News

ತೌಕ್ತೇ ಚಂಡಮಾರುತದ ಆತಂಕ: ಮೀನುಗಾರಿಕೆಗೆ ತೆರಳಿರುವ ಮೀನುಗಾರರಿಗೆ ಮರಳಲು ಸೂಚನೆ

13 May, 2021 4:13 PM IST By:

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತ ಏಳುವ ಸಾಧ್ಯತೆಗಳಿವೆ. ಹೀಗಾಗಿ ಕೊರೋನಾ ಆತಂಕದ ನಡುವೆ  ಚಂಡಮಾರುತದ ಭಯ ಶುರವಾಗಿದೆ. ಪ್ರಸಕ್ತ ವರ್ಷದ ಮೊದಲ ಚಂಡಮಾರುತ ಇದಾಗಿದೆ. ಈ ಚಂಡಮಾರುತಕ್ಕೆ ತೌಕ್ತೇ ಎಂದು ಹೆಸರಿಡಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

 ಮೇ 16 ರ ಹೊತ್ತಿಗೆ ಪೂರ್ವ ಮಧ್ಯ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿಯಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ.ಭಾರತೀಯ ಮೀನುಗಾರಿಕೆ ದೋಣಿಗಳು ಮೀನುಗಾರಿಕೆಗೆ ಇಳಿಯದಂತೆ ಕೋಸ್ಟ್ ಗಾರ್ಡ್ ಕರ್ನಾಟಕ ಸೂಚನೆ ನೀಡಿದೆ.

ತೌಕ್ತೇ ಚಂಡಮಾರುತದ ಹಿನ್ನೆಲೆಯಲ್ಲಿ  ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದುಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಹೆಚ್ಚು ಮಳೆ ಸುರಿಯುವುದರಿಂದ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ತುಮಕೂರು, ರಾಮನಗರದಲ್ಲಿ ಸಾಧಾರಣ ಮಳೆಯಾಗಲಿದೆ.

ಗಸ್ತು ತಿರುಗುತ್ತಿದ್ದ ಐಸಿಜಿ ಹಡಗುಗಳು ಮತ್ತು ಸಿಜಿ ಡಾರ್ನಿಯರ್ ವಿಮಾನಗಳು ವಿಎಚ್‌ಎಫ್ ಚಾನೆಲ್‌ನಲ್ಲಿ ಸಮುದ್ರದಲ್ಲಿರುವ ಮೀನುಗಾರರಿಗೆ ಹವಾಮಾನ ಎಚ್ಚರಿಕೆ ನೀಡಿ ಹತ್ತಿರದ ತೀರಕ್ಕೆ ಮರಳುತ್ತಿವೆ.

ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಮೇ 20ರಂದು ಗುಜರಾತ್‌ನ ಕಛ್ ಅಥವಾ ಆ ರಾಜ್ಯದ ಉತ್ತರ ಭಾಗ ವನ್ನು ಹಾದು ಒಮಾನ್‌ನತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಪಾಕ್‌ನ ದಕ್ಷಿಣ ಭಾಗದಲ್ಲೂ ಚಂಡಮಾರುತದ ಪ್ರಕೋಪ ಕಾಣಿಸುವ ಸಾಧ್ಯತೆ ಇದೆ. ಚಂಡಮಾರುತದ ಪರಿಣಾಮ ಮಹಾರಾಷ್ಟ್ರ, ಕರ್ನಾಟಕ, ಕೇರಳ, ಗೋವಾದ ಸಮುದ್ರ ತೀರಗಳಲ್ಲಿ ತೀವ್ರ ಗಾಳಿ ಬೀಸುವ ನಿರೀಕ್ಷೆಯಿದೆ.