News

ದಿಢೀರ್ ಕುಸಿದ ರೆಡ್ ರಾಣಿ ಟೊಮೇಟೊ ಬೆಲೆ!

30 November, 2021 9:28 AM IST By: KJ Staff

ಆಂಧ್ರ, ತಮಿಳುನಾಡು, ನಾಸಿಕ್ ಭಾಗದಿಂದ ಕರ್ನಾಟಕಕ್ಕೆ ಹರಿದು ಬಂತು ಭಾರೀ ಅವಕ

ಸೆಂಚೂರಿ ಭಾರಿಸಿದ ಸಂಭ್ರಮದಲ್ಲಿ ತೇಲುತ್ತಿದ್ದ ಟೊಮೇಟೊ ಬೆಲೆ ದೀಢೀರ್ ಕುಸಿತ ಕಂಡಿದೆ. ಕಾರಣ ನೆರೆ ರಾಜ್ಯಗಳಿಂದ ಕರ್ನಾಟಕದ ಮಾರುಕಟ್ಟೆಗಳಿಗೆ ‘ಕೆಂಪು ಸುಂದರಿ’ಯರ ಆಗಮನವಾಗಿದೆ.

ಕಾಶ್ಮೀರದ ಆ್ಯಪಲ್ ಬೆಲೆಯನ್ನು ಕೂಡ ನಾಚಿಸುವಷ್ಟು ಎತ್ತರಕ್ಕೆ ತಲುಪಿದ್ದ ಟೊಮೇಟೊ ದರ ಮೂರೇ ದಿನಗಳಲ್ಲಿ ಪಾತಾಳ ಕಂಡಿದೆ. ಕೋಲಾರ, ಬೆಂಗಳೂರು, ಕಲಬುರಗಿ, ಹಾವೇರಿ ಮತ್ತಿತರ ಪ್ರಮುಖ ಮಾರುಕಟ್ಟಟೆಗಳಲ್ಲಿ ಟೊಮೇಟೊ ಅವಕ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಒಂದೆಡೆ ರಾಜ್ಯದಲ್ಲಿ ಅತಿಯಾದ ಮಳೆಯಿಂದಾಗಿ ಬಹುತೇಕ ಜಿಲ್ಲೆಗಳಲ್ಲಿ ಟೊಮೇಟೊ ಬೆಳೆ ಹಾಳಾಗಿತ್ತು. ಹೀಗಾಗಿ ಕಳೆದ ಎರಡು ವಾರಗಳಿಂದ ಬೆಂಗಳೂರು ಹಾಗೂ ಇತರೆ ಮಾರುಕಟ್ಟೆಗಳಲ್ಲಿ ಟೊಮೇಟೊ ಹಣ್ಣಿನ ಚಿಲ್ಲರೆ ಮಾರಾಟ ದರ ಒಂದು ಕೆ.ಜಿಗೆ 120 ರೂ. ತಲುಪಿತ್ತು. ಇದೀಗ ಮಾರುಕಟ್ಟೆಯಲ್ಲಿ ದರ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿದೆ.

ರೈತರಿಗೆ ದಾಖಲೆ ಬೆಲೆ!

ಇಲ್ಲಿ ಗಮನಿಸಬೇಕಿರುವ ಪ್ರಮುಖ ಅಂಶ ಏನೆಂದರೆ ಈ ಬಾರಿ ಬೆಲೆ ಏರಿಕೆಯ ನಿಜವಾದ ಲಾಭ ಟೊಮೇಟೋ ಬೆಳೆದ ರೈತರಿಗೆ ಸಿಕ್ಕಿರುವುದು. ಹೌದು ಕಳೆದ ವಾರವಷ್ಟೇ ಕೋಲಾರ ಜಿಲ್ಲೆಯ ರೈತರೊಬ್ಬರು, 15 ಕೆ.ಜಿಯ ಒಂದು ಬಾಕ್ಸ್ ಟೊಮೇಟೊವನ್ನು ಬರೋಬ್ಬರಿ 2000 ರೂಪಾಯಿಗೆ ಮಾರಾಟ ಮಾಡಿ ಮಂದಹಾಸ ಬೀರಿದ್ದರು. ಒಂದು ಅಂದಾಜಿನ ಪ್ರಕಾರ ಕಳೆದ 17 ವರ್ಷಗಳಲ್ಲಿ ಇದು ಟೊಮೇಟೊ ಬೆಳೆದ ರೈತರಿಗೆ ದೊರೆತ ದಾಖಲೆ ಬೆಲೆ ಎನ್ನಲಾಗಿದೆ. ಇದಾದ ಬಳಿಕ ಬೆಂಗಳೂರು, ಬೆಳಗಾವಿ, ಕಲಬುರಗಿ, ಬೀದರ್ ಮಾರುಕಟ್ಟೆಗಳಲ್ಲಿ ಕೆಂಪು ರಾಣಿಯ ಚಿಲ್ಲರೆ ಮಾರುಕಟ್ಟರೆ ಬೆಲೆ ಕೆ.ಜಿ ಒಂದಕ್ಕೆ 100 ರೂ. ತಲುಪಿತ್ತು. ನವೆಂಬರ್ 26ರವರೆಗೂ ಟೊಮೇಟೊ ಬೆಲೆ ಸೆಂಚ್ಯೂರಿ ಹಂತದಲ್ಲೇ ವಿರಾಜಮಾನವಾಗಿತ್ತು. ಆದರೆ ಎರಡು ದಿನಗಳಿಂದ ಬೆಲೆ 30-40 ರೂ.ಗೆ ಕುಸಿದಿದೆ.

ನೆರೆ ರಾಜ್ಯಗಳ ಹಾವಳಿ

ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಹಾಗೂ ಮಹಾರಾಷ್ಟçದಲ್ಲಿ ಬೆಳೆದಿರುವ ಟೊಮೇಟೊ ಹಣ್ಣುಗಳು ರಾಜ್ಯದ ಮಾರುಕಟ್ಟೆಗಳಿಗೆ  ಲಗ್ಗೆಯಿಟ್ಟಿವೆ. ಬಳ್ಳಾರಿ, ಕಲಬುರಗಿ, ಬೀದರ್, ರಾಯಚೂರು, ಚಿತ್ರದುರ್ಗ ಮಾರುಕಟ್ಟೆಯಲ್ಲಿ ಆಂಧ್ರದ ಟೊಮೇಟೊ ಕಾರುಬಾರಿದ್ದು, ಕೋಲಾರ, ಬೆಂಗಳೂರು, ಮೈಸೂರು, ಹಾಸನ, ತುಮಕೂರು ಭಾಗದ ಮಾರ್ಕೆಟ್‌ಗಳಿಗೆ ತಮಿಳುನಾಡಿನಿಂದ ಟೊಮೇಟೊ ಬಂದಿದೆ. ಇತ್ತ ಬೆಳಗಾವಿ, ಕಾರವಾರ, ಕರಾವಳಿ ಜಿಲ್ಲೆಗಳು, ಗದಗ, ಹುಬ್ಬಳ್ಳಿ-ಧಾರವಾಡ ಸೇರಿ ಉತ್ತರ ಕರ್ನಾಟಕದ ಇತರೆ  ಮಾರುಕಟ್ಟೆಗಳಿಗೆ ಮಹಾರಾಷ್ಟçದ ನಾಸಿಕ್‌ನಿಂದ ಹೆಚ್ಚಿನ ಪ್ರಮಾಣದ ಟೊಮೇಟೊ ಅವಕ ಬಂದಿದೆ.

ಉತ್ತಮ ದರದ ಕನಸು ಛಿದ್ರ

ರಾಜ್ಯದಲ್ಲಿ ಕೆಲವು ದಿನಗಳಿಂದ ವರುಣನ ಆರ್ಭಟ ಕಡಿಮೆಯಾಗಿದೆ. ಹೀಗಾಗಿ ಮಳೆಗೆ ಹಾಳಾಗದೇ ಉಳಿದಿರುವ ಟೊಮೇಟೊ ತೋಟಗಳ ರೈತರು ಇದೀಗ ಹೊಸದಾಗಿ ಕೊಯ್ಲು ಆರಂಭಿಸಿದ್ದು, ಉತ್ತಮ ಗುಣಮಟ್ಟದ ಟೊಮೇಟೊ ಹಣ್ಣುಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಈಗಾಗಲೇ ಟೊಮೇಟೊ ಬೆಲೆ ನೂರು ರೂ. ತಲುಪಿದ್ದ ಹಿನ್ನೆಲೆಯಲ್ಲಿ ಒಂದು ಬಾಕ್ಸ್ ಹಣ್ಣಿಗೆ ಕನಿಷ್ಠ 1000 ರೂ.ನಿಂದ 1200 ರೂ. ಆದರೂ ಸಿಗಬಹುದು ಎಂಬ ನಿರೀಕ್ಷೆ ರೈತರದ್ದಾಗಿತ್ತು. ಆದರೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರೈತರು ಏಕಕಾಲಕ್ಕೆ ಟೊಮೇಟೊ ಕೊಯ್ಲು ಆರಂಭಿಸಿದ್ದು, ಲೋಡ್‌ಗಟ್ಟಲೆ ಹಣ್ಣುಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಇನ್ನೊಂದೆಡೆ ಹೊರ ರಾಜ್ಯದ ಹಣ್ಣುಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಾರಣ, ಬೆಲೆ ಕುಸಿದಿದ್ದು, ಉತ್ತಮ ದರದ ನಿರೀಕ್ಷೆಯಲ್ಲಿದ್ದ ಇಲ್ಲಿನ ರೈತರಿಗೆ ಇದರಿಂದ ತೀವ್ರ ನಿರಾಸೆಯಾಗಿದೆ.

ಮತ್ತೆ ಏರಲಿದೆಯಾ ಬೆಲೆ?

ರಾಜ್ಯದಲ್ಲಿ ಮುಂದಿನ ಒಂದು ವಾರ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅದರಲ್ಲೂ ಟೊಮೇಟೊ ಹೆಚ್ಚಾಗಿ ಬೆಳೆಯುವ ಕೋಲಾರ ಮತ್ತಿತರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ರಾಣಿಯ ಬೆಲೆ ಮತ್ತೆ ಏರಿಕೆಯಾಗಲಿದೆ ಎಂದು ಕೆಲವು ವ್ಯಾಪಾರಿಗಳು, ಕೃಷಿ ಪಂಡಿತರು ಹೇಳಿದ್ದಾರೆ. ಈಗಾಗಲೇ ಶನಿವಾರದಿಂದಲೇ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆ ಶುರುವಾಗಿದ್ದು, ಮುಂದಿನ ಮೂರು ದಿನಗಳು ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಒಂದೊಮ್ಮೆ ಮಳೆ ಆರ್ಭಟ ಮುಂದುವರಿದರೆ ಟೊಮೇಟೊ ದರ ಮತ್ತೆ ಹೆಚ್ಚಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಜಿಲ್ಲೆಯಿAದ ಜಿಲ್ಲೆಗೆ ಬೆಲೆ ವ್ಯತ್ಯಾಸ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಟೊಮೇಟೊ ಬೆಲೆ ಒಂದೇ ರೀತಿ ಇಲ್ಲ. ಕಳೆದ ಕೆಲವು ವಾರಗಳಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಜಿಲ್ಲೆಗಳ ಚಿಲ್ಲರೆ ಮಾರುಕಟ್ಟೆಗಳಲ್ಲಿ ಒಂದು ಕೆ.ಜಿ ಟೊಮೇಟೊ ಬೆಲೆ 60 ರೂ.ಗಳಿಂದ 120 ರೂ. ಇತ್ತು. ಇದೇ ವೇಳೆ ಮಧ್ಯ ಕರ್ನಾಟಕದ ದಾವಣಗೆರೆ ಸೇರಿ ಹಲವು ಜಿಲ್ಲೆಗಳಲ್ಲಿ ಗ್ರಾಹಕರು 30 ರೂ.ಗೆ ಒಂದು ಕೆ.ಜಿ ಟೊಮೇಟೊ ಖರೀದಿ ಮಾಡಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳು ಕೋಲಾರ, ತಮಿಳುನಾಡು ಭಾಗದಲ್ಲಿ ಬೆಳೆಯುವ ಟೊಮೇಟೊ ಬೆಳೆಯನ್ನೇ ಅವಲಂಬಿಸಿವೆ. ಆದರೆ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಮಾರುಕಟ್ಟೆಗಳಿಗೆ ಆಯಾ ಜಿಲ್ಲೆಗಳ ರೈತರು ಬೆಳೆಯುವ ಟೊಮೇಟೊ ಅವಕವೇ ಹೆಚ್ಚು. ಅಲ್ಲದೆ, ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ, ಮಧ್ಯ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಆರ್ಭಟ ಕೊಂಚ ಕಡಿಮೆ. ಹೀಗಾಗಿ ಟೊಮೇಟೊ ಬೆಳೆ ಹೆಚ್ಚೇನು ಹಾನಿಗೀಡಾಗಿಲ್ಲ. ಬೆಲೆ ವ್ಯತ್ಯಾಸವಾಗಲು ಇದುವೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.