ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿನ್ಯೂಸ್ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
ಇಂದಿನ ಪ್ರಮುಖ ಸುದ್ದಿಗಳು
1. ಕರ್ನಾಟಕ ಚುನಾವಣೆ: ಡ್ರಗ್ಸ್, ನಗದು, ಗಿಫ್ಟ್ ಸೇರಿ 250 ಕೋಟಿ ರೂ. ವಶ!
2.ರಾಜ್ಯದ ವಿವಿಧೆಡೆ ಮುಂದುವರಿದ ಮಳೆ
3. ರಾಜ್ಯದಲ್ಲಿ ಹೆಚ್ಚಾಗಲಿದೆ ಗರಿಷ್ಠ ತಾಪಮಾನ: 40 ಡಿಗ್ರಿ ದಾಟುವ ಸೂಚನೆ!
4. ಚಿನ್ನದ ಬೆಲೆಯಲ್ಲಿ ಹೆಚ್ಚು ಬದಲಾವಣೆ ಇಲ್ಲ
5. ದೇಶದ ಮೊದಲ ವಾಟರ್ ಮೆಟ್ರೋ ಉದ್ಘಾಟನೆ ನಾಳೆ
6. ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು!
7. ಏಪ್ರಿಲ್30ಕ್ಕೆ ಕೋಲಾರಕ್ಕೆ ಬರಲಿದ್ದಾರೆ ಮೋದಿ
8. ವಂಚನೆ ಉದ್ದೇಶದ ಆ್ಯಪ್‌ಗಳಿಗೆ ಶೀಘ್ರ ಕಡಿವಾಣ: ನಿರ್ಮಲಾ ಸೀತಾರಾಮನ್
ಸುದ್ದಿಗಳ ವಿವರ ಈ ರೀತಿ ಇದೆ.
1. ಈ ಬಾರಿಯ ರಾಜ್ಯ ಚುನಾವಣೆಯಲ್ಲಿ ಅಕ್ರಮ ಹಣ ವಹಿವಾಟಿನ ಕುರಿತು ಹೆಚ್ಚು ವರದಿ ಆಗುತ್ತಿದೆ.
ಅಲ್ಲದೇ ಭಾರೀ ಪ್ರಮಾಣದಲ್ಲಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಭಾನುವಾರದ ವರೆಗೆ ಬರೋಬ್ಬರಿ ಒಟ್ಟು 250 ಕೋಟಿ ರೂಪಾಯಿಗೂ ಹೆಚ್ಚು
ಮೊತ್ತದ ನಗದು ಹಾಗೂ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಆಯೋಗ ವಶಪಡಿಸಿಕೊಂಡಿರುವುದರಲ್ಲಿ 82 ಕೋಟಿ ರೂಪಾಯಿ ನಗದು, 57 ಕೋಟಿ ರೂಪಾಯಿ ಮೌಲ್ಯದ ಮದ್ಯ, 78 ಕೋಟಿ ರೂ.
ಮೊತ್ತದ ಬೆಳ್ಳಿ, 20 ಕೋಟಿ ರೂಪಾಯಿ ಮೊತ್ತದ ಉಡುಗೊರೆಗಳು ಹಾಗೂ ಬರೋಬ್ಬರಿ 17 ಕೋಟಿ ರೂ.
ಮೌಲ್ಯದ ಡ್ರಗ್ಸ್ ಸೇರಿದೆ. ಇನ್ನು ಅಕ್ರಮ ಹಣ ಮತ್ತು ಚುನಾವಣಾ ಅಕ್ರಮಕ್ಕೆ
ಸಂಬಂಧಿಸಿದಂತೆ 1,930 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಚುನಾವಣ ಆಯೋಗದ ಪ್ರಕಟಣೆ ತಿಳಿಸಿದೆ.
------------------
2. ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.
ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇತ್ತು.
ಇನ್ನು ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು,
ಕೋಲಾರ, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಮತ್ತು ರಾತ್ರಿ ವೇಳೆಗೆ ಗುಡುಗು ಸಹಿತ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
------------------
3. ರಾಜ್ಯದಲ್ಲಿ ಮಳೆಯಾಗುತ್ತಿದ್ದರೂ, ಬಿಸಿಲಿನ ಝಳ ಹಾಗೂ ಶಾಖದ ಅಲೆ ಹೆಚ್ಚಾಗಿದೆ.
ಮುಂಬರುವ ದಿನದಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ತಾಪಮಾನವು
ಸುಮಾರು 40 ° C ಗಿಂತ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿ ಮುಂದಿನ ಎರಡು ವಾರಗಳಲ್ಲಿ ಗರಿಷ್ಠ ತಾಪಮಾನವು ಸರಾಸರಿಯಿಂದ ಮೂರು ಡಿಗ್ರಿ ಸೆಲ್ಸಿಯಸ್‌ಗಳಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಲ್ಲಿ ತಾಪಮಾನವು 37ರಿಂದ 39 ಮತ್ತು ಉತ್ತರ ಕರ್ನಾಟಕದಲ್ಲಿ 39ರಿಂದ41 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ.
ಈಗಾಗಲೇ ತೀವ್ರ ಶಾಖದ ಅಲೆ ವಿವಿಧ ಪ್ರದೇಶದಲ್ಲಿ ದಾಖಲಾಗಿದ್ದು, ಇಲ್ಲಿ 38ರಿಂದ41 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ.
ಇನ್ನು ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಮತ್ತು
ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ಮೀರಿದೆ.
ಅಲ್ಲದೇ ಶಾಖದ ಅಲೆ ಹೆಚ್ಚಾಗುವುದರಿಂದ ಮುಂದಿನ ದಿನಗಳಲ್ಲಿ ಕರಾವಳಿ ಪ್ರದೇಶಗಳು
ಸೇರಿದಂತೆ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
------------------
4. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಬದಲಾವಣೆಗಳು ಕಂಡು ಬಂದಿಲ್ಲ.
ಭಾನುವಾರ ಚಿನ್ನದ ಬೆಲೆ 5,575 ರೂ. ಇತ್ತು. ಸೋಮವಾರ 5,572 ರೂಪಾಯಿ ಆಗಿದೆ.
ಇನ್ನು ಪ್ರತಿ 10 ಗ್ರಾಂ ಆಭರಣ ಚಿನ್ನದ ದರವು 55,720 ರೂಪಾಯಿ ಆಗಿದ್ದು, ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ 60,790 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್ ಬಂಗಾರದ ಬೆಲೆ 10ಗ್ರಾಂ 5,750 ಆಗಿದೆ.
ಒಂದು ಗ್ರಾಂ22 ಕ್ಯಾರಟ್ ಆಭರಣ ಚಿನ್ನದ ಬೆಲೆ 5,572 ರೂಪಾಯಿ ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ 6,079 ರೂಪಾಯಿ ಆಗಿದೆ.
------------------
5. ಕೇರಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹಾಗೂ ದೇಶದ ಮೊದಲ ವಾಟರ್ ಮೆಟ್ರೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟನೆ ಮಾಡಲಿದ್ದಾರೆ.
1,137 ಕೋಟಿ ರೂ. ಮೊತ್ತದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಇದು ದೇಶದ ಮೊಟ್ಟ ಮೊದಲ ಜಲಸಾರಿಗೆ ವ್ಯವಸ್ಥೆಯಾಗಿದ್ದು, ಕೊಚ್ಚಿಯ 10 ದ್ವೀಪಗಳಿಗೆ ನಿರಂತರ ಹಾಗೂ ವೇಗದ ಸಾರಿಗೆ ಸಂಪರ್ಕ ಕಲ್ಪಿಸಲಿದೆ.
ಇದು ಸಾಂಪ್ರದಾಯಿಕವಾದ ಜಲ ಮಾರ್ಗಗಳಿಗಿಂತ ಕಡಿಮೆ ಖರ್ಚು ಮತ್ತು ಸಮಯ ಉಳಿತಾಯ ಮಾಡಲಿದೆ ಎನ್ನಲಾಗಿದೆ.
------------------
6 ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಸಾಗಿಸಲಾಗಿದ್ದ ಚೀತಾ ಭಾನುವಾರ ಮೃತಪಟ್ಟಿದೆ.
ಇದಕ್ಕೆ ಉದಯ್ ಎಂದು ಹೆಸರಿಡಲಾಗಿತ್ತು. ಅನಾರೋಗ್ಯಕ್ಕೆ ಒಳಗಾಗಿದ್ದ ಚೀತಾಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ.
ಕಳೆದ ತಿಂಗಳಷ್ಟೇ ಕುನೊ ಉದ್ಯಾನದಲ್ಲಿ ಸಶಾ ಎಂಬ ಚೀತಾ ಮೃತಪಟ್ಟಿದ್ದು, ವರದಿ ಆಗಿತ್ತು.
ಒಂದು ತಿಂಗಳ ಅಂತರದಲ್ಲಿ ಎರಡು ಚೀತಾಗಳು ಮೃತಪಟ್ಟಿದ್ದು, ವಾತಾವರಣಕ್ಕೆ ಹೊಂದಿಕೆ ಆಗದೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
------------------
7. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದು,
ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 30ಕ್ಕೆ ಕೋಲಾರಕ್ಕೆ ಬರಲಿದ್ದಾರೆ.
ಅಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸದ ಎಸ್. ಮುನಿಸ್ವಾಮಿ ತಿಳಿಸಿದ್ದಾರೆ.
ತಾಲ್ಲೂಕಿನ ಕೋಲಾರ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ -75 ಮಾರ್ಗದ ಕೆಂದಟ್ಟಿ ಗೇಟ್ ಬಳಿ ಸಮಾವೇಶನ ಆಯೋಜಿಸಲಾಗುವುದು.
ಸಮಾವೇಶದಲ್ಲಿ ಸಾವಿರಾರು ಜನ ಭಾಗವಹಿಸಲಿದ್ದಾರೆ ಎಂದಿದ್ದಾರೆ.
------------------
8. ವಂಚನೆಯ ಉದ್ದೇಶ ಹೊಂದಿರುವ ಹಣಕಾಸಿನ ಆ್ಯಪ್‌ಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯವು ಆರ್‌ಬಿಐ, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಇನ್ನು ಜನ ಸಹ ಇಂತಹ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು.
ಅಧಿಕೃತವಲ್ಲದ ಆ್ಯಪ್‌ಗಳನ್ನು ಬಳಸಬಾರದು. ಆ್ಯಪ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು.
ಭಾರೀ ಲಾಭದ ಆಮಿಷಗಳಿಗೆ ಮಾರುಹೋಗಬಾರದು ಎಂದು ಎಚ್ಚರಿಸಿದ್ದಾರೆ.
------------------
ಇದು ಇಂದಿನ ಪ್ರಮುಖ ಸುದ್ದಿಗಳು ನಿರಂತರ ಸುದ್ದಿಗಳಿಗಾಗಿ ಕೃಷಿ ಜಾಗರಣ ನೋಡಿ, ಧನ್ಯವಾದ!