ಕರ್ನಾಟಕದ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಆಗಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೀವಾಲಾ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಗುರುವಾರ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿತ್ತು.
ಈ ಸಂಬಂಧ ಮಾಧ್ಯಮಗಳಿಗೆ ಆಮಂತ್ರಣ ಪತ್ರವೂ ತಲುಪಿದೆ ಎನ್ನುವ ಪತ್ರವೂ ವೈರಲ್ ಆಗಿತ್ತು.
ಆದರೆ, ಇದೀಗ ಸುರ್ಜೀವಾಲಾ ಅವರು ಟ್ವೀಸ್ಟ್ ನೀಡಿದ್ದು, ರಾಜ್ಯದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಪುನಃ ಕಗ್ಗಂಟಾಗಿ ಮಾರ್ಪಟ್ಟಿದೆ ಎಂದೇ ವಿಶ್ಲೇಷಿಸಲಾಗಿದೆ.
ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಆಯ್ಕೆಯಾಗಲಿದ್ದಾರೆ ಎನ್ನುವುದನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ಅಲ್ಲದೇ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಹೊರಗೆ ಬಂದಿದ್ದ ಕೆಲವು ಕಾಂಗ್ರೆಸ್ ಮುಖಂಡರು
ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ.
ಇನ್ನು ಕೆಲವೇ ನಿಮಿಷಗಳಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನುವ ಅರ್ಥದಲ್ಲಿಯೇ ಹೇಳಿಕೆಯನ್ನೂ ದೃಶ್ಯಮಾಧ್ಯಮಗಳಿಗೆ ನೀಡಿದ್ದರು.
ಖರ್ಗೆ ನೇತೃತ್ವದಲ್ಲಿ ಮುಂದುವರಿದ ಸಭೆ
ರಾಜ್ಯದ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಇಲ್ಲಿಯ ವರೆಗೆ ಯಾವುದೇ ಅಂತಿಮ ತೀರ್ಮಾನವನ್ನು ಕಾಂಗ್ರೆಸ್ ಹೈಕಮ್ಯಾಂಡ್ ತೆಗೆದುಕೊಂಡಿಲ್ಲ.
ಹೀಗಾಗಿ, ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಸುರ್ಜೀವಾಲಾ ಅವರು ತಿಳಿಸಿದ್ದಾರೆ.
ಅಲ್ಲದೇ ರಾಜ್ಯದ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಸಭೆ ಮುಂದುವರಿದಿದೆ.
ಇನ್ನು ಎರಡು ದಿನದಲ್ಲಿ ಮುಖ್ಯಮಂತ್ರಿ ಹಾಗೂ ಹೊಸ ಸಚಿವ ಸಂಪುಟ ಅಂತಿಮವಾಗಲಿದೆ ಎಂದು ಹೇಳಿದ್ದಾರೆ.
ಮುಂದುವರಿದ ಪೈಪೋಟಿ
ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಅವರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಜಿದ್ದಾಜಿದ್ದಿ ಮುಂದುವರಿದಿದೆ.
ರಾಜ್ಯ ಮುಂದಿನ ಮುಖ್ಯಮಂತ್ರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ,
ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸರಣಿ ಸಭೆಗಳು ಮುಂದುವರಿದಿದೆ.
ಇದೇ ಮೊದಲ ಬಾರಿ ಕಾಂಗ್ರೆಸ್ ಸರ್ಕಾರವು ಬಹುಮತಕ್ಕೂ ಹೆಚ್ಚು ಸ್ಥಾನಗಳನ್ನು ಸ್ವಾತಂತ್ರ್ಯವಾಗಿ ಹಾಗೂ ಏಕಪಕ್ಷವಾಗಿ ಹೊರಹೊಮ್ಮಿದೆ.
ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿರುವುದು ರಾಜ್ಯದ ಜನತೆಯಲ್ಲಿ ನಿರಾಸೆಯನ್ನು ಮೂಡಿಸಿದೆ.
ಕ್ಷಣಕ್ಕೊಂದು ಸುದ್ದಿ ಬರುತ್ತಿರುವುದರಿಂದ ಕಾರ್ಯರ್ತರು ಸಹ ಗೊಂದಲಕ್ಕೀಡಾಗಿದ್ದಾರೆ.