ರಾಜ್ಯದಲ್ಲಿ ತೌಕ್ತೆ ಚಂಡಮಾರುತದ ಪ್ರಭಾವ ಸೋಮವಾರ ತಗ್ಗಿದ್ದು, ಎರಡು ದಿನಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಬಿರುಗಾಳಿಗೆ 121 ಗ್ರಾಮಗಳಲ್ಲಿ ಹಾನಿಯಾಗಿದೆ. ರಾಜ್ಯದ ಉತ್ತರ ಕನ್ನಡ ಜಿಲ್ಲೆಯ 48 ಗ್ರಾಮಗಳು, ಉಡುಪಿಯ 32 ಗ್ರಾಮಗಳು, ದಕ್ಷಿಣ ಕನ್ನಡ ಜಿಲ್ಲೆಯ 28 ಗ್ರಾಮಗಳು, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಐದು ಗ್ರಾಮಗಳು ಬೆಳಗಾವಿ ಜಿಲ್ಲೆಯ ಎರಡು ಗ್ರಾಮಗಳು, ಹಾಸನ ಜಿಲ್ಲೆಯ ಒಂದು ಗ್ರಾಮ ಮಳೆಯಿಂದ ಹಾನಿ ಸಂಭವಿಸಿದೆ.
ರಾಜ್ಯದಲ್ಲಿ ತೌಕ್ತೆ ಚಂಡಮಾರುತದ ಪರಿಣಾಮ ಕಡಿಮೆಯಾದರೂ ಇಂದು ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉಳಿದೆಡೆ ಮೋಡ ಕವಿದ ವಾತಾವರಣವಿದ್ದು ಚದುರಿದ ಮಳೆಯಾಗಬಹುದು.
ಕಾರವಾರ, ಅಂಕೋಲಾ, ಭಟ್ಕಳ ಮತ್ತು ಮುರ್ಡೇಶ್ವರದಲ್ಲಿ ಸಮುದ್ರ ತೀರದಲ್ಲಿದ್ದ ದೋಣಿಗಳು, ಗೂಡಂಗಡಿಗಳು ಮತ್ತು ಮನೆಗಳಿಗೆ ಹಾನಿಯಾಗಿದೆ.ಮಂಗಳೂರಿನ ಬಳಿ ಹಡಗುಗಳಿಂದ ಕಚ್ಚಾ ತೈಲ ಇಳಿಸುವುದಕ್ಕಾಗಿ ಎಂಆರ್‌ಪಿಎಲ್ ಸಮುದ್ರದ ಅಡಿಯಲ್ಲಿ ಹಾಕಿರುವ ಕೊಳವೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದ್ದ ಎರಡು ಟಗ್‌ಗಳು ಲಂಗರು ಕಡಿದುಕೊಂಡು ಸಮುದ್ರದ ಪಾಲಾಗಿದ್ದವು. ಅದರಲ್ಲಿ ಹ್ಯಾಟ್ ಎಲ್‌ಐ ಹೆಸರಿನ ಟಗ್ ಸಮುದ್ರದಲ್ಲಿ ಮಗುಚಿ ಬಿದ್ದಿದ್ದು, ಇಬ್ಬರು ಕಾರ್ಮಿಕರ ಶವ ಪತ್ತೆಯಾಗಿದೆ.
ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.ನವ ಮಂಗಳೂರು ಬಂದರಿನಲ್ಲಿ ಲಂಗರು ಹಾಕಿದ್ದ ಕೋರಮಂಡಲ್ ಸಪೋರ್ಟರ್ ಹೆಸರಿನ ಮತ್ತೊಂದು ಟಗ್ ಲಂಗರು ಕಡಿದುಕೊಂಡು ಸಮುದ್ರದಲ್ಲಿ ಹೋಗಿದ್ದು, ಮೂಲ್ಕಿ ಬಳಿ ಬಂಡೆಗಳ ನಡುವೆ ಸಿಲುಕಿಕೊಂಡಿದೆ.
ಹೆಲಿಕಾಪ್ಟರ್ ನಿಂದ ರಕ್ಷಣೆ:
ಟಗ್‌ನಲ್ಲಿರುವ ಒಂಬತ್ತು ಕಾರ್ಮಿಕರು ರಕ್ಷಣೆಗಾಗಿ ಮೊರೆ ಇಡುತ್ತಿದ್ದು ಅವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.‘ನೌಕಾ ಪಡೆಯ ಐಎನ್‌ಎಸ್ ವರಾಹ ಹಡಗು ಟಗ್ ಸಮೀಪದಲ್ಲೇ ಇದೆ. ಆದರೆ, ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲು ನೌಕಾಪಡೆ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಮನೆಗಳಿಗೆ ಹೆಚ್ಚು ಹಾನಿ:
ಗೋಡೆ ಕುಸಿತ, ಚಾವಣಿ ಹಾರಿ ಹೋಗಿರುವುದು ಸೇರಿದಂತೆ 220 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅಪಾಯದ ಸ್ಥಳಗಳಲ್ಲಿದ್ದ 516 ಜನರನ್ನು ಸ್ಥಳಾಂತರ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 10 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, 253 ಜನರಿಗೆ ಅಲ್ಲಿ ಆಶ್ರಯ ಕಲ್ಪಿಸಲಾಗಿದೆ’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.