News

Delhi ದೆಹಲಿಯಲ್ಲಿ ಉಸಿರುಗಟ್ಟುವ ಪರಿಸ್ಥಿತಿ: 2 ದಿನ ಶಾಲೆಗಳಿಗೆ ರಜೆ!

03 November, 2023 1:55 PM IST By: Hitesh

 ದೆಹಲಿಯಲ್ಲಿ ಇದೀಗ ಅಕ್ಷರಶಃ ಉಸಿರುಗಟ್ಟುವ ಪರಿಸ್ಥಿತಿ ಇದೆ.

ಹೌದು ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ಕಳೆದ ಮೂರು ವರ್ಷಗಳಲ್ಲೇ ಕಳಪೆ ಮಟ್ಟಕ್ಕೆ

ಕುಸಿದಿದ್ದು, ಜನ ಉಸಿರಾಡಲು ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ದೆಹಲಿ, ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ ಸೇರಿದಂತೆ

ವಿವಿಧ ಪ್ರದೇಶಗಳಲ್ಲಿನ ವಾತಾವರಣ ಉಸಿರುಗಟ್ಟಿಸುವ ರೀತಿಯಲ್ಲಿದೆ.  

ಪಂಜಾಬ್ ಮತ್ತು ಹರಿಯಾಣದಲ್ಲಿ ಹೆಚ್ಚುತ್ತಿರುವ ಹುಲ್ಲು ಸುಡುವಿಕೆಯೊಂದಿಗೆ ಗಾಳಿಯ ಗುಣಮಟ್ಟವು ಹದಗೆಟ್ಟಿದೆ.

ದೀಪಾವಳಿಗೆ ಇನ್ನು ಐದು ದಿನ ಇರುವಾಗಲೇ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ತೀವ್ರವಾಗಿ ಕುಸಿದಿದೆ.

ಇದರಿಂದ 500 ಮಿ. ನಷ್ಟು ಮಾತ್ರ ಗೋಚರತೆ ಇದೆ.  

ಗುರುವಾರ ರಾಷ್ಟ್ರ ರಾಜಧಾನಿ ದೆಹಯಲ್ಲಿ ವಾಯು ತುರ್ತುಸ್ಥಿತಿಯನ್ನು ಘೋಷಿಸಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ

ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಪ್ರಾಥಮಿಕ ಶಾಲೆಗಳಿಗೆ ಶುಕ್ರವಾರ ಮತ್ತು ಶನಿವಾರ ರಜೆ ನೀಡಲಾಗುವುದು ಎಂದು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಇನ್ನು ದೆಹಲಿ ಸರ್ಕಾರವು ಅನಿವಾರ್ಯವಲ್ಲದ ನಿರ್ಮಾಣ ಚಟುವಟಿಕೆಗಳ ಮೇಲೆ  ನಿರ್ಬಂಧ ವಿಧಿಸಿದೆ.

ಅಲ್ಲದೇ ದೆಹಲಿ ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುಧ್ ನಗರದಲ್ಲಿ

ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡೀಸೆಲ್ ಕಾರುಗಳ ಓಡಾಟದ ಮೇಲೆ ನಿಷೇಧ ಹೇರಲಾಗಿದೆ.

ಶುಕ್ರವಾರ ಬೆಳಿಗ್ಗೆ, ದೆಹಲಿಯಲ್ಲಿನ ಒಟ್ಟಾರೆ AQI ತೀವ್ರ  ವಿಭಾಗದಲ್ಲಿ ಲೋಧಿ ರಸ್ತೆ ಪ್ರದೇಶ 438, ಜಹಾಂಗೀರ್‌ಪುರಿ 491, ಆರ್‌.ಕೆ ಪುರಂ ಪ್ರದೇಶ

486 ಮತ್ತು IGI ವಿಮಾನ ನಿಲ್ದಾಣ (T3) 473 ಭಾರೀ ಪ್ರಮಾಣದಲ್ಲಿ ಇತ್ತು. ಇದು ವಾಯು ಮಾಲಿನ್ಯ ಗುಣಮಟ್ಟದಲ್ಲಿ ಅತ್ಯಂತ ಕಳಪೆ ಎಂದೇ ಪರಿಗಣಿಸಲಾಗುತ್ತದೆ.  

ಇನ್ನು ಸೊನ್ನೆ ಮತ್ತು 50 ರ ನಡುವಿನ AQI ಒಳ್ಳೆಯದು, 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು

300 ಕಳಪೆ, 301 ಮತ್ತು 400 ಅತ್ಯಂತ ಕಳಪೆ, ಮತ್ತು 401 ಮತ್ತು 500 ತೀವ್ರ ಮತ್ತು 500 ಕ್ಕಿಂತ ಹೆಚ್ಚು, ಇದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ದೆಹಲಿಯ AQI ಇಲ್ಲಿಯವರೆಗೆ ತೀವ್ರವಾಗಿ ಬದಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ

ಸಂಕಷ್ಟ ಎದುರಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

ಗುರುವಾರ ರಾತ್ರಿ 10 ಗಂಟೆಗೆ, AQI 422 ಕ್ಕೆ ಇಳಿಯಿತು. ಇದು ಈ ಋತುವಿನ ಅತ್ಯಂತ ಕೆಟ್ಟ ಪರಿಸ್ಥಿತಿ ಎಂದು ವಿಶ್ಲೇಷಿಸಲಾಗಿದೆ.   

ಗುರುವಾರದ PM2.5 ರ ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 60 ಮೈಕ್ರೋಗ್ರಾಂಗಳ ಸುರಕ್ಷಿತ ಮಿತಿಯನ್ನು ಅನೇಕ ಸ್ಥಳಗಳಲ್ಲಿ ಏಳರಿಂದ ಎಂಟು ಪಟ್ಟು ಮೀರಿದೆ.

ಅಕ್ಟೋಬರ್ 2023 ರಲ್ಲಿ ದೆಹಲಿಯ ಗಾಳಿಯ ಗುಣಮಟ್ಟವು 2020 ರಿಂದ ಕೆಟ್ಟದಾಗಿದೆ ಮತ್ತು ಈ ವರ್ಷದ ಅಕ್ಟೋಬರ್‌ನಲ್ಲಿ ಮಳೆಯಿಲ್ಲ.

ಅಕ್ಟೋಬರ್ 2022 (129 ಮಿಮೀ) ಮತ್ತು ಅಕ್ಟೋಬರ್ 2021 (123 ಮಿಮೀ) ಗೆ ವ್ಯತಿರಿಕ್ತವಾಗಿ ಅಕ್ಟೋಬರ್ 2023 ರಲ್ಲಿ ಕೇವಲ 5.4 ಮಿಮೀ ಮಳೆ ದಾಖಲಾಗಿದೆ.

ಈ ಎಲ್ಲ ಕಾರಣದಿಂದ ದೆಹಲಿಯಲ್ಲಿ ಅಕ್ಷರಶಃ ಉಸಿರು ಬಿಗಿಹಿಡಿದು ನಡೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ.  

ನವೆಂಬರ್ 1 ರಿಂದ ನವೆಂಬರ್ 15 ರ ನಡುವೆ ದೆಹಲಿಯ ವಾಯುಮಾಲಿನ್ಯವು ಅತ್ಯಂತ ಕಳೆಪೆ ಮಟ್ಟಕ್ಕೆ ಏರುವುದನ್ನು ಗಮನಿಸಬಹುದು.

ಪಂಜಾಬ್ ಮತ್ತು ಹರಿಯಾಣದ ರೈತರು ಕಳೆಗಳನ್ನು ಸುಡುವುದು ಹೆಚ್ಚಾಗುತ್ತದೆ.

ಈ ವರ್ಷ ಸೆಪ್ಟೆಂಬರ್ 15 ರಿಂದ ಪಂಜಾಬ್ ಮತ್ತು ಹರಿಯಾಣ ಎರಡರಲ್ಲೂ ಹುಲ್ಲು ಸುಡುವ ಘಟನೆಗಳು ಕಡಿಮೆಯಾಗಿದೆ.

ಆದರೆ, ಕಳೆದ ಕೆಲವು ದಿನಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದು ವರದಿಯಾಗಿದೆ.  

ವಾಯು ಗುಣಮಟ್ಟ ಸೂಚ್ಯಂಕದ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಗುರುಗ್ರಾಮ್‌ನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ.

ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಕೂಡ ಶುಕ್ರವಾರದಿಂದ ಪ್ರಾರಂಭವಾಗುವ GRAP III ನಿರ್ಬಂಧಗಳ ಅಡಿಯಲ್ಲಿ ತರಲಾಗಿದೆ.  

ವಾಯುಮಾಲಿನ್ಯ ಮೆಟ್ರೋ ಸೇವೆ ಹೆಚ್ಚಳ

ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಹಲವು ಗಂಭೀರವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೊಡಿದರು

ಎನ್ನುವ ಪರಿಸ್ಥಿತಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ.

Suffocating situation in Delhi: 2 days off for schools!

ಇದೀಗ ದೆಹಲಿಯಲ್ಲಿಪ ಮೆಟ್ರೋ ಸೇವೆಯನ್ನು ಹೆಚ್ಚಳ ಮಾಡಲಾಗಿದೆ.

ಈ ಮೂಲಕ ಜನ ಸ್ವಂತ ವಾಹನಗಳನ್ನು ಬಳಸುವುದನ್ನು ನಿಲ್ಲಿಸಿ, ಸಮೂಹ ಸಾರಿಗೆಯನ್ನು ಬಳಸುವುದು ಹೆಚ್ಚಾಗಲಿ ಎನ್ನುವುದು ಇದರ ಉದ್ದೇಶವಾಗಿದೆ.

ಇದರ ಭಾಗವಾಗಿ ದೆಹಲಿ ಮೆಟ್ರೋದಲ್ಲಿ 20 ಹೆಚ್ಚುವರಿ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ.   

ಅಲ್ಲದೇ ಎಲ್ಲ ರೀತಿಯ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ವಾಯುಗುಣಮಟ್ಟ ನಿಯಂತ್ರಿಸಲು ಹರಸಾಹಸ ಮುಂದುವರಿದಿದೆ.