News

ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

26 February, 2019 10:09 PM IST By:
ಬಾಲಕೋಟ್: ಭಾರತದ ವಾಯು ಸೇನೆಯ ದಾಳಿಗೆ ಒಳಗಾದ ಬಾಲಕೋಟ್ ನಿವಾಸಿಗಳು ಇಂದು ಬೆಳಗಿನ ಜಾವದ ಅನುಭವವನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ಯುದ್ಧ ವಿಮಾನಗಳ ಹಾರಾಟದ ಸದ್ದು ಜೋರಾಗಿದ್ದರಿಂದ ಅಲ್ಲಿಯ ನಿವಾಸಿಗಳು ನಿದ್ದೆಯಿಂದ ಎದ್ದು ಭಯದಲ್ಲಿ ಕಾಲ ಕಳೆದಿದ್ದಾರೆ.

ಬೆಳಗಿನ ಜಾವ 3 ಗಂಟೆಗೆ ದೊಡ್ಡ ದೊಡ್ಡ ಸದ್ದುಗಳು ಕೇಳುತ್ತಿತ್ತು. ಮೊದಲಿಗೆ ವಿಮಾನಗಳು ಹಾರಾಟ ಎಂದು ನಿರ್ಲಕ್ಷ್ಯ ಮಾಡಲಾಗಿತ್ತು. ಸಮಯ ಕಳೆದಂತೆ ವಿಮಾನಗಳ ಸದ್ದು ಹೆಚ್ಚಾಗತೊಡಗಿತು. ಭಯದಿಂದ ರಾತ್ರಿ ನಿದ್ದೆಯ ಮಾಡಲಿಲ್ಲ. ಕೊನೆಗೆ ದಿಢೀರ್ ಅಂತಾ ಎಲ್ಲ ಶಬ್ಧ ನಿಂತು ಹೋಯ್ತು. ಬಾಲಕೋಟ್ ಬಳಿಯ ಕಂಗಡ್ ಎಂಬಲ್ಲಿ ಬಾಂಬ್ ಹಾಕಲಾಗಿದೆ ಎಂದು ಅಲ್ಲಿಯ ನಮ್ಮ ಸಂಬಂಧಿಕರು ತಿಳಿಸಿದರು ಎಂದು ಬಾಲಕೋಟ್ ನಿವಾಸಿ ಮೊಹಮ್ಮದ್ ಆದಿಲ್ ಹೇಳಿದ್ದಾರೆ.

ಬೆಳಗ್ಗೆ ನಾವೆಲ್ಲ ಕಂಗಡ್ ಪ್ರದೇಶಕ್ಕೆ ಹೋದಾಗ ಅಲ್ಲಿ ದೊಡ್ಡ ಕಂದಕಗಳು ಉಂಟಾಗಿದ್ದವು. ನಾಲ್ಕೈದು ಮನೆಗಳಿಗೆ ಹಾನಿಯಾಗಿದ್ದು, ಓರ್ವ ಗಾಯಗೊಂಡಿದ್ದನು ಎಂದು ತಾವು ನೋಡಿದ್ದನ್ನು ಮೊಹಮ್ಮದ್ ಆದಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬೆಳಗಿನ ಜಾವ ಮೂರು ಗಂಟೆಯಿಂದ ಆಗಸದಲ್ಲಿ ವಿಮಾನಗಳ ಹಾರಾಟ ಹೆಚ್ಚಾಯ್ತು. ಮೊದಲಿಗೆ ಗುಂಡು ಹಾರುವ ಸದ್ದು ಕೇಳಿತು. ಇದಾದ ಕೆಲವೇ ನಿಮಿಷಗಳಲ್ಲಿ ಮೂರು ಬಾರಿ ದೊಡ್ಡ ಶಬ್ಧ ಕೇಳಿಸಿತು. ಮೂರನೇ ಬಾರಿಗೆ ದೊಡ್ಡ ಸದ್ದು ಕೇಳಿದ ಕೂಡಲೇ ಎಲ್ಲವೂ ಶಾಂತವಾಯ್ತು ಎಂದು ಬಾಲಕೋಟ್‍ನ ಮತ್ತೋರ್ವ ನಿವಾಸಿ ವಾಜಿದ್ ಶಾ ಮಾಧ್ಯಮಕ್ಕೆ ತಿಳಿಸಿದ್ದಾರೆ.