News

12 ನಿಮಿಷದಲ್ಲಿ ಯುದ್ಧ ಆಗಿದೆ ಅಂತಾರೆ, ಡೆಡ್‍ಬಾಡಿ ಎಲ್ಲಿವೆ: ಶಾಸಕ ರಾಘವೇಂದ್ರ ಹಿಟ್ನಾಳ್

02 March, 2019 8:18 PM IST By:
ಕೊಪ್ಪಳ: ಬಾಲಕೋಟ್ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಿದ್ದಕ್ಕೆ ಶವಗಳ ಸಾಕ್ಷಿ ಕೇಳಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ದೇಶ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬೆನ್ನಲ್ಲೆ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಇದೇ ಪ್ರಶ್ನೆ ಕೇಳಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ನಗರದಲ್ಲಿ ಮಾತನಾಡಿದ ಶಾಸಕರು, ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಯ ಮೇಲೆ 12 ನಿಮಿಷ ದಾಳಿ ಮಾಡಿವೆ. ಈ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೇಳುತ್ತಿದೆ. ಹಾಗಾದರೆ ಶವಗಳು ಎಲ್ಲಿವೆ? ಉಗ್ರ ಮೃತ ದೇಹವನ್ನು ಯಾರೂ ತೋರಿಸಿಲ್ಲ ಎಂದು ವೈಮಾನಿಕ ಯುದ್ಧಕ್ಕೆ ಸಾಕ್ಷಿ ಕೇಳಿದರು.

ಸೈನಿಕರ ಸಾವಿನ ಹೆಸರಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಏರ್ ಸ್ಟ್ರೈಕ್ ನಿಂದಾಗಿ ರಾಜ್ಯದಲ್ಲಿ 22 ಸೀಟ್ ಗೆಲ್ಲುತ್ತೇವೆ ಎಂದು ಹೇಳಿದ್ದ ದುರಂತ. ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಸೈನಿಕ ಕುಟುಂಬ ಸಂಕಷ್ಟದಲ್ಲಿವೆ. ಆದರೆ ನಮ್ಮ ರಕ್ಷಿಸುವ ಯೋಧರ ಮೇಲೆ ರಾಜಕೀಯ ಮಾಡುವುದು ನಾಚಿಕೆಗೇಡಿತನ. ಕೋಮುಗಲಭೆ, ಗಲಾಟೆ ಮಾಡಸೋದು ಬಿಜೆಪಿಯ ಕೆಲಸ ಎಂದು ಕಿಡಿಕಾರಿದರು.