News

ವಿದ್ಯಾಗಮ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚನೆ-ಸುರೇಶ ಕುಮಾರ

10 October, 2020 3:06 PM IST By:

ರಾಜ್ಯದಲ್ಲಿ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ  ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ ಹೇಳಿದ್ದಾರೆ.

ಕೊರೋನಾ ಕಾರಣದಿಂದಾಗಿ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದೆಂದು ವಿದ್ಯಾಗಮ ಯೋಜನೆ ಆರಂಭಿಸಿತ್ತು. ಆದರೆ ಕೋವಿಡ್ -19 ಕರಿಛಾಯೆ ವಿದ್ಯಾಗಮ ಯೋಜನೆ ಮೇಲೂ ಅವರಿಸಿದೆ. ಕೂಡಲೇ ಈ ಯೋಜನೆಯನ್ನು ಸ್ಥಗಿತಗೊಳಿಸಿ ಶಿಕ್ಷಕರ ಹಾಗೂ ಮಕ್ಕಳ ಜೀವ ಉಳಿಸಬೇಕೆಂದು ರಾಜ್ಯಾದ್ಯಂತ ಒತ್ತಾಯ ಕೇಳಿಬಂದಿತ್ತು.

 ರಾಜ್ಯದಲ್ಲಿ  ಜಾರಿಗೆ  ತಂದಿರುವ ವಿದ್ಯಾಗಮ  ಕಾರ್ಯಕ್ರಮದ ಕುರಿತು  ಕೆಲವು ವಲಯಗಳಲ್ಲಿ  ಅಭಿಪ್ರಾಯಗಳು ವ್ಯಕ್ತವಾಗಿರುವುದರಿಂದ ವಿದ್ಯಾಗಮ‌ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು  ಫೇಸ್ ಬುಕ್ ಖಾತೆಯಲ್ಲಿ ಶಿಕ್ಷಣ ಸಚಿವ ಸುರೇಶಕುಮಾರ ತಿಳಿಸಿದ್ದಾರೆ.

ವಿದ್ಯಾಗಮ ಸಮಾಜದ  ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ  ಮಕ್ಕಳ  ಹಿತವನ್ನು  ಮನದಲ್ಲಿ  ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ. ಆದರೂ ವಿವಿಧ ವಲಯಗಳಿಂದ  ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು  ಸಂಗ್ರಹಿಸಲು  ಉದ್ದೇಶಿಸಿರುವ ಜಿಲ್ಲಾವಾರು ಅಂಕಿ ಅಂಶಗಳ ಸ್ವೀಕಾರ‌ ಹಾಗೂ ಅದರ ಸಮರ್ಪಕ‌ ವಿಶ್ಲೇಷಣೆ‌ ಪೂರ್ಣಗೊಳ್ಳುವವರೆಗೂ ವಿದ್ಯಾಗಮ‌ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ  ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.

ಆರಂಭದಲ್ಲಿ ವಿದ್ಯಾಗಮ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  ಆದರೆ ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪಾಸಿಟಿವ್  ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಸರ್ಕಾರದ ಮೇಲೆ ವಿವಿಧ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗೆ ಈ ವಿದ್ಯಾಗಮ ಯೋಜನೆಯನ್ನು ನಿಲ್ಲಿಸಬೇಕೆಂದು ಒತ್ತಾಯ ಹೆಚ್ಚು ಕೇಳಿ ಬರುತ್ತಿರುವುದರಿಂದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.