News

ರಾಸುಗಳ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು

16 January, 2023 3:18 PM IST By: Hitesh

ಕೃಷಿ ಜಾಗರಣ ಅಗ್ರಿನ್ಯೂಸ್‌ಗೆ ಸ್ವಾಗತ. ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ.
1. ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ: ಪಿಎಂ ಕಿಸಾನ್ ಮೊತ್ತದಲ್ಲಿ ಹೆಚ್ಚಳ ಸಾಧ್ಯತೆ!
2. ಚುನಾವಣೆ ಇರುವುದರಿಂದ ಈ ಬಾರಿ ವಿಶೇಷ ಬಜೆಟ್
3. ಬಜೆಟ್‌ನಲ್ಲಿ ದುಡಿಯುವ ವರ್ಗಕ್ಕೆ ಹೆಚ್ಚಿನ ಸಹಾಯ: ಸಿ.ಎಂ
4. ರಾಸುಗಳ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು
5. ಮುಂದಿನ 6 ದಿನ ರಾಜ್ಯದಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ
6. ಅಭಿವೃದ್ಧಿಗಾಗಿ ಒಕ್ಕಲೆಬ್ಬಿಸುವುದಿಲ್ಲ ರಾಜ್ಯ ಸರ್ಕಾರದಿಂದ ಸ್ಪಷ್ಟನೆ
7. ಉತ್ತರ ಭಾರತದ ರಾಜ್ಯಗಳಲ್ಲಿ ಚಳಿ ಹೆಚ್ಚಳ; ಜನ ತತ್ತರ!
8. ಮಹದಾಯಿ ಯೋಜನೆ: ಕಾನೂನುಬದ್ಧ ಕಾಮಗಾರಿಗೆ ಆದ್ಯತೆ
9. 2025ರ ವೇಳೆಗೆ ಇಡೀ ದೇಶದಲ್ಲಿ ಡಾಪ್ಲರ್ ಹವಾಮಾನ ರಾಡಾರ್
10. ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಗೆ ಸಿದ್ಧತೆ 

1. ಇತ್ತೀಚಿನ ದಿನಗಳಲ್ಲಿ ಬೀಜ ಮತ್ತು ರಸಗೊಬ್ಬರಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ. ಹೀಗಾಗಿ, ಪಿ.ಎಂ ಕಿಸಾನ್ ಮೊತ್ತ ಹೆಚ್ಚಿಸಬೇಕು ಎಂದು ರೈತರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಸರ್ಕಾರದೊಂದಿಗೆ ಹಲವು ಬಾರಿ ಸಭೆ ನಡೆಸಲಾಗಿದ್ದರೂ, ಇನ್ನೂ ಮೊತ್ತ ಹೆಚ್ಚಿಸಿಲ್ಲ. ಕೇಂದ್ರ ಸರ್ಕಾರವು ಜನವರಿ 14 ರಂದು ಪಿ.ಎಂ ಕಿಸಾನ್‌ನ 13ನೇ ಕಂತು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಫೆಬ್ರವರಿ 1ರಂದು ಕೇಂದ್ರ ಸರ್ಕಾರ ಬಜೆಟ್ ಮಂಡಿಸಲಿದೆ. ಈ ಬಾರಿಯ ಬಜೆಟ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಹೀಗಾಗಿ, ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಕೆಲವು ಅಚ್ಚರಿಗಳನ್ನು ನೀಡಬಹುದು ಎನ್ನಲಾಗಿದೆ. ಅಲ್ಲದೇ ಮುಖ್ಯವಾಗಿ ಪಿಎಂ ಕಿಸಾನ್ ಫಲಾನುಭವಿಗಳಿಗೆ ಮೂರು ಕಂತುಗಳಲ್ಲಿ ನೀಡಲಾದ ಮೊತ್ತವನ್ನು ಇದೀಗ ನಾಲ್ಕು ಕಂತುಗಳಲ್ಲಿ ನೀಡಬಹುದು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಇದರಿಂದ ರೈತರಿಗೆ ಈ ಯೋಜನೆಯಡಿ ಪ್ರತಿ ವರ್ಷ ನೀಡುವ 6 ಸಾವಿರ ರೂಪಾಯಿ ಹೆಚ್ಚುವರಿ ಸಿಗುವ ನಿರೀಕ್ಷೆ ಇದೆ.
-----------------------
2. ಸಚಿವ ಸಂಪುಟದಲ್ಲಿ ವಿಧಾನಸಭೆಯ ಜಂಟಿ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬಜೆಟ್ ಅಧಿವೇಶನವನ್ನು ಫೆಬ್ರವರಿ 17ರಂದು ಮಾಡುವ ಸಾಧ್ಯತೆ ಇದೆ. ಇದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಸಿದ್ಧತೆಗಳನ್ನು ಪ್ರಾರಂಭ ಮಾಡಿದ್ದೇವೆ. ಈಗಾಗಲೇ ಡಿಸೆಂಬರ್  ವೇಳೆಗೆ ರಾಜ್ಯದ ಆದಾಯವು ಮೂರುಪಟ್ಟು ಹೆಚ್ಚಾಗಿದೆ. ಇದನ್ನು ಇನ್ನಷ್ಟು ಹೆಚ್ಚು ಮಾಡಲು ಗುರಿ ಹಾಕಿಕೊಳ್ಳಲು ಸೂಚನೆ ನೀಡಲಾಗಿದೆ. ಜನಪರ ಆಯವ್ಯಯ ನೀಡಲು ತೀರ್ಮಾನ ಮಾಡಲಾಗಿದೆ. ಚುನಾವಣೆ ಇರುವುದರಿಂದ ವಿಶೇಷ ಬಜೆಟ್ ಮಂಡಿಸಲಾಗುವುದು. ಅಸ್ಸಾಂ ಹಾಗೂ ಗುಜರಾತ್ ಸರ್ಕಾರವು ಬಜೆಟ್‌ನಲ್ಲಿ ಕೆಲವು ಘೋಷಣೆಗಳನ್ನು ಮಾಡಿವೆ. ಆದರೆ, ಘೋಷಣೆ ಬೇರೆ ಅನುಷ್ಠಾನ ಬೇರೆ ಎಂದರು.
----------------------- 

-----------------------

3. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ದುಡಿಯುವ ವರ್ಗಕ್ಕೆ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ಪೌಷ್ಟಿಕ ಆಹಾರ ವಿತರಣೆಗೆ ಆದ್ಯತೆ ನೀಡಲಾಗುತ್ತಿದೆ. ಜನಸಾಮಾನ್ಯರ ಆರೋಗ್ಯ, ಶಿಕ್ಷಣ, ಉದ್ಯೋಗ ಆರ್ಥಿಕ ನೆರವು, ದುಡಿಯುವ ವರ್ಗಕ್ಕೆ ಹೆಚ್ಚಿನ ಸಹಾಯ ಯುವಕರಿಗೆ ಮತ್ತು ಸ್ತ್ರೀಯರಿಗೆ ಸಹಾಯ ಮಾಡುವುದು ಇದರಲ್ಲಿ ಪ್ರಮುಖವಾಗಿದೆ. ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುವ ಯೋಜನೆ, ಪ್ರತಿ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಕ್ಕೆ 5 ಲಕ್ಷ ರೂ.ವರೆಗೆ ಸಹಾಯಧನ ನೀಡುವುದು. ಯುವಕರಿಗೆ, ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
-----------------------
4. ರಾಜ್ಯದ ವಿವಿಧೆಡೆ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಕ್ರಾಂತಿಯ ಭಾಗವಾಗಿ ಜಾನುವಾರುಗಳನ್ನು ಕಿಚ್ಚು ಹಾಯಿಸುವುದು ಮಂಡ್ಯದ ಈಗಗೆರೆ, ರಾಮನಗರದ ಕೆಂಪೇಗೌಡನದೊಡ್ಡಿ, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸಬ್ಬನಹಳ್ಳಿ ಸೇರಿದಂತೆ ವಿವಿಧೆಡೆ ಆಚರಿಸಲಾಯಿತು. ಎತ್ತುಗಳಿಗೆ ಸಿಂಗಾರ ಮಾಡಿ ರೈತರು ಸಂಭ್ರಮಿಸಿದರು. ಜಾನುವಾರುಗಳನ್ನು ಕಿಚ್ಚು ಹಾಯಿಸುವುದು ನೋಡುಗರ ಗಮನ ಸೆಳೆಯಿತು. ಉತ್ತರ ಕರ್ನಾಟಕದ ಭಾಗದಲ್ಲಿ ರೈತರು ಮನೆಯಿಂದ ಅಡುಗೆ ಮಾಡಿ ಹೊಲ, ಪ್ರವಾಸಿ ಸ್ಥಳಕ್ಕೆ ತೆರಳಿ ಊಟ ಮಾಡಿ ಸಂಭ್ರಮಿಸಿದರು.
-----------------------
5. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ಅಬ್ಬರ ಜೋರಾಗಿದೆ. ಪ್ರತಿವರ್ಷದ ವಾಡಿಕೆ ಪ್ರಮಾಣಕ್ಕಿಂತಲೂ ಈ ಬಾರಿ ಹೆಚ್ಚು ಚಳಿ ಇದ್ದು, ಮುಂದಿನ ಹಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಇದರ ಮಧ್ಯ ಶೀತಗಾಳಿಯ ಎಚ್ಚರಿಕೆ ಸಹ ನೀಡಲಾಗಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಮುಂದಿನ 6 ದಿನಗಳ ಕಾಲ ಮತ್ತಷ್ಟು ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಭಾನುವಾರದಿಂದ 6 ದಿನಗಳ ಕಾಲ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಂಜು ಕವಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಜನವರಿ 15 ರಿಂದ 19 ರವರೆಗೆ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮುಂತಾದೆಡೆ ಶೀತ ಗಾಳಿ ಹೆಚ್ಚಾಗಲಿದೆ. ಅದೆ ರೀತಿ ಉತ್ತರ ಕರ್ನಾಟಕದಲ್ಲಿ ಕೂಡ ಚಳಿ ಹೆಚ್ಚಾಗುತ್ತಲೇ ಇದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ಬಾಗಲಕೋಟೆ, ವಿಜಯಪುರದಲ್ಲಿ ಭಾರೀ ಚಳಿ ಶುರುವಾಗಿದೆ. ಉತ್ತರ ಕರ್ನಾಟಕದ ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಲಾಗಿದೆ.
----------------------- 

 -----------------------
6. ಅಭಿವೃದ್ಧಿ ಜೊತೆಗೆ ಅರಣ್ಯ ಪ್ರದೇಶ ಹೆಚ್ಚಿಸಿ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು. ವಿಶೇಷವಾಗಿ ಅಭಿವೃದ್ಧಿ ಯೋಜನೆ ನೀಡುವಾಗ ಅರಣ್ಯ ವಾಸಿಗಳ ಸಮಸ್ಯೆ ಎದುರಾಗುತ್ತಿದೆ. ಪ್ರವಾಹ ಉಂಟಾದಾಗ ಅರಣ್ಯವಾಸಿಗಳಿಗೆ ಪರಿಹಾರ ನೀಡಿದ್ದೇವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ತಲ ತಲಾಂತರದಿಂದ ನೆಲೆಸಿ, ಸಾಗುವಳಿ ಮಾಡಿರುವ ಅರಣ್ಯ ವಾಸಿಗಳ ಸಮಸ್ಯೆ ಸುಪ್ರೀಂಕೋರ್ಟ್‌ನಲ್ಲಿ ಇದ್ದರೂ ಕೂಡ ಎಲ್ಲಾ ರಾಜ್ಯಗಳಲ್ಲಿ ಈ ಸಮಸ್ಯೆ ಇದೆ. ಮೂರು ತಲೆಮಾರುಗಳನ್ನು ತೆಗೆದುಕೊಳ್ಳುವ ಬದಲು ಒಂದೇ ತಲೆಮಾರನ್ನು ತೆಗೆದುಕೊಂಡು ಅರಣ್ಯ ವಾಸಿಗಳೆಂದು ನಿರ್ಣಯ ಮಾಡಿ ಹಕ್ಕುಪತ್ರಗಳನ್ನು ನೀಡಲು ವ್ಯವಸ್ಥೆ ಮಾಡಲು ರಾಜ್ಯದ ಅಭಿಪ್ರಾಯವನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಕನ್ನಡ ನಾಡಿನ ಅರಣ್ಯವಾಸಿಗಳಿಗೆ ಯಾವುದೇ ಕಾರಣಕ್ಕೂ ಒಕ್ಕಲು ಎಬ್ಬಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುವುದಿಲ್ಲ. ಈ ಬಗ್ಗೆ ಸ್ಪಷ್ಟವಾಗಿ ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.  
-----------------------
7. ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಚಳಿ ಹೆಚ್ಚಳವಾಗಿದ್ದು, ಜನ ತತ್ತರಿಸುತ್ತಿದ್ದಾರೆ. ಉತ್ತರ ಭಾರತ, ವಾಯವ್ಯ ಭಾರತದ ಬಯಲುಪ್ರದೇಶಗಳಲ್ಲಿ ಶೀತಗಾಳಿ ಹೆಚ್ಚಾಗಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿರುವುದು ವರದಿ ಆಗಿದೆ. ಚಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್, ಹರಿಯಾಣ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿಯಲ್ಲಿ ದಟ್ಟ ಮಂಜು ಕವಿದಿರುವ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಸೋಮವಾರ ಬೆಳಿಗ್ಗೆಯಿಂದಲೇ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ದೆಹಲಿಯ ಹಲವು ಭಾಗಗಳಲ್ಲಿ ತೀವ್ರ ಶೀತಗಾಳಿ ಬೀಸುತ್ತಿದೆ. ಇದು ಜನವರಿ 18ರವರೆಗೂ ಮುಂದುವರೆಯಲಿದ್ದು ಕನಿಷ್ಠ ತಾಪಮಾನವು ಸುಮಾರು 2 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಹಿಮಾಲಯ ಪರ್ವತದ ಪಶ್ಚಿಮ ಭಾಗದಿಂದ ಶೀತ ಮಾರುತಗಳು ಬೀಸುತ್ತಿರುವ ಕಾರಣ ತಾಪಮಾನ ಕಡಿಮೆಯಾಗಲಿದ್ದು, ಸಮತಟ್ಟು ಪ್ರದೇಶಗಳಲ್ಲಿ ಇನ್ನು ಮೂರು ದಿನಗಳು ಈ ಶೀತ ಗಾಳಿ ಬೀಸುವ ಸಾಧ್ಯತೆ ಇದೆ.

-----------------------
8. ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶಿತ ನ್ಯಾಯಾಧಿಕರಣ ಮಂಡಳಿ ರಚನೆಯಾಗಿತ್ತು. ಸುಪ್ರೀಂಕೋರ್ಟ್ ಆದೇಶದ ಮೇಲೆ ನ್ಯಾಯಮಂಡಲಿ ತನ್ನ ಆದೇಶವನ್ನು ನೀಡಿದೆ. ವರದಿಗಳನ್ನು ನೀಡಿದ ನಂತರ  ಅಧಿಸೂಚನೆಯಾಗಿದೆ. ಜಲ ನ್ಯಾಯಾಧಿಕರಣದ ಅಧಿಸೂಚನೆ ಸುಪ್ರೀಂಕೋರ್ಟ್ ಆದೇಶದಷ್ಟೇ ಮಹತ್ವವುಳ್ಳದ್ದು. ಅದರನ್ವಯ ಡಿಪಿಆರ್‌ಗೆ ಅನುಮೋದನೆಯಾಗಿದೆ. ಎಲ್ಲವೂ ಕಾನೂನು ಬದ್ಧವಾಗಿದೆ. ಸುಪ್ರೀಂಕೋರ್ಟ್ ಹಲವಾರು ವರ್ಷ ಪರಿಶೀಲಿಸಿ ಆದೇಶ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ   ಕಾಮಗಾರಿಗಳನ್ನು ಕಾನೂನುಬದ್ಧವಾಗಿ, ಸುಪ್ರೀಂಕೋರ್ಟ್ ಆದೇಶಕ್ಕೆ ಬದ್ಧವಾಗಿ ಕೈಗೊಳ್ಳಲಾಗುವುದು ಎಂದಿದ್ದಾರೆ.
-----------------------

9. ಹವಾಮಾನ ವೈಪರೀತ್ಯವನ್ನು ಹೆಚ್ಚು ನಿಖರವಾಗಿ ಊಹಿಸಲು 2025ರ ವೇಳೆಗೆ ಇಡೀ ದೇಶದಲ್ಲಿ ಡಾಪ್ಲರ್ ಹವಾಮಾನ ರಾಡಾರ್ ಸಂಪರ್ಕಜಾಲ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ದೆಹಲಿಯಲ್ಲಿ ಭಾರತೀಯ ಹವಾಮಾನ ಇಲಾಖೆಯ 148ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2025ರ ವೇಳೆಗೆ 660 ಜಿಲ್ಲಾ ಕೃಷಿ ಹವಾಮಾನ ಘಟಕಗಳನ್ನು ಸ್ಥಾಪಿಸುವ ಗುರಿಯನ್ನು ಭಾರತೀಯ ಹವಾಮಾನ ಇಲಾಖೆ ಹಾಕಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ವಿವಿಧ ತೀವ್ರ ಹವಾಮಾನ ಘಟನೆಗಳ ಕುರಿತು ಮುನ್ಸೂಚನೆ ನೀಡಿದೆ. ನಮ್ಮ ರಾಷ್ಟ್ರೀಯ ಬಳಕೆಯ ಹೊರತಾಗಿ ಇದನ್ನು ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕೆ ಪ್ರತಿ 6 ಗಂಟೆಗಳಿಗೊಮ್ಮೆ ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.  

-----------------------
10.  ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಮಗ್ರವಾಗಿ ಪರಿಸರ ಅಧ್ಯಯನ ಮಾಡುವ ಪರಿಸರ ವಿಶ್ವವಿದ್ಯಾಲಯವನ್ನು ಶಿರಸಿಯಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶಿರಸಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಹಾಗೂ ತೋಟಗಾರಿಕೆ ಕಾಲೇಜುಗಳು ಇಲ್ಲಿರುವುದರಿಂದ ಇವೆರಡನ್ನೂ ಸಂಯೋಜಿಸಿ, ತೋಟಗಾರಿಕೆ, ಕೃಷಿ, ಜೀವ ವೈವಿಧ್ಯತೆ, ವನ್ಯಜೀವಿ ರಕ್ಷಣೆ, ಜನರ ಅಭಿವೃದ್ಧಿ, ಪರಿಸರ ಸಮತೋಲನ ಮಾಡುವ ಹಿನ್ನೆಲೆಯಲ್ಲಿ ಪರಿಸರ ವಿಶ್ವವಿದ್ಯಾಲಯವನ್ನು ಇಲ್ಲಿ ಸ್ಥಾಪಿಸುವುದು ಸೂಕ್ತ ಎಂದು ನಿರ್ಧರಿಸಲಾಗಿದೆ ಎಂದರು. ಪರಿಸರ ವಿಶ್ವವಿದ್ಯಾಲಯದ ಜೊತೆಗೆ ಕಲಾ, ವಿಜ್ಞಾನ, ವಾಣಿಜ್ಯ ಮುಂತಾದ ಸಾಮಾನ್ಯ ಕಲಿಕೆಗೂ ಅವಕಾಶ ಕಲ್ಪಿಸಲಾಗುವುದು. ಸಂಯೋಜಿತ ವಿಶ್ವವಿದ್ಯಾಲಯದ ಇದಾಗಲಿದೆ. ವಿಶೇಷವಾಗಿ ಪರಿಸರದ ಬಗ್ಗೆ ಕೆಲಸ ಮಾಡಲಿದೆ ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ಹೊಸ ಜಿಲ್ಲೆ ರಚನೆ ಬಗ್ಗೆ ಮನವಿ, ಮನವರಿಕೆ ಮಾಡಿಕೊಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಈ ರೀತಿಯ ಬೇಡಿಕೆಗಳಿವೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ಅವಶ್ಯಕತೆ ಇದೆ. ಸಾಧಕ ಬಾಧಕಗಳನ್ನು ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.   

----------------------- 

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ: ಮನೆಯ ಜವಾಬ್ದಾರಿ ನೋಡಿಕೊಳ್ಳುವ ಮಹಿಳೆಯರಿಗೆ ಆರ್ಥಿಕ ನೆರವು!