸಿತು. ದೇಶದಾದ್ಯಂತ ರೈತರ ಸಮೂಹಗಳನ್ನು ಸಾಂಸ್ಥಿಕಗೊಳಿಸಿ ಬಲಪಡಿಸುವುದೇ ಇದರ ಉದ್ದೇಶವಾಗಿತ್ತು. 2025ರ ಆರಂಭದಲ್ಲಿ ಈ ಯೋಜನೆ 10,000 FPOಗಳನ್ನು ಸ್ಥಾಪಿಸುವ ಗುರಿಯನ್ನು ಸಾಧಿಸಿತು. ಇದು ದೇಶದಾದ್ಯಂತ ಸಂಘಟಿತ ಕೃಷಿ ಉದ್ಯಮಗಳನ್ನು ವಿಸ್ತರಿಸುವಲ್ಲಿ ಮಹತ್ವದ ಮೈಲುಗಲ್ಲಾಗಿದೆ.

ಇತ್ತೀಚೆಗೆ, 2026ರ ಫೆಬ್ರವರಿಯಲ್ಲಿ ಜರ್ಮನಿಯ ನ್ಯೂರೆಂಬರ್ಗ್‌ನಲ್ಲಿ ನಡೆದ ಜಗತ್ತಿನ ಪ್ರಮುಖ ಸಸ್ಯಹಾರ ಉತ್ಪನ್ನಗಳ ಪ್ರದರ್ಶನ BIOFACH 2026ನಲ್ಲಿ ಭಾರತೀಯ ಪೆವಿಲಿಯನ್‌ನ ಭಾಗವಾಗಿ 67 ಸಹ-ಪ್ರದರ್ಶಕರೊಂದಿಗೆ FPOಗಳು ಭಾಗವಹಿಸಿವೆ. ಇದು ಈ ಕ್ಷೇತ್ರದಲ್ಲಿ ಅವರ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯನ್ನು ತೋರಿಸುತ್ತದೆ.

ಪ್ರಸ್ತುತ ಭಾರತದಲ್ಲಿ ನೋಂದಾಯಿತ FPOಗಳ ಒಟ್ಟು ಸಂಖ್ಯೆ ಸುಮಾರು 18,000 ಆಗಿದೆ. ಇದರಲ್ಲಿ 1,100ಕ್ಕಿಂತ ಹೆಚ್ಚು FPOಗಳು ವಾರ್ಷಿಕ ₹1 ಕೋಟಿಗೂ ಅಧಿಕ ವಹಿವಾಟು ಸಾಧಿಸಿವೆ. ಇದು ಅವರ ಬೆಳೆಯುತ್ತಿರುವ ವಾಣಿಜ್ಯ ಸಾಮರ್ಥ್ಯ ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಪರಿವರ್ತಿಸುವ ಶಕ್ತಿಯನ್ನು ತೋರಿಸುತ್ತದೆ. ಆದಾಗ್ಯೂ, ಅನೇಕ FPOಗಳು ಸ್ಥಿರ ಆದಾಯ ಮೂಲಗಳ ಕೊರತೆಯಿಂದ ಆರ್ಥಿಕ ಒತ್ತಡವನ್ನು ಎದುರಿಸುತ್ತಿವೆ ಅಥವಾ ನಿಷ್ಕ್ರಿಯವಾಗಿವೆ. ಪರಿಣಾಮವಾಗಿ, ಕಾರ್ಯಾಚರಣಾ ವೆಚ್ಚಗಳನ್ನು ಭರಿಸಲು ಹಾಗೂ ಮಾರುಕಟ್ಟೆ ಬದಲಾವಣೆಗಳಿಗೆ ಪ್ರತಿಕ್ರಿಯಿಸಲು ಅವರಿಗೆ ಕಷ್ಟವಾಗುತ್ತಿದೆ. ಇದರಿಂದ ಸ್ಥಗಿತ ಅಥವಾ ಮುಚ್ಚುವ ಪರಿಸ್ಥಿತಿ ಉಂಟಾಗುತ್ತಿದೆ. ಆದಾಯ ಮೂಲಗಳ ವೈವಿಧ್ಯೀಕರಣವು FPOಗಳಿಗೆ ಆರ್ಥಿಕ ಸ್ಥಿರತೆ ಒದಗಿಸಿ ದೀರ್ಘಕಾಲೀನ ಶಾಶ್ವತತೆಯನ್ನು ಖಚಿತಪಡಿಸಲು ಸಹಕಾರಿಯಾಗಬಹುದು.

ಈ ಸಂದರ್ಭದಲ್ಲಿ, ಅಗ್ರಿವೋಲ್ಟಾಯಿಕ್ಸ್—ಅಂದರೆ ಕೃಷಿ ಚಟುವಟಿಕೆಗಳ ಜೊತೆಗೆ ಸೌರ ಫೋಟೋವೋಲ್ಟಾಯಿಕ್ (PV) ವ್ಯವಸ್ಥೆಯನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸುವ ವಿಧಾನ—FPOಗಳನ್ನು ಪುನರುಜ್ಜೀವನಗೊಳಿಸವ ಅವಕಾಶವನ್ನು ನೀಡುತ್ತದೆ. ಕೃಷಿಯನ್ನು ಸೌರ ವಿದ್ಯುತ್ ಉತ್ಪಾದನೆಯೊಂದಿಗೆ ಸಂಯೋಜಿಸುವ ಮೂಲಕ, ಅಗ್ರಿವೋಲ್ಟಾಯಿಕ್ಸ್ ಭೂಮಿಯ ದ್ವಿಬಳಕೆಯನ್ನು ಸಾಧ್ಯವಾಗಿಸಿ ಆಹಾರ ಮತ್ತು ಹಸಿರು ಶಕ್ತಿಯ ಸಮಕಾಲೀನ ಉತ್ಪಾದನೆಯನ್ನು ಸಾಧ್ಯವಾಗಿಸುತ್ತದೆ

ಗಮನಾರ್ಹವಾಗಿ, FPO ನೇತೃತ್ವದ ಅಗ್ರಿವೋಲ್ಟಾಯಿಕ್ಸ್ ಮಾದರಿಯು ರೈತ ಸಂಘಟನೆಗಳಿಗೆ ಭೂಮಿಯನ್ನು ಬಾಡಿಗೆಗೆ ನೀಡುವುದಕ್ಕಿಂತ ಸ್ವತಃ ಘಟಕದಲ್ಲಿ ಹೂಡಿಕೆ ಮಾಡಿ ಮಾಲೀಕತ್ವ ವಹಿಸುವ ಸಾಮರ್ಥ್ಯವನ್ನು ನೀಡುತ್ತದೆ. ಮಾಲೀಕತ್ವದಿಂದ ವಿದ್ಯುತ್ ಉತ್ಪಾದನೆಯ ಆದಾಯವು ಸಮುದಾಯದೊಳಗೆ ಉಳಿಯುವುದರೊಂದಿಗೆ, FPOಗಳ ಸಂಸ್ಥಾ ಸಾಮರ್ಥ್ಯ ಹಾಗೂ ಆಸ್ತಿಯನ್ನು ಬಲಪಡಿಸುತ್ತದೆ.

ಈ ನಿಟ್ಟಿನಲ್ಲಿ ಪ್ರಮುಖ ಉದಾಹರಣೆ, ಭಾರತದ ಅತಿ ದೊಡ್ಡ FPOವಾದ ಸಹ್ಯಾದ್ರಿ ಫಾರ್ಮ್ಸ್ ಆಗಿದೆ. ಇದು ನಾಶಿಕ್‌ನಲ್ಲಿ ದ್ರಾಕ್ಷಿ ಹಾಗೂ ಸಿಟ್ರಸ್ ಬೆಳೆಗಳ ಮೇಲೆ ಕೇಂದ್ರೀಕರಿಸಿ 250 ಕಿಲೋವ್ಯಾಟ್ ಅಗ್ರಿವೋಲ್ಟಾಯಿಕ್ಸ್ ಘಟಕವನ್ನು ಸ್ಥಾಪಿಸಿದೆ. ‘ಅಗ್ರಿವೋಲ್ಟಾಯಿಕ್ಸ್‌ಗಾಗಿ DeveloPPP’ ಉಪಕ್ರಮದ ಭಾಗವಾಗಿದ್ದ ಈ ಪೈಲಟ್ ಯೋಜನೆ, ಸೌರ PV ಮತ್ತು ತೋಟಗಾರಿಕೆಯನ್ನು ಸಂಯೋಜಿಸುವುದು ಸಾಧ್ಯವಿದ್ದು ಮೌಲ್ಯ ಸರಪಳಿಯನ್ನು ಹೆಚ್ಚಿಸಬಹುದು ಎಂಬುದನ್ನು ತೋರಿಸಿದೆ. ಸಹ್ಯಾದ್ರಿ ಫಾರ್ಮ್ಸ್‌ನ ಅನುಭವವು ಇತರ FPOಗಳಿಗೆ ಮಾರ್ಗದರ್ಶಕ ಮಾದರಿಯಾಗಿದೆ.

FPO ನೇತೃತ್ವದ ಅಗ್ರಿವೋಲ್ಟಾಯಿಕ್ಸ್ ಮಾದರಿಯ ಪ್ರಯೋಜನಗಳು ಅನೇಕ. ವಿದ್ಯುತ್ ಮಾರಾಟದಿಂದ ಸ್ಥಿರ ಆದಾಯ ಲಭಿಸುವುದರ ಜೊತೆಗೆ, ಉತ್ಪಾದಿತ ವಿದ್ಯುತ್ ಅನ್ನು ಕೋಲ್ಡ್ ಸ್ಟೋರೇಜ್, ಒಣಗಿಸುವ ಘಟಕಗಳು, ಚಾಫ್-ಕಟಿಂಗ್, ಮಿಲ್ಲಿಂಗ್ ಮತ್ತು ಪ್ಯಾಕೇಜಿಂಗ್ ಘಟಕಗಳಂತಹ ಬೆಳೆ ಸಂಸ್ಕರಣೆ ಹಾಗೂ ಸಂಗ್ರಹಣಾ ಸೌಲಭ್ಯಗಳನ್ನು ನಡೆಸಲು ಬಳಸಬಹುದು. ಇಂತಹ ಸೌಲಭ್ಯಗಳು ಸಾಮಾನ್ಯವಾಗಿ ಪ್ರತಿ ಯೂನಿಟ್ ಗೆ ₹8–10 ವಾಣಿಜ್ಯ ದರವನ್ನು ಪಾವತಿಸುತ್ತವೆ. ಆದ್ದರಿಂದ

ಕರ್ನಾಟಕದ ಕೋಲಾರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ (CSTEP) ವತಿಯಿಂದ ನಡೆಸಲಾದ ಅಗ್ರಿವೋಲ್ಟಾಯಿಕ್ಸ್ ಕುರಿತ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ.

ಅಗ್ರಿವೋಲ್ಟಾಯಿಕ್ಸ್ ಮೂಲಕ ಉತ್ಪಾದಿತ ವಿದ್ಯುತ್ ಬಳಕೆ ಅತ್ಯಂತ ವೆಚ್ಚ-ಪರಿಣಾಮಕಾರಿ ಆಯ್ಕೆಯಾಗಿದೆ.

ಪಶುಸಂಗೋಪನೆ—ವಿಶೇಷವಾಗಿ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿರುವ FPOಗಳು—ಅಗ್ರಿವೋಲ್ಟಾಯಿಕ್ಸ್ ಸ್ಥಾಪನೆಯಿಂದ ಮಹತ್ತರ ಲಾಭ ಪಡೆಯಬಹುದು. ಸೌರ ಪ್ಯಾನೆಲ್‌ಗಳ ಕೆಳಗೆ ಹುಲ್ಲು ಮತ್ತು ಕಾಳು ಬೆಳೆಗಳನ್ನು ಬೆಳೆಯುವ ಮೂಲಕ ವರ್ಷಪೂರ್ತಿ ಗುಣಮಟ್ಟದ ಮೇವು ಒದಗಿಸಬಹುದು. ಜೊತೆಗೆ ಉತ್ಪಾದಿತ ವಿದ್ಯುತ್ ಅನ್ನು ಬಲ್ಕ್ ಮಿಲ್ಕ್ ಚಿಲ್ಲರ್‌ಗಳು, ಹಾಲು ಪ್ಯಾಕೇಜಿಂಗ್ ಘಟಕಗಳು ಹಾಗೂ ಇತರೆ ಮೌಲ್ಯವರ್ಧಿತ ಸೌಲಭ್ಯಗಳನ್ನು ನಡೆಸಲು ಬಳಸಬಹುದು. ಇದರಿಂದ ವಿದ್ಯುತ್ವೆಚ್ಚ ಕಡಿಮೆಯಾಗಿದ್ದು, ಸಂಪೂರ್ಣ ಹಾಲು ಮೌಲ್ಯ ಸರಪಳಿ ಬಲಗೊಳ್ಳುತ್ತದೆ ಮತ್ತು ರೈತರ ಆದಾಯ ಹೆಚ್ಚಾಗುತ್ತದೆ.

ಯೋಜನೆ ಹಣಕಾಸುಗಾಗಿ, ಒಟ್ಟು ಯೋಜನಾ ವೆಚ್ಚದ ಸುಮಾರು 30% ಅನ್ನು FPOಗಳು ಬಂಡವಾಳ ಒದಗಿಸಬೇಕಾಗುತ್ತದೆ. ಉಳಿದ ಮೊತ್ತವನ್ನು ಪಿಎಂ ಕುಸುಮ್, ಕೃಷಿ ಮೂಲಸೌಕರ್ಯ ನಿಧಿ (AIF), ಮಿಶ್ರ ಹಣಕಾಸು ವ್ಯವಸ್ಥೆಗಳು, ಅನುದಾನಗಳು ಹಾಗೂ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳು ಮತ್ತು ಪರಿಣಾಮ ಹೂಡಿಕೆದಾರರ ಸಹಭಾಗಿತ್ವದ ಮೂಲಕ ಕಡಿಮೆ ಬಡ್ಡಿದರ ಸಾಲಗಳಿಂದ ಸಂಗ್ರಹಿಸಬಹುದು. ಇಂತಹ ವೈವಿಧ್ಯಮಯ ಹಣಕಾಸು ಬೆಂಬಲವು ಅಪಾಯ ನಿರ್ವಹಣೆಯೊಂದಿಗೆ ಅಗತ್ಯ ಬಂಡವಾಳವನ್ನು ಲಭಿಸಲು ಸಹಕಾರಿಯಾಗುತ್ತದೆ.

ಸಮುದಾಯದ ಆಸ್ತಿಗಳ ಮೇಲಿನ ನಿಯಂತ್ರಣವನ್ನು ಬಲಪಡಿಸುವ ಮೂಲಕ, ಈ ಮಾದರಿಯು ಗ್ರಾಮೀಣ ಆರ್ಥಿಕ ಸಬಲೀಕರಣ ಮತ್ತು ನವೀಕರಿಸಬಹುದಾದ ಶಕ್ತಿಯ ಅಳವಡಿಕೆಯನ್ನು ಉತ್ತೇಜಿಸುತ್ತದೆ.

ಈ ಮಾದರಿಯನ್ನು ವಿಸ್ತರಿಸುವಲ್ಲಿ ಸ್ಪಷ್ಟವಾದ ಅವಕಾಶಗಳಿವೆ. ಅರಿಶಿನ, ಆಲೂಗಡ್ಡೆ, ಚಹಾ ಮತ್ತು ದ್ರಾಕ್ಷಿ ಮುಂತಾದ ಬೆಳೆಗಳಿಗೆ ಸಂಬಂಧಿಸಿದ ಮೌಲ್ಯ ಸರಪಳಿಯಲ್ಲಿ ಬೆಳೆ ನಂತರದ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಹೆಚ್ಚಿನ ಸಾಧ್ಯತೆ ಇರುವ FPOಗಳನ್ನು ಗುರಿಯಾಗಿಸಬೇಕು. ಹಾಗೆಯೇ ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶ ಮತ್ತು ಮಳೆಯಾಶ್ರಿತ ಪ್ರದೇಶಗಳ FPOಗಳಿಗೆ ಆದ್ಯತೆ ನೀಡಬೇಕು. 2025ರ ವೇಳೆಗೆ ಭಾರತದಲ್ಲಿ ಸುಮಾರು 800 ಮಹಿಳಾ-ನಿರ್ವಹಿತ FPOಗಳು ಇವೆ—ಅವರಿಗೂ ವಿಶೇಷ ಗಮನ ನೀಡಿ ಒಳಗೊಳ್ಳುವಿಕೆ ಮತ್ತು ಗ್ರಾಮೀಣ ಮಹಿಳಾ ಸಬಲೀಕರಣವನ್ನು ಉತ್ತೇಜಿಸಬೇಕು.

ಮೇಲಿನ ಕ್ರಮಗಳ ಜೊತೆಗೆ, ತಾಂತ್ರಿಕ, ಹಣಕಾಸು ಮತ್ತು ಕಾರ್ಯಾಚರಣಾ ಅಂಶಗಳ ಬಗ್ಗೆ ಎಲ್ಲಾ FPO ಸದಸ್ಯರಿಗೆ ಜಾಗೃತಿ ಅಭಿಯಾನಗಳು, ತರಬೇತಿ ಕಾರ್ಯಾಗಾರಗಳು ಮತ್ತು ಅಧ್ಯಯನ ಪ್ರವಾಸಗಳ ಮೂಲಕ ಮಾಹಿತಿ ನೀಡಿ ಕೌಶಲ್ಯ ವೃದ್ಧಿ ಮಾಡಬೇಕು. ಯೋಜನೆಯ ರೂಪಕ ಮತ್ತು ಜಾರಿಗೆ ಸಂಬಂಧಿಸಿದ ಹಂತಗಳಲ್ಲಿ ತಾಂತ್ರಿಕ ಹಾಗೂ ನಿಯಂತ್ರಣ ಸವಾಲುಗಳನ್ನು ನಿವಾರಿಸಲು ಸಂಸ್ಥಾ ಮಟ್ಟದ ಮಾರ್ಗದರ್ಶನ ಅಗತ್ಯವಿದೆ.

ಭಾರತದ ಹಸಿರುಶಕ್ತಿ ಪರಿವರ್ತನೆಯಲ್ಲಿ ಅಗ್ರಿವೋಲ್ಟಾಯಿಕ್ಸ್‌ಗೆ ಮಹತ್ವದ ಸ್ಥಾನ ನೀಡಲಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಪಿಎಂ ಕುಸುಮ್ 2.0ರ ಭವಿಷ್ಯ ಕುರಿತು ನಡೆದ ಉನ್ನತ ಮಟ್ಟದ ಸಮಾಲೋಚನೆಯಲ್ಲಿ ನವೀಕರಿಸಬಹುದಾದ ಶಕ್ತಿ ಸಚಿವಾಲಯವು ನ್ಯಾಷನಲ್ ಅಗ್ರಿಫೋಟೋವೋಲ್ಟಾಯಿಕ್ಸ್ ಮಿಷನ್ ಅನ್ನು ಪ್ರಸ್ತಾಪಿಸಿತು, ಇದು ಈ ವರ್ಷ ಆರಂಭವಾಗುವ ಸಾಧ್ಯತೆ ಇದೆ. ಇದು FPOಗಳಿಗೆ ಅಗ್ರಿವೋಲ್ಟಾಯಿಕ್ಸ್ ಸಾಮರ್ಥ್ಯವನ್ನು ಬಳಸಿಕೊಂಡು ಸಮುದಾಯ ನೇತೃತ್ವದ, ಹಸಿರು ಮತ್ತು ಶಕ್ತಿಶಾಲಿ ಗ್ರಾಮೀಣ ಆರ್ಥಿಕತೆಯನ್ನು ನಿರ್ಮಿಸಲು ಸೂಕ್ತ ಸಮಯವಾಗಿದೆ.

ಲೇಖಕರು: ಸುಹಾಸ್ ಸತ್ಯಕಿರಣ

ಸುಹಾಸ್ ಸತ್ಯಕಿರಣ ಅವರು ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ (CSTEP)ಯ ನವೀಕರಿಸಬಹುದಾದ ಶಕ್ತಿ ವಿಭಾಗದ ವಿಶ್ಲೇಷಕರಾಗಿದ್ದಾರೆ.