ಭಾರತ ಕಬ್ಬಿನ ಕಣಜ. ಪ್ರಪಂಚದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶಗಳಲ್ಲಿ ಭಾರತಕ್ಕೆ ಅಗ್ರ ಸ್ಥಾನವಿದೆ. ಹಾಗೇ ಸಕ್ಕರೆ ಉತ್ಪಾದನೆಯಲ್ಲೂ ಭಾರತ ಮೇಲುಗೈ ಸಾಧಿಸಿದೆ. ಜಗತ್ತಿನ ಒಟ್ಟಾರೆ ಸಕ್ಕರೆ ಉತ್ಪಾದನೆಗೆ ಶೇ.18ರಷ್ಟು ಕೊಡುಗೆ ನೀಡುತ್ತಿರುವ ಭಾರತದ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಬ್ರೆಜಿಲ್ ದೇಶವು ವಾರ್ಷಿಕ ಸುಮಾರು 3.7 ಕೋಟಿ ಟನ್ ಸಕ್ಕರೆ ಉತ್ಪಾದಿಸಿದರೆ, ಭಾರತದಲ್ಲಿ ವರ್ಷಕ್ಕೆ ಸುಮಾರು 3.05 ಕೋಟಿ ಟನ್ ಉತ್ಪಾದನೆಯಾಗುತ್ತದೆ. ಹೀಗಾಗಿ ಜಾಗತಿಕ ಸಕ್ಕರೆ ಉತ್ಪಾದನೆ ಭೂಪಟದಲ್ಲಿ ಭಾರತದ ಪ್ರಮುಖ ರಾಷ್ಟçವಾಗಿ ಗುರುತಿಸಿಕೊಳ್ಳುತ್ತದೆ.
ಆದರೆ, ಇತ್ತೀಚೆಗೆ ಒಂದೆಡೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೋಟ್ಯಂತರ ರೂಪಾಯಿ ಬಾಕಿ ಕೊಡಬೇಕಿದೆ ಎಂಬ ಕೂಗು ಬೆಳೆಗಾರರ ವಲಯದಿಂದ ಕೇಳಿ ಬರುತ್ತಿದೆ. ಮತ್ತೊಂದೆಡೆ ಸಕ್ಕರೆ ಕಾರ್ಖಾನೆಗಳಲ್ಲಿ ಅರೆಯಲು ಕಬ್ಬಿನ ಕೊರತೆ ಎದುರಾಗಿದೆ ಎಂಬ ಸುದ್ದಿ ಕೂಡ ಇದೆ. ಇದರ ನಡುವೆಯೇ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಭಾರತದ ಸಕ್ಕರೆ ಉತ್ಪಾದನೆ ಪ್ರಮಾಣದಲ್ಲಿ ಶೇ.15ರಷ್ಟು ಏರಿಕೆ ಕಂಡುಬAದಿದೆ ಎಂಬ ‘ಸಿಹಿ’ ಸುದ್ದಿಯೂ ಸಿಕ್ಕಿದೆ.
ಹೌದು, 2020ರ ಅಕ್ಟೋಬರ್ 1ರಿಂದ 2021ರ ಮೇ 31ರ ನಡುವೆ ಭಾರತದಲ್ಲಿ ಒಟ್ಟು 305.68 ಲಕ್ಷ ಟನ್ (3.05 ಕೋಟಿ ಟನ್) ಸಕ್ಕರೆ ಉತ್ಪಾದನೆ ಮಾಡಲಾಗಿದೆ ಎಂದು ಸ್ವತಃ ಭಾರತದ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್‌ಎಂಎ) ಮಾಹಿತಿ ನೀಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 270.05 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಲಾಗಿತ್ತು. ಈ ಮೂಲಕ ಪ್ರಸಕ್ತ ವರ್ಷ ಸಕ್ಕರೆ ಉತ್ಪಾದನೆಯಲ್ಲಿ 35.63 ಲಕ್ಷ ಟನ್ ಹೆಚ್ಚಳ ಕಂಡುಬAದAತಾಗಿದೆ. ಹಿಂದಿನ ಅಂಕಿ ಸಂಖ್ಯೆಗಳಿಗೆ ಹೋಲಿಸಿ ನೋಡಿದಾಗ ಭಾರತದ ಸಕ್ಕರೆ ಇತಿಹಾಸದಲ್ಲೇ ಇದು ದಾಖಲೆ ಪ್ರಮಾಣದ ಉತ್ಪಾದನೆಯಾಗಿದೆ ಎಂದು ಒಕ್ಕೂಟ ತಿಳಿಸಿದೆ.
ಈ ನಡುವೆ ಭಾರತದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಒಟ್ಟು 7 ಸಕ್ಕರೆ ಕಾರ್ಖಾನೆಗಳು (ಎರಡೂ ರಾಜ್ಯಗಳಿಂದ) ಮಾತ್ರ ಕಬ್ಬು ಅರೆಯುತ್ತಿವೆ. ಒಂದೆಡೆ ದೇಶದಲ್ಲಿ ಸಕ್ಕರೆ ಉತ್ಪಾದನೆ ಪ್ರಮಾಣ ಹೆಚ್ಚಾಗಿದ್ದರೆ ದೇಶದ ಸಕ್ಕರೆ ಕಣಜವಾಗಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಉತ್ಪಾದನೆ ಕಡಿಮೆಯಾಗಿದೆ. ಕಳೆದ ವರ್ಷ 125.46 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದ್ದ ಯುಪಿ, ಈ ಬಾರಿ 110.16 ಟನ್ ಸಕ್ಕರೆ ಉತ್ಪಾದನೆ ಮಾಡಿದ್ದು, 15 ಟನ್ ಇಳಿಕೆ ಕಂಡುಬಂದಿದೆ.
ಕರ್ನಾಟಕದಲ್ಲಿ ‘ಸಿಹಿ’ ಸುದ್ದಿ
ಇನ್ನು ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ, ಕಳೆದ ಬಾರಿಗಿಂತಲೂ 8 ಲಕ್ಷ ಟನ್ ಸಕ್ಕರೆಯನ್ನು ಹೆಚ್ಚುವರಿಯಾಗಿ ಉತ್ಪಾದಿಸಿದೆ. 2019-20ನೇ ಸಾಲಿನಲ್ಲಿ 33.80 ಲಕ್ಷ ಟನ್ ಇದ್ದ ರಾಜ್ಯದ ಸಕ್ಕರೆ ಉತ್ಪಾದನೆ, ಈ ಬಾರಿ 41.67 ಲಕ್ಷ ಟನ್‌ಗೆ ಏರಿಕೆಯಾಗಿದೆ. ಇದೇ ವೇಳೆ ಮಹಾರಾಷ್ಟçದಲ್ಲಿ ಕಬ್ಬು ಮತ್ತು ಸಕ್ಕರೆ ಕ್ರಾಂತಿಯಯೇ ನಡೆಯುತ್ತಿದ್ದು, 2019-20ನೇ ಸಾಲಿನಲ್ಲಿ 61.69 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದ್ದ ನೆರೆ ರಾಜ್ಯ, ಈ ಬಾರಿ ಬರೋಬ್ಬರಿ 106.28 ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ಉತ್ಪಾದನೆ ಸಾಮರ್ಥ್ಯವನ್ನು ದ್ವಿಗುಣಗೊಳಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಸಕ್ಕರೆ ಉತಾದನೆ ವೃದ್ಧಿಸಲು ಮಹತ್ವದ ಕೊಡುಗೆ ನೀಡಿದೆ.
ಡಲ್ ಆದ ರಫ್ತು ಪ್ರಮಾಣ
ಬಂದರುಗಳಲ್ಲಿ ದಾಖಲಾಗಿರುವ ಮಾಹಿತಿ ಮತ್ತು ಮಾರುಕಟ್ಟೆ ಅಂಕಿ-ಅಂಶಗಳ ಪ್ರಕಾರ ಭಾರತ ಕಳೆದ ವರ್ಷ 60 ಲಕ್ಷ ಟನ್ ಸಕ್ಕರೆಯನ್ನು ವಿವಿಧ ದೇಶಗಳಿಗೆ ರಫ್ತು ಮಾಡಿತ್ತು. ಆದರೆ, ಈ ಬಾರಿ 58 ಲಕ್ಷ ಟನ್ ಸಕ್ಕರೆ ರಫ್ತು ಮಾಡಿದ್ದು, ರಫ್ತು ಪ್ರಮಾಣದಲ್ಲಿ 2 ಲಕ್ಷ ಟನ್ ಇಳಿಕೆಯಾಗಿದೆ. ಆದರೆ, “2021ರ ಜನವರಿಯಿಂದ ಮೇ ತಿಂಗಳ ನಡುವೆ 44ರಿಂದ 45 ಲಕ್ಷ ಟನ್ ಸಕ್ಕರೆ ವಿದೇಶಗಳಿಗೆ ರಫ್ತಾಗಿದೆ” ಎಂದು ಐಎಸ್‌ಎಂಎ ಮಾಹಿತಿ ನೀಡಿದೆ.
ಸಹಾಯಧನ ಇಳಿಕೆ
ಭಾರತದಿಂದ ಹೊರದೇಶಗಳಿಗೆ ರಫ್ತಾಗುವ ಪ್ರತಿ ಟನ್ ಸಕ್ಕರೆಗೆ ನೀಡುತ್ತಿದ್ದ 6000 ರೂ. ಸಹಾಯಧನವನ್ನು ಸರ್ಕಾರ 4000 ರೂಪಾಯಿಗೆ ಇಳಿಸಿದೆ. ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಹೇಳಿದೆ. ಈ ನಡುವೆ ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯವಹಾರ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಸರ್ಕಾರದ ಸಹಾಯಧನ ಪಡೆಯದೆಯೇ, ಮುಕ್ತ ಪರವಾನಗಿ (ಓಪನ್ ಜನರಲ್ ಲೈಸೆನ್ಸ್- ಓಜಿಎಲ್) ಮೂಲಕ ಸಕ್ಕರೆ ರಫ್ತು ಮಾಡುತ್ತಿವೆ ಎಂದಿರುವ ಐಎಸ್‌ಎಂಎ, ಸಕ್ಕರೆ ಕಾರ್ಖಾನೆಗಳು ಸರ್ಕಾರದ ಸಹಾಯಧನವನ್ನು ಬಯಸುವುದಿಲ್ಲ ಎಂಬ ಅಂಶವನ್ನು ಪರೋಕ್ಷವಾಗಿ ಬಹಿರಂಗಪಡಿಸಿದೆ.
ಎಥೆನಾಲ್ ಉತ್ಪಾದನೆ ಹೆಚ್ಚಳ
ಇದೇ ವೇಳೆ ದೇಶದಲ್ಲಿ ಕಬ್ಬಿನ ಹಾಲಿನಿಂದ ಎಥೆನಾಲ್ ಉತ್ಪಾದಿಸುವ ಸಾಮರ್ಥ್ಯ ವೃದ್ಧಿಯಾಗಿದೆ. ಈ ಬಾರಿ ಒಟ್ಟು 346.52 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಿದ್ದು, ಈ ಪೈಕಿ 2021ರ ಮೇ 24ರವರೆಗೆ 145.38 ಕೋಟಿ ಲೀಟರ್ ಅನ್ನು ವಿವಿಧ ಉದ್ದೇಶಿತ ಬಳಕೆಗಾಗಿ ಸಾಗಣೆ ಮಾಡಲಾಗಿದೆ.
ಸಕ್ಕರೆ ಬಳಕೆಯಲ್ಲೂ ಭಾರತ ಮುಂದೆ
ಸಕ್ಕರೆ ಉತ್ಪಾದನೆಯಲ್ಲಿ ಮಾತ್ರವಲ್ಲದೆ ಸಕ್ಕರೆ ಬಳಕೆಯಲ್ಲೂ ಭಾರತ ಮುಂದಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಸಕ್ಕರೆ ಸೇವಿಸುವ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ವಿಶ್ವದ ಒಟ್ಟು ಉತ್ಪಾದನೆಯಲ್ಲಿ ಶೇ.15ರಷ್ಟು ಸಕ್ಕರೆ ಭಾರತದ ಜನರಿಗೇ ಬೇಕು. ಅಂದರೆ ಭಾರತದಲ್ಲಿ ಉತ್ಪಾನೆಯಾಗುವ ಒಟ್ಟು ಸಕ್ಕರೆಯಲ್ಲಿ ಶೇ.80ರಷ್ಟು ದೇಶದಲ್ಲೇ ಬಳಕೆಯಾಗುತ್ತದೆ ಎಂಬುದು ವಿಶೇಷ. 2019-20ನೇ ಸಾಲಿನಲ್ಲಿ ಭಾರತೀಯರು 293.50 ಲಕ್ಷ ಟನ್ ಸಕ್ಕರೆ ಸೇವನೆ ಮಾಡಿದ್ದಾರೆ!