ಕಲಬುರಗಿ ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಜೂನ್ 23 ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಹಾಗೂ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರಾದ ದತ್ತಾತ್ರೇಯ ಸಿ. ಪಾಟೀಲ್ (ರೇವೂರ) ಅವರು ಸದರಿ ಪಾಲಿಟೆಕ್ನಿಕ್ ಕಾಲೇಜಿನ 10 ಜನ ಡಿಪ್ಲೋಮಾ ವಿದ್ಯಾರ್ಥಿನಿಯರಿಗೆ ಟ್ಯಾಬ್ಲೆಟ್ ಪಿಸಿ ಗಳನ್ನು ವಿತರಿಸುವ ಮೂಲಕ “ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿ ವಿತರಣಾ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎಂದು ಕಲಬುರಗಿ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.
2020-21 ನೇ ಶೈಕ್ಷಣಿಕ ವರ್ಷದಲ್ಲಿ ಡಿಜಿಟಲ್ ಕಲಿಕೆ ಯೋಜನೆಯನ್ನು 87 ಸರ್ಕಾರಿ ಪಾಲಿಟೆಕ್ನಿಕ್‌ಗಳು ಹಾಗೂ 14 ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳಲ್ಲಿ “ಕರ್ನಾಟಕ ಎಲ್‌ಎಂಎಸ್” ಎಂಬ ಕಲಿಕಾ ನಿರ್ವಹಣಾ ವೇದಿಕೆಯ ಮೂಲಕ ಅನುಷ್ಠಾನಗೊಳಿಸಿದ್ದು, ಡಿಜಿಟಲ್ ಕಲಿಕೆಯು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಪದ್ಧತಿಯ ಕಲಿಕೆಗೆ ಪೂರಕವಾಗಿದ್ದು, ಸಾಂಪ್ರದಾಯಿಕ ಶಿಕ್ಷಣವನ್ನು ಬಲಗೊಳಿಸಿ ಆಧುನಿಕ ಸ್ಪರ್ಶ ನೀಡುವ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮೂಡಿಸಲಿರುವ ಡಿಜಿಟಲ್ ಕಲಿಕಾ ಯೋಜನೆಗೆ ಪ್ರಸ್ತುತ ವಿದ್ಯಾರ್ಥಿನಿಯರಿಗೆ ವಿತರಿಸಲಾಗುತ್ತಿರುವ ಉಚಿತ ಟ್ಯಾಬ್ಲೆಟ್ ಪಿಸಿ ಗಳು ಅತ್ಯಂತ ಸಹಕಾರಿಯಾಗಲಿದೆ. ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಟ್ಯಾಬ್ಲೆಟ್ ಪಿಸಿಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಲಿವೆ.
ಕೋವಿಡ್-19 ಸರ್ಕಾರದ ಮಾರ್ಗಸೂಚಿಗಳನ್ವಯ ನಿಗದಿಪಡಿಸಿದ ಸಂಖ್ಯೆಯಷ್ಟು ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಗಳು ಈ ಟ್ಯಾಬ್ಲೆಟ್ ಪಿಸಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ಬುಧವಾರ ಜೂನ್ 23 ರಂದು ಬೆಳಿಗ್ಗೆ 11.30 ಗಂಟೆಗೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಡಿಜಿಟಲ್ ಕಲಿಕೆಯ ಅಂಗವಾಗಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ಪಿಸಿ ವಿತರಣಾ ಕಾರ್ಯಕ್ರಮ ಹಾಗೂ ಐ.ಸಿ.ಟಿ ಯುಕ್ತ ಸ್ಮಾರ್ಟ್ ತರಗತಿ ಕೊಠಡಿಗಳನ್ನು ಸಾಂಕೇತಿಕವಾಗಿ ಉದ್ಘಾಟಿಸಲಿದ್ದಾರೆ.
ಅಲಗೋಡ ಗ್ರಾಮದಲ್ಲಿ ರೈತರಿಗೆ ತೊಗರಿ ಪ್ರಮಾಣಿಕ ಬೀಜಗಳ ಮಿನಿ ಕಿಟ್ ವಿತರಣೆ
ಪ್ರಸಕ್ತ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ರಾಷ್ಟಿಯ ಆಹಾರ ಭದ್ರತಾ ಯೋಜನೆಯಡಿ ಕಲುಬರಗಿ ತಾಲೂಕಿನ ಅವರಾದ (ಬಿ) ಹೋಬಳಿಯ ಆಲಗೂಡ ಗ್ರಾಮದಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮೂಡ್ ಅವರು ಇತ್ತೀಚೆಗೆ ರೈತರಿಗೆ ತೊಗರಿ ಪ್ರಮಾಣಿತ ಬೀಜಗಳ ಮಿನಿ ಕಿಟ್‌ಗಳನ್ನು ವಿತರಿಸಿದರು.
ನಂತರ ಶಾಸಕರು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕ್ಷೇತ್ರಬದು ಕಾಮಗಾರಿ ವೀಕ್ಷಣೆ ಮಾಡಿದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಇವರಿಂದ ಬೀಜೋಪಚಾರ ಮತ್ತು ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು, ಗ್ರಾಮದ ರೈತರು, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನೀಲಕಂಠ, ಸಹಾಯಕ ಕೃಷಿ ಅಧಿಕಾರಿ ರಾಜೇಂದ್ರ ಕಿಣಗಿ, ಮಲ್ಲಿಕಾರ್ಜುನ, ಬಸವರಾಜ ತಾಂತ್ರಿಕ ಸಹಾಯಕ ಸಿದ್ದಲಿಂಗ ಮತ್ತಿತರು ಉಪಸ್ಥಿತರಿದ್ದರು.