News

ಟಿಸಿಎಸ್ ಟೆಕ್ ಬೈಟ್ಸ್ ವರ್ಚುವಲ್ ರಸಪ್ರಶ್ನೆ ಸ್ಪರ್ಧೆ- ರಾಜ್ಯಮಟ್ಟದ ವಿಜೇತ ವಿದ್ಯಾರ್ಥಿಗಳಿಗೆ 75 ಸಾವಿರ ಬಹುಮಾನ

13 February, 2021 1:45 PM IST By:
cash

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಐಟಿ ಶಿಕ್ಷಣ ಗುಣಮಟ್ಟ ಮಂಡಳಿ  (ಬಿಐಟಿಇಎಸ್) ಜಂಟಿ ಆಶ್ರಯದಲ್ಲಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಿಗಾಗಿ 12ನೇ ಆವೃತ್ತಿಯ ಟಿಸಿಎಸ್ ಟೆಕ್‍ಬೈಟ್ಸ್ ವರ್ಚುವಲ್ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಶಾಖೆ ಮತ್ತು ಸೆಮಿಸ್ಟರ್‍ನ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮುಕ್ತವಾಗಿರಲಿದೆ. ಈ ಬಾರಿಯ ಐಟಿ ಕ್ವಿಜ್ ಸ್ಪರ್ಧೆಯು ಸಂಪೂರ್ಣವಾಗಿ ಡಿಜಿಟಲ್ ಸ್ವರೂಪದಲ್ಲಿ ಇರಲಿದೆ.

ವಿದ್ಯಾರ್ಥಿಗಳ ಜ್ಞಾನದ ಕ್ಷಿತಿಜ ವಿಸ್ತರಿಸುವ ಮತ್ತು ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಆಧಾರಿತ ಉದ್ದಿಮೆಯಲ್ಲಿ ಸಮರ್ಥವಾಗಿ ಸ್ಪರ್ಧಿಸಲು ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುವ ಉದ್ದೇಶ ಹೊಂದಿದೆ. ರಸಪ್ರಶ್ನೆ (ಕ್ವಿಜ್) ಕಾರ್ಯಕ್ರಮದ ಪ್ರಾದೇಶಿಕ ಅಂತಿಮ ಸುತ್ತಿನಲ್ಲಿ ಭಾಗವಹಿಸಲು ಪ್ರತಿಯೊಂದು ಶಿಕ್ಷಣ ಸಂಸ್ಥೆಯು 20 ವಿದ್ಯಾರ್ಥಿಗಳ ತಂಡ ಕಳಿಸಬಹುದಾಗಿದೆ. ಪ್ರವೇಶ ಶುಲ್ಕ ಇರುವುದಿಲ್ಲ. ಶಿಕ್ಷಣ ಸಂಸ್ಥೆಗಳು ಪ್ರವೇಶ ಪತ್ರಗಳನ್ನು ಕಳಿಸಲು ಫೆಬ್ರುವರಿ 25 ಕೊನೆಯ ದಿನ. ಪ್ರವೇಶ ಪತ್ರಗಳನ್ನು: bitesitquiz@gmail.com ವಿಳಾಸಕ್ಕೆ ಕಳಿಸಬೇಕು. ಮಾಹಿತಿಗೆ080-41235889 ಸಂಪರ್ಕಿಸಿ.

ಈ ವರ್ಷ ಆನ್‍ಲೈನ್ ಪರೀಕ್ಷೆ ಮತ್ತು ವರ್ಚುವಲ್ ಕ್ವಿಜ್ ಷೋಗಳು, ವಿದ್ಯಾರ್ಥಿಗಳಿಗೆ ಡಿಜಿಟಲ್ ಅನುಭವ ಒದಗಿಸಲಿವೆ. ಪ್ರಾಥಮಿಕ ಸುತ್ತಿನ ಆನ್‍ಲೈನ್ ಪರೀಕ್ಷೆ ಮಾರ್ಚ್ 8ರಂದು ನಡೆಯಲಿದ್ದು, ಪ್ರಾದೇಶಿಕ ಸುತ್ತಿನ ಸ್ಪರ್ಧೆಗಳು ಮಾರ್ಚ್ 16ರಂದು ನಡೆಯಲಿವೆ. ಪ್ರಾದೇಶಿಕ ಸುತ್ತಿನ ವಿಜೇತರು ಮತ್ತು ರನ್ನರ್ಸ್ ಕ್ರಮವಾಗಿ 12 ಸಾವಿರ ಮತ್ತು 10 ಸಾವಿರ ರೂಪಾಯಿಗಳ ಗಿಫ್ಟ್ ವೋಚರ್ ಪಡೆಯಲಿದ್ದಾರೆ.

ಜತೆಗೆ ಮಾರ್ಚ್ 26ರಂದು ನಡೆಯುವ ರಾಜ್ಯಮಟ್ಟದ ಅಂತಿಮ ಸುತ್ತಿನ ಸ್ಪರ್ಧೆಗೆ ಅರ್ಹತೆ ಪಡೆಯುತ್ತಾರೆ. ರಾಜ್ಯಮಟ್ಟದ ವಿಜೇತರು 75 ಸಾವಿರ ರೂಪಾಯಿ ಹಾಗೂ ರನ್ನರ್ಸ್ 40 ಸಾವಿರ ರೂಪಾಯಿ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ತಡೆಯುವರು ಎಂದು ಪ್ರಕಟಣೆ ಹೇಳಿದೆ. ಹೆಚ್ಚಿನ ಮಾಹಿತಿಗೆ www.bites.org.in ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.