News

ಕಾವೇರಿ ಕೂಗು ಭಾಗ 2ರಲ್ಲಿ 3.5 ಕೋಟಿ ಸಸಿ ನೆಡುವ ಗುರಿ

10 August, 2021 4:36 PM IST By:

ಸದ್ಗುರು ಮಾರ್ಗದರ್ಶನದಲ್ಲಿ ಈಶ ಫೌಂಡೇಷನ್ ಹಮ್ಮಿಕೊಂಡಿರುವ ಕಾವೇರಿ ಕೂಗು ಅಭಾಯನದ ಭಾಗವಾಗಿ ಕರ್ನಾಟಕದ 1785 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಸಂಪರ್ಕ ಅಭಿಯಾನ ನಡೆಸಲಾಗುತ್ತಿದೆ. ಮರ ಆಧಾರಿತ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಸದ್ಗುರು ಸ್ವಾಮಿ ತವಿಸಾ ಅವರು, ಜಿಲ್ಲಾ ಪರಿಷತ್‌ ಸಿಇಒಗಳ ಸಹಾಯದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ (ಆರ್‌ಡಿಪಿಆರ್‌), ಅರಣ್ಯ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಇಲಾಖೆಗಳ ಸಹಯೋಗದಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.

ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಅರಣ್ಯ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಸಹ ಯೋಗದಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಡೆಯುವ ಅಭಿಯಾನ 9 ಜಿಲ್ಲೆಗಳ 57 ತಾಲೂಕುಗಳಲ್ಲಿ ನಡೆಯಲಿದೆ. 24 ಲಕ್ಷಕ್ಕೂ ಅಧಿಕ ರೈತರನ್ನು ತಲುಪಲಿದೆ. ತರಬೇತಿ ಪಡೆದಿರುವ ನೂರಾರು ಕಾವೇರಿ ಕೂಗಿನ ಸ್ವಯಂ ಸೇವಕರು ಗ್ರಾಮಗಳ ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

 '2020ರಲ್ಲಿ ಪ್ರಾರಂಭಿಸಲಾಗಿರುವ 'ಕಾವೇರಿ ಕೂಗು' ಅಭಿಯಾನದ ಅಡಿ ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಅಂದಾಜು 1.10 ಕೋಟಿ ಸಸಿಗಳನ್ನು ನೆಡುವಲ್ಲಿ ಯಶಸ್ವಿಯಾಗಿದ್ದೇವೆ. ಕಾವೇರಿ ಕೊಳ್ಳದ 28 ಜಿಲ್ಲೆಗಳ 189 ತಾಲ್ಲೂಕುಗಳಲ್ಲಿ 33 ಸಾವಿರ ರೈತರು ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ 'ಮರ ಆಧಾರಿತ ಕೃಷಿ' ಅಭಿಯಾನದಡಿ ಐದುಪಟ್ಟು ಅಂದರೆ 5 ಕೋಟಿ ಸಸಿಗಳನ್ನು ನೆಡುವ ಗುರಿ ಇದೆ ಎಂದರು.

'ಮರ ಮಿತ್ರರ' ನೇಮಕ: ಇದಕ್ಕಾಗಿ 890 'ಮರ ಮಿತ್ರ'ರನ್ನು ನೇಮಿಸಲಾಗಿದ್ದು, ಪಂಚಾಯಿತಿ ಮಟ್ಟದಲ್ಲಿ ಇವರು ರೈತರನ್ನು ಉತ್ತೇಜಿಸಲಿದ್ದಾರೆ. ಈಗಾಗಲೇ ವಿವಿಧ ಪಂಚಾಯಿತಿಗಳಲ್ಲಿ ಮರ ಆಧಾರಿತ ಕೃಷಿ ಅಭಿಯಾನಕ್ಕೆ ಸಂಬಂಧಿಸಿದ 1,800 ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಉತ್ತಮ ಸ್ಪಂದನೆಯೂ ದೊರಕಿದೆ. ಈ ಅಭಿಯಾನದಿಂದ ರೈತರ ಆದಾಯ ಶೇ 300ರಿಂದ ಶೇ 800ರಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದರು.

'ಸ್ಟೇಟ್ ಆಫ್ ದಿ ಆರ್ಟ್' ಮೊಬೈಲ್ ಆಯಪ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಹೆಸರು ನೋಂದಾಯಿಸಿಕೊಳ್ಳುವ ರೈತರ ಮನೆ ಬಾಗಿಲಿಗೇ 'ಮರ ಮಿತ್ರ'ರು ಸಸಿಗಳನ್ನು ತಲುಪಿಸಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದರು.

'ಸರ್ಕಾರಿ ಜಾಗದಲ್ಲಿ ಒಂದೇ ಒಂದು ಸಸಿಯನ್ನು ನಾವು ನೆಟ್ಟಿಲ್ಲ. ರೈತರ ಖಾಸಗಿ ಭೂಮಿಯಲ್ಲಿ, ಅವರ ಒಪ್ಪಿಗೆ ಪಡೆದೇ ಸಸಿಗಳನ್ನು ನೆಟ್ಟಿದ್ದೇವೆ. ಅಲ್ಲದೆ, ಅವರಿಗೆ ಯಾವುದೇ ಬಲವಂತ ಮಾಡಿ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮರ ಬೇಸಾಯ ಪದ್ಧತಿ ಮೂಲಕ ರೈತರು ತಮ್ಮ ಆದಾಯವನ್ನು ಮತ್ತಷ್ಟುದ್ವಿಗುಣ ಗೊಳಿಸಿ ಕೊಳ್ಳಬಹುದಾಗಿದೆ. ಹಾಗೆಯೇ ಮಣ್ಣಿನ ಫಲವತ್ತತೆ ಕೂಡ ಹೆಚ್ಚಾಗಲಿದೆ. ಸರ್ಕಾರ ಕೂಡ ಸಸಿ ನಡುವಿಕೆಯನ್ನು ಪ್ರೋತ್ಸಾಹಿಸಲಿದೆ. 2022ರ ವೇಳೆಗೆ ಈ ಅಭಿಯಾನದಡಿ ಮತ್ತಷ್ಟುಸಾಧನೆ ಮಾಡಲಾಗುವುದು ಎಂದು ಹೇಳಿದರು

"ಕಾವೇರಿ ಕೂಗು" ಅಭಿಯಾನದ ಗುರಿ ಏನು?

 ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ನೆಡುವುದು.  ರೈತರ ಆದಾಯವನ್ನು ಐದು ವರ್ಷಗಳಲ್ಲಿ 5-8 ಪಟ್ಟು ಹೆಚ್ಚಿಸುವುದು. ಕಾವೇರಿ ಜಲಾನಯನ ಪ್ರದೇಶದ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು 40% ವೃದ್ಧಿಸುವುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಫೌಂಡೇಶನನ ಯೋಜನಾ ನಿರ್ದೇಶಕ ಅಂಬರೀಶ್‌, ಪ್ರವೀಣಾ ಶ್ರೀಧರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.