ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿರುವುದರಿಂದ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಮಾಡುತ್ತಿರುವ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಜುಲೈ 31ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಶಾಲಾ ಶಿಕ್ಷಕರು, ಸಿಬ್ಬಂದಿಗಳು ವಿವಿಧ ಶೈಕ್ಷಣಿಕ ಚಟುವಟಿಕೆಗೆ ತಯಾರಿ ನಡೆಸುವ ಸಲುವಾಗಿ ಶಾಲೆಗೆ ಆಗಮಿಸಿ, ಕೆಲಸ ಮಾಡುವಂತೆ ರಾಜ್ಯ ಸರ್ಕಾರ ಈ ಮೊದಲು ಸೂಚಿಸಿತ್ತು. ಇಂತಹ ಆದೇಶವನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರ, ಇದೀಗ ಜು.31ರವರೆಗೆ ವರ್ಕ್ ಫ್ರಂ ಹೋಂ ಮೂಲಕ ಕೆಲಸ ಮಾಡುವಂತೆ ಸೂಚಿಸಿದೆ.
ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಆರ್ ಸೋಮಶೇಖರ್, ಕೋವಿಡ್-19 ವೈರಸ್ ಸೋಂಕು ಹೆಚ್ಚು ಹರಡುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜುಲೈ 31ರವರೆಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿಯ ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ಇತರೇ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಿದ್ದಾರೆ.
ಯಾವುದೇ ಮಾಹಿತಿ ನೀಡದೆ ಶಿಕ್ಷಕರು ಕೇಂದ್ರ ಸ್ಥಾನವನ್ನು ಬಿಡಬಾರದು. ಜೊತೆಗೆ ಶಿಕ್ಷಕರನ್ನ ಸಂಪರ್ಕಕ್ಕೆ ಪಡೆಯಲು ದೂರವಾಣಿ ಸಂಖ್ಯೆ, ಇಮೇಲ್ ಐಡಿಯನ್ನು ಶಿಕ್ಷಣ ಇಲಾಖೆಗೆ ನೀಡಬೇಕು. ಅಷ್ಟೇ ಅಲ್ಲದೇ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಶಿಕ್ಷಕರು ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಬಳಸಬೇಕು. ಆನ್‍ಲೈನ್ ತರಗತಿ ನಡೆಸುವ ಶಿಕ್ಷಕರು ಮನೆಯಿಂದಲೇ ತರಗತಿಯನ್ನು ನಡೆಸಬೇಕು. ಇದಲ್ಲದೇ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಬಗ್ಗೆ ಶಿಕ್ಷಕರು ಅಗತ್ಯ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದೆ.