ರಾಜ್ಯದಲ್ಲಿ ತೌಕ್ತೇ ಚಂಡಮಾರುತದ ಪರಿಣಾಮದಿಂದಾಗಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮೇ 19ರವರೆಗೆ ಮಳೆ ಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ಚಂಡಮಾರುತದ ಅಬ್ಬರ ತುಸು ಕಡಿಮೆಯಾಗಿದೆ. ಆದರೂ, ಮುಂದಿನ ಎರಡು ದಿನ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರದವರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಳಿದ ಜಿಲ್ಲೆಗಳಲ್ಲಿ ಮಳೆ ತಗ್ಗಿದ್ದು, ಗುಡುಗು ಮತ್ತು ಸಿಡಿಲು ಹೆಚ್ಚಾಗಿ ಇರಲಿದೆ. ಕೆಲವು ಜಿಲ್ಲೆಗಳಲ್ಲೇ ಮೇ 22 ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತೌಕ್ತೆ ಚಂಡಮಾರುತದ ಪರಿಣಾಮವಾಗಿ ಬೆಂಗಳೂರಿನ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆ ಧಾರಾಕಾರ ಮಳೆಯಾಯಿತು. ಮೇ 21ರವರೆಗೆ ಬೆಂಗಳೂರನಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ:
ಚಂಡಮಾರುತ ಪರಿಣಾಮ ಕರಾವಳಿಯಲ್ಲಿ ಗರಿಷ್ಠ 5.0 ಮೀಟರ್ ಗಳಷ್ಟು ಎತ್ತರದ ಅಲೆಗಳು ಏಳುತ್ತಿದೆ, ವೇಗವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಮೇ 19ರವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ.
ತೌಕ್ತೆ ಅಬ್ಬರ; ಕರ್ನಾಟಕದಲ್ಲಿ 6 ಸಾವು, 121 ಗ್ರಾಮಗಳಲ್ಲಿ ಹಾನಿ
ಕರ್ನಾಟಕದಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ. ಚಂಡಮಾರುತದ ಅಬ್ಬರಕ್ಕೆ ಕರ್ನಾಟಕದಲ್ಲಿ 121 ಗ್ರಾಮಗಳಲ್ಲಿ ಹಾನಿಯಾಗಿದ್ದು, 6 ಜನರು ಮೃತಪಟ್ಟಿದ್ದಾರೆ. ಸೋಮವಾರ ಸಂಜೆಯ ತನಕ 121 ಹಳ್ಳಿಗಳಲ್ಲಿ ಚಂಡಮಾರುತದಿಂದಾಗಿ ಹಾನಿಯಾಗಿದೆ. ಇದುವರೆಗೂ 547 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 290 ಜನರು ಇನ್ನೂ ಸಹ 13 ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಪಡೆದಿದ್ದಾರೆ.
333 ಮನೆ, 644 ವಿದ್ಯುತ್ ಕಂಬ, 147 ಟ್ರಾನ್ಸ್‌ಫರ್ಮರ್, 3,0004.3 ಮೀಟರ್ ಲೈನ್, 57 ಕಿ. ಮೀ. ರಸ್ತೆ, 104 ದೋಣಿಗಳಿಗೆ ಇದುವರೆಗೂ ಹಾನಿಯಾಗಿದೆ. 30 ಹೆಕ್ಟೇರ್ ಕೃಷಿ ಬೆಳೆಗಳು, 2.87 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.