News

ಭತ್ತ, ರಾಗಿ, ಜೋಳ ಬೆಳೆಗಾರರಿಗೆ ಗುಡ್ ನ್ಯೂಸ್- ಬೆಂಬಲ ಬೆಲೆಯಡಿ ಖರೀದಿ ಮಿತಿ ಹೆಚ್ಚಳ

11 February, 2021 9:57 AM IST By:
soreghum

ಭತ್ತ, ರಾಗಿ, ಜೋಳ ಬೆಳೆಗಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು, ಬೆಂಬಲ ಬೆಲೆಯಡಿ ಭತ್ತ, ರಾಗಿ, ಬಿಳಿಜೋಳ  ಖರೀದಿ ಮಿತಿ ಪ್ರಮಾಣವನ್ನು ಹೆಚ್ಚಿಸಿ ಸಂತಸದ ಸುದ್ದಿ ನೀಡಿದೆ. ಪ್ರಸಕ್ತ ಸಾಲಿನಲ್ಲಿ ರೈತರಿಂದ 12.10 ಲಕ್ಷ ಮೆಟ್ರಿಕ್ ಟನ್ ಭತ್ತ, 4 ಲಕ್ಷ ಮೆಟ್ರಿಕ್ ಟನ್ ಬಿಳಿಜೋಳವನ್ನು ಖರೀದಿಸಲು ನೀಡಿರುವ ಆದೇಶಕ್ಕೆ ಸಚಿವ ಸಂಪುಟ ಉಪ ಸಮಿತಿಯು ಅನುಮೋದನೆ ನೀಡಿದೆ. ಈ ಸಂಬಂಧ ಎಕರೆವಾರು ಖರೀದಿ ಮಿತಿ ಮುಂದುವರಿಸಿ ಗರಿಷ್ಠ ಖರೀದಿ ಮಿತಿ ರದ್ದುಪಡಿಸಲಾಗಿದೆ.

ಡಿಸಿಎಂ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಂಬಲ ಬೆಲೆ ನಿಗದಿ ಕುರಿತ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಈ ಸಭೆಯಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಮತ್ತು ಬಿಳಿಜೋಳ ಖರೀದಿ ಪ್ರಮಾಣ ಹೆಚ್ಚಿಸಲು ತೀರ್ಮಾನಿಸಲಾಗಿದೆ.

 ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ, ಸಹಕಾರ ಸಚಿವ ಎಸ್‌.ಟಿ ಸೋಮಶೇಖರ, ಕೃಷಿ ಸಚಿವ ಬಿ.ಸಿ ಪಾಟೀಲ್‌ ಹಾಗೂ ಪಶುಸಂಗೋಪನಾ ಸಚಿವ ಪ್ರಭುಚವಾಣ್‌ ಭಾಗವಹಿಸಿದ್ದರು.
ಈ ಹಿಂದೆ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1.10 ಲಕ್ಷ ಮೆಟ್ರಿಕ್‌ ಟನ್‌ ಭತ್ತ, 3 ಲಕ್ಷ ಮೆ.ಟನ್‌ ರಾಗಿ ಮತ್ತು 4 ಸಾವಿರ ಮೆ. ಟನ್‌ ಬಿಳಿಜೋಳ ಖರೀದಿಗೆ ಕೇಂದ್ರ ಅನುಮತಿ ನೀಡಿತ್ತು. ಈ ಪ್ರಮಾಣ ಹೆಚ್ಚಿಸಬೇಕೆಂಬ ರಾಜ್ಯದ ಪ್ರಸ್ತಾವನೆಗೆ ಸಮ್ಮತಿ ನೀಡಿರುವುದು ರೈತರಿಗೆ ಅನುಕೂಲವಾಗಲಿದೆ. ಈ ಸಾಲಿನಲ್ಲಿ ರೈತರಿಂದ 12.10 ಲಕ್ಷ ಮೆ. ಟನ್‌ ಭತ್ತ, 4 ಲಕ್ಷ ಮೆ. ಟನ್‌ ರಾಗಿ ಮತ್ತು 1 ಲಕ್ಷ ಮೆ. ಟನ್‌ ಬಿಳಿಜೋಳ ಖರೀದಿಸಲು ತೀರ್ಮಾನಿಸಲಾಗಿದೆ.

Red gram

ಎಫ್‌.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಪ್ರತಿ ಕ್ವಿಂಟಾಲಿಗೆ 6 ಸಾವಿರ ರೂ.ನಂತೆ ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್‌, ರಾಯಚೂರು, ಬಳ್ಳಾರಿ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳ ರೈತರಿಂದ ಪ್ರತಿ ಎಕರೆಗೆ 7.5 ಕ್ವಿಂಟಾಲ್‌ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್‌ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ. ತೊಗರಿ ಖರೀದಿ ಕಾಲಾವಧಿಯನ್ನು ಫೆ.28ರವರೆಗೆ ವಿಸ್ತರಿಸಲಾಗಿದೆ. ಬೆಳಗಾವಿ ಮತ್ತು ಚಿತ್ರದುರ್ಗ ಜಿಲ್ಲಾಕಾರ್ಯಪಡೆ ಸಮಿತಿಗಳ ಶಿಫಾರಸು ಮೇರೆಗೆ ಆ ಜಿಲ್ಲೆಗಳಿಂದಲೂ ತೊಗರಿ ಖರೀದಿಗೆ ಅನುಮತಿ ನೀಡಲಾಗಿದೆ. ರೈತರ ನೋಂದಣಿ ಅವಧಿಯನ್ನು ಫೆ.28ರವರೆಗೆ ಹಾಗೂ ಖರೀದಿ ಅವಧಿಯನ್ನು ಮಾ. 14ರವರೆಗೆ ವಿಸ್ತರಿಸಲಾಗಿದೆ.

ಬೆಂಬಲ ಬೆಲೆ:

ಭತ್ತ-ಸಾಮಾನ್ಯ 1868, ಭತ್ತ ಗ್ರೇಡ್-ಎ 1888, ಬಿಳಿಜೋಳ ಹೈಬ್ರಿಡ್-2620, ಬಿಳಿಜೋಳ ಮಾಲ್ದಂಡಿ- 2640,  ರಾಗಿ 3295, ತೊಗರಿ 6000, ಶೇಂಗಾ 5275, ಕಡಲೆ 5100 ಬೆಲೆ ಘೋಷಿಸಲಾಗಿದೆ.

ಎಕರೆಗೆ ಹೆಚಿಸಿದ ಗರಿಷ್ಠ ಮಿತಿ:

ಭತ್ತ ಪ್ರತಿ ಎಕರೆಗೆ 25 ಕ್ವಿಂಟಲ್‌ ನಂತೆ 75 ಕ್ವಿಂಟಲ್ ವರೆಗೆ ಖರೀದಿಸಲಾಗುವುದು. ರಾಗಿ  ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಟ 50 ಕ್ವಿಂಟಲ್ ಖರೀದಿಸಲಾಗುವುದು.  ಬಿಳಿಜೋಳ  ಪ್ರತಿ ಎಕರೆಗೆ15 ಕ್ವಿಂಟಾಲ್‌ನಿಂದ 75 ಕ್ವಿಂಟಲವರೆಗೆ ಖರೀದಿಸಲಾಗುವುದು. ತೊಗರಿ ಪ್ರತಿ ಎಕರೆಗೆ 7.5 ಕ್ವಿಂಟಲ್ ನಂತೆಂ 20 ಕ್ವಿಂಟಲ್ ವರೆಗೆ ಖರೀದಿಸಲಾಗುವುದು.