News

ಹಣ್ಣು, ತರಕಾರಿ ಶೇಖರಣೆ, ಸಾಗಾಣಿಕೆಗೆ ಆತ್ಮನಿರ್ಭರ ಭಾರತ ಅಭಿಯಾನದಡಿ ಶೇ.50 ಸಹಾಯಧನ

26 June, 2021 9:01 AM IST By:

ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ವತಿಯಿಂದ ‘ಆಪರೇಷನ್ ಗ್ರೀನ್ಸ್’ (ಶಾಟ್‌ಟರ್ಮ್ ಇಂಟರ್‌ವೆನ್ಶನ್ ಫಾರ್ ಫ್ರೂಟ್ಸ್ & ವೆಜಿಟೆಬಲ್ಸ್) ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.

ಈ ಕಾರ್ಯಕ್ರಮದಡಿ ಹಣ್ಣು ಮತ್ತು ತರಕಾರಿ ಸಾಗಾಣಿಕೆ ಹಾಗೂ ಶೇಖರಣೆಗಾಗಿ ಶೇ.50 ರಷ್ಟು ಸಹಾಯಧನ ಪಡೆಯಲು ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆದಾರರು, ರೈತರು, ರೈತ ಉತ್ಪಾದಕ ಸಂಸ್ಥೆ ಮತ್ತು ರೈತರ ಗುಂಪು, ವರ್ತಕರು, ಪರವಾನಗಿ (ಲೈಸನ್ಸ್) ಹೊಂದಿರುವ ಕಮಿಷನ್ ಏಜೆಂಟರುಗಳು, ರಫ್ತುದಾರರು ಹಾಗೂ ಇನ್ನಿತರೆ ಭಾಗಿದಾರರಿಗೆ ಅವಕಾಶ ಕಲ್ಪಿಸಲಾಗಿದೆ.

ಹಣ್ಣು ಮತ್ತು ತರಕಾರಿ ಬೆಳೆಗಾರರು ವಿಶೇಷವಾಗಿ ಕೋವಿಡ್ ಲಾಕ್‌ಡೌನ್ ರೀತಿಯ ಸಂಕಷ್ಟದ ಸಂದರ್ಭದಲ್ಲಿ ತಾವು ಬೆಳೆದ ಉತ್ಪನ್ನಗಳನ್ನು ಸರಿಯಾಗಿ ಮಾರಾಟ ಮಾಡಲು ಸಾಧ್ಯವಾಗದೇ ಕಷ್ಟ-ನಷ್ಟ ಅನುಭವಿಸಿರುವುದನ್ನು ಹಾಗೂ ಬೆಳೆಗಳ ಕಟಾವಿನ ನಂತರ ಆದ ಉತ್ಪನ್ನಗಳ ನಷ್ಟವನ್ನು ನಿಯಂತ್ರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಮಾರ್ಗಸೂಚಿಗೆ ಅನುಗುಣವಾಗಿ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಸಾಗಾಣಿಕೆಗೆ ಮತ್ತು ಶೇಖರಣೆಗೆ ಶೇ.50 ಸಹಾಯಧನ ನೀಡಲು ಅವಕಾಶವಿರುತ್ತದೆ.

ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆಯಲು ಇಚ್ಛಿಸುವ ಜಿಲ್ಲೆಯಲ್ಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರು, ಈ ಯೋಜನೆಯಡಿ ಬರಲಿರುವ ಬೆಳೆಗಳು, ಅರ್ಹ ಮಾನದಂಡಗಳು ಮತ್ತು ಅಗತ್ಯವಿರುವ ದಾಖಲಾತಿಗಳು ಹಾಗೂ ಇನ್ನಾವುದೇ ಮಾಹಿತಿಗಾಗಿ ಆಯಾ ತಾಲೂಕು ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಶಿವಮೊಗ್ಗ: 08182-270415, ಭದ್ರಾವತಿ: 08282-268239, ಶಿಕಾರಿಪುರ: 08187-223544, ಸೊರಬ: 08184-272112, ಸಾಗರ: 08183-226193, ತೀರ್ಥಹಳ್ಳಿ: 08181-2281514, ಹೊಸನಗರ: 08185-221364 ಈ ತಾಲೂಕುವಾರು ತೋಟಗಾರಿಕೆ ಕಚೇರಿ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆ ವಿಮೆ ನೋಂದಣಿ ಬಗ್ಗೆ ಗೊಂದಲ ಬೇಡ

2021-22ನೇ ಸಾಲಿಗೆ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ಆರ್‌ಡಬ್ಲ್ಯುಬಿಸಿಐಎಸ್)ಯನ್ನು ಜಾರಿಗೊಳಿಸಲಾಗುತ್ತಿದೆ. ಪ್ರಸ್ತುತ ನೋಂದಣಿ ಪ್ರಕ್ರಿಯೆಯೂ ಚಾಲನೆಯಲ್ಲಿದೆ. ಆದರೆ, ನೋಂದಣಿ ಮಾಡಿಕೊಳ್ಳಲು ಅಗತ್ಯವಿರುವ ನಿರ್ದಿಷ್ಟ ದಾಖಲೆಗಳ ಕುರಿತು ರೈತರಲ್ಲಿ ಗೊಂದಲ ಮೂಡಿದೆ. ಪ್ರಮುಖ ದಾಖಲೆಯಾಗಿರುವ ಪಹಣಿ (ಆರ್‌ಟಿಸಿ)ಯಲ್ಲಿ ಬೆಳೆ ಯಾವುದೆಂದು ನಮೂದಾಗಿರದೇ ಇದ್ದರೆ ನೋಂದಣಿಗೆ ತೊಂದರೆಯಾಗುತ್ತಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ದರಿಂದ ಸರ್ಕಾರದ ಆದೇಶದಲ್ಲಿಯೇ ಅವಕಾಶ ನೀಡಿರುವಂತೆ ಪಹಣಿಯಲ್ಲಿ ಬೆಳೆ ನಮೂದು ಆಗಿರದಿದ್ದರೆ ಅರ್ಜಿದಾರರು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಈ ಕುರಿತಂತೆ ಯಾವುದೇ ರೈತರು ಗೊಂದಲಕ್ಕೆ ಒಳಗಾಗದೇ ಯೋಜನೆಯಡಿ ವಿಮೆ ಪಡೆಯಲು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಈ ಕುರಿತು ಯಾವುದೇ ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರ (ಸಿಎಸ್)ಗಳಿಂದ ಆಕ್ಷೇಪ ವ್ಯಕ್ತವಾದಲ್ಲಿ ಸಂಬಂಧಿಸಿದ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಅಥವಾ ಲೀಡ್ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಬಹುದು. ಹೆಚ್ಚಿನ ಮಾಹಿತಿಗೆ ಶಿವಮೊಗ್ಗ: 08182-270415, ಭದ್ರಾವತಿ: 08282-26239, ಶಿಕಾರಿಪುರ: 08187-223544, ಸೊರಬ: 08184-272112, ಸಾಗರ: 08183-226193, ತೀರ್ಥಹಳ್ಳಿ: 08181-228151, ಹೊಸನಗರ: 08185-221364 ತಾಲೂಕು ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೌಲಭ್ಯ ಪಡೆಯಲು ನೋಂದಣಿ ಕಡ್ಡಾಯ

ಮೀನುಗಾರಿಕೆ ಇಲಾಖೆಯ ಫಲಾನುಭವಿ ಆಧಾರಿತ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯಗಳನ್ನು ನೀಡಲು ನೋಂದಾಯಿತ ಮೀನು ಕೃಷಿ ಘಟಕಗಳನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ಮೀನು ಉತ್ಪಾದನಾ ಹಾಗೂ ಮಾರಾಟ ಘಟಕಗಳು ಮೀನುಗಾರಿಕೆ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿರುವ ಖಾಸಗಿ ಮೀನುಮರಿ ಪಾಲನಾ ಕೊಳಗಳು, ಖಾಸಗಿ ಮೀನುಮರಿ ಉತ್ಪಾದನಾ ಕೇಂದ್ರಗಳು, ಖಾಸಗಿ ಮೀನು ಕೃಷಿ ಕೊಳಗಳು ಹಾಗೂ ಅಲಂಕಾರಿಕ ಮೀನು ಉತ್ಪಾದನಾ, ಪಾಲನಾ ಹಾಗೂ ಮಾರಾಟ ಘಟಕಗಳನ್ನು ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಜುಲೈ 15ರ ಒಳಗೆ ತಮ್ಮ ಮೀನು/ಜಲಕೃಷಿ ಘಟಕಗಳ ನೋಂದಣಿಗೆ ನಿಗದಿತ ಅರ್ಜಿ ಫಾರಂಗಳಲ್ಲಿ ಆಯಾ ತಾಲೂಕುಗಳ ಮೀನುಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಹಾಗೂ ನೋಂದಣಿ ಅವಧಿ ಮುಗಿದಿರುವ ಘಟಕಗಳು ನೋಂದಣಿ ನವೀಕರಣ ಮತ್ತು ಹೊಸ ಘಟಕಗಳ ಮಾಲೀಕರು  ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತೀಯ ಸೇನೆಯ ಕಾಲಾಳು ಪಡೆಯ ರೆಜಿಮೆಂಟ್ ಆಗಿರುವ ಅಸ್ಸಾಂ ರೆಜಿಮೆಂಟ್ ವತಿಯಿಂದ ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಈ ಸಂಬಂಧ ಸೂಕ್ತ ಅರ್ಹತೆಗಳನ್ನು ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿ ಹಂದಿರುವ ಮಹಿಳಾ ಅಭ್ಯರ್ಥಿಗಳು ಜುಲೈ 20ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. www.joinindianarmy.nic.in ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು (ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.