ಸಹಪಾಠಿಗಳನ್ನು ಕೊಂದು ರಕ್ತ ಮಾಂಸ ಸೇವಿಸಿ ಆತ್ಮಹತ್ಯೆ ಪ್ಲ್ಯಾನ್ ಹಾಕಿದ್ದ ಬಾಲೆಯರು
ಬರ್ಟೋ: ತಮ್ಮ ಸಹಪಾಠಿಗಳನ್ನು ಕೊಂದು ಅವರ ರಕ್ತ ಕುಡಿದು, ಮಾಂಸ ತಿನ್ನಲು ಯೋಜನೆ ರೂಪಿಸಿದ್ದ 11 ಮತ್ತು 12 ವರ್ಷದ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿದ್ದಾರೆ. ಅಮೇರಿಕಾದ ಸೆಂಟ್ರಲ್ ಫ್ಲೋರಿಡಾದ ಪ್ರಾಥಮಿಕ ಶಾಲೆಯಲ್ಲಿ ಈ ಬೆಚ್ಚಿಬೀಳಿಸುವ ಪ್ರಸಂಗ ಬಯಲಾಗಿದೆ.
ಮಂಗಳವಾರ ಶಾಲೆಗೆ ಬರುವಾಗ ಹರಿತವಾದ ಚಾಕುವನ್ನು ತೆಗೆದುಕೊಂಡು ಬಂದ ಬಾಲಕಿಯರು ಶಿಕ್ಷಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ನಡೆಯಲಿದ್ದ ಬಹುದೊಡ್ಡ ದುರಂತವೊಂದು ತಪ್ಪಿದೆ. ಮಾಹಿತಿ ಪಡೆದ ಪೊಲೀಸರು ಬಾಲಕಿಯರನ್ನು ವಶಕ್ಕೆ ಪಡೆದುಕೊಂಡು ಬಾಲಾಪರಾಧಿ ಸುಧಾರಣಾ ಗೃಹಕ್ಕೆ ಕಳುಹಿಸಿದ್ದಾರೆ.
ಚಾಕು ಏಕೆ ತಂದಿದ್ದು ಎಂದು ವಿಚಾರಣೆ ನಡೆಸಲಾಗಿ ಬಾಲಕಿಯರು ಪೊಲೀಸರ ಎದೆ ನಡುಗಿಸುವ ಮಾತುಗಳನ್ನಾಡಿದ್ದಾರೆ. ಸಹಪಾಠಿಗಳನ್ನು ಕೊಂದು ರಕ್ತ ಕುಡಿದು ಮಾಂಸ ತಿನ್ನುವುದು. ಬಳಿಕ ನಾವು ಕೂಡ ಚಾಕುವಿನಿಂದ ಚುಚ್ಚಿಕೊಂಡು ಸಾಯುವುದು ನಮ್ಮ ಯೋಜನೆಯಾಗಿತ್ತು ಎಂದಿದ್ದಾರೆ ಬಾಲೆಯರು.
ಬಾತ್ ರೂಮ್‌ನಲ್ಲಿ ಅಡಗಿ ಕುಳಿತು ಚಿಕ್ಕ ವಯಸ್ಸಿನ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿ, ಕುತ್ತಿಗೆ ಕತ್ತರಿಸಿ ಸಾಯಿಸಿ ಅವರ ರಕ್ತ ಕುಡಿದು, ಮಾಂಸ ತಿನ್ನುವುದು. ಬಳಿಕ ನಾವು ಕೂಡ ಚಾಕುವಿನಿಂದ ತಿವಿದುಕೊಂಡು ಸಾವಿಗೆ ಶರಣಾಗುವುದು ನಮ್ಮ ಪ್ಲ್ಯಾನ್ ಆಗಿತ್ತು ಎಂದು ಬಾಲಕಿಯರಲ್ಲಿ ಒಬ್ಬಳು ಬಾಯ್ಬಿಟ್ಟಿದ್ದಾಳೆ.
ಕೊಲೆಗೆ ತಂದಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಬಳಿಕ ಅವರನ್ನು ಬಾಲಾಪರಾಧಿಗಳೋ ಅಥವಾ ವಯಸ್ಕರೋ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತರಗತಿಯಲ್ಲಿ ಗೈರಾಗಿದ್ದ ವಿದ್ಯಾರ್ಥಿಗಳನ್ನು ಹುಡುಕಿದಾಗ ಬಾತ್ ರೂಮ್‌ನಲ್ಲಿ ಪತ್ತೆಯಾಗಿದ್ದಾರೆ. ಹೊರಗೆ ಕರೆದುಕೊಂಡು ಬಂದು ವಿಚಾರಿಸಿದಾಗ ಎಲ್ಲ ಸತ್ಯ ಬಾಯ್ಬಿಟ್ಟಿದ್ದಾರೆ. ಅದೃಷ್ಟವಶಾತ್ ಯಾರೂ ಸಹ ಅವರ ದಾಳಿಗೆ ತುತ್ತಾಗಿಲ್ಲ, ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಕನಿಷ್ಠ ಒಬ್ಬರನ್ನು ಕೊಲ್ಲುವುದು ಅವರ ಗುರಿಯಾಗಿತ್ತು. ಆದರೆ 15 ರಿಂದ 25 ಹುಡುಗಿಯರನ್ನು ಕೊಲ್ಲುವ ಭರವಸೆ ಅವರಿಗಿತ್ತು. ಇದರಿಂದ ತಾವು ಘೋರ ಪಾಪಿಗಳಾಗುತ್ತೇವೆ. ಹೀಗಾಗಿ ತಮ್ಮನ್ನು ತಮ್ಮನ್ನು ತಾವು ಕೊಂದುಕೊಂಡು ನರಕಕ್ಕೆ ಹೋಗುವುದು ಎಂದು ಬಾಲಕಿಯರು ನಿಶ್ಚಯಿಸಿದ್ದರು ಎಂದು ತಿಳಿದು ಬಂದಿದೆ.
ರಜಾ ದಿನಗಳಲ್ಲಿ ಹಾರರ್ ಸಿನಿಮಾ ನೋಡುತ್ತಿದ್ದ ಇವರಿಬ್ಬರು, ಅದರಿಂದ ಪ್ರೇರೇಪಿತರಾಗಿ ಈ ಯೋಜನೆ ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.