ಬಳ್ಳಾರಿಯ ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ನಗರೋತ್ಥಾನ ಹಂತ-4 ರ ಯೋಜನೆಯ ಶೇ.24.10, (ಎಸ್.ಸಿ.ಎಸ್.ಪಿ, ಟಿ.ಎಸ್.ಪಿ), ಶೇ.7.25 ಮತ್ತು ಶೇ.5ರ ಅನುದಾನಗಳಲ್ಲಿ ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿರುಗುಪ್ಪ ನಗರಸಭೆ ಪೌರಾಯುಕ್ತ ಕೆ.ಜೀವನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 28 ಆಗಿರುತ್ತದೆ. ಎಸ್.ಸಿ.ಎಸ್.ಪಿ. ಅನುದಾನದಡಿ ವೈಯಕ್ತಿಕ ಸೌಲಭ್ಯಗಳು: ಸಿರುಗುಪ್ಪ ನಗರದ ಪರಿಶಿಷ್ಟ ಜಾತಿ ಜನಾಂಗದವರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ (ಐ.ಹೆಚ್.ಹೆಚ್.ಎಲ್ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳನ್ನು ಹೊರತುಪಡಿಸಿ) ರೂ.15 ಸಾವಿರದಂತೆ ಸಹಾಯಧನ ನೀಡಲಾಗುವುದು.
ಟಿ.ಎಸ್.ಪಿ.ಯಡಿ ವೈಯಕ್ತಿಕ ಸೌಲಭ್ಯಗಳು: ನಿವೇಶನ ಹೊಂದಿದ ಸಿರುಗುಪ್ಪ ನಗರದ ಪರಿಶಿಷ್ಟ ಪಂಗಡದ ಮಹಿಳಾ ಫಲಾನುಭವಿಗಳು ಪಕ್ಕಾಮನೆ ನಿರ್ಮಾಣಕ್ಕಾಗಿ ರೂ.3 ಲಕ್ಷ ಸಹಾಯಧನ ನೀಡಲಾಗುವುದು (ಬ್ಯಾಂಕ್ ಮತ್ತು ನಗರ ಸ್ಥಳೀಯ ಸಂಸ್ಥೆ ಜಂಟಿಯಾಗಿ ಅಡಮಾನ ನೊಂದಣಿ ಮಾಡಿಕೊಳ್ಳಬೇಕು).
ಶೇ.7.25ರ ಅನುದಾನಡಿ ವೈಯಕ್ತಿಕ ಸೌಲಭ್ಯಗಳು: ಸಿರುಗುಪ್ಪ ನಗರದ ಇತರೆ ಹಿಂದುಳಿದ ವರ್ಗದ ಜನಾಂಗದವರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ (ಐ.ಹೆಚ್.ಹೆಚ್.ಎಲ್. ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳನ್ನು ಹೊರತುಪಡಿಸಿ) ರೂ.15 ಸಾವಿರದಂತೆ ಸಹಾಯಧನ ನೀಡಲಾಗುವುದು.
ಶೇ.5ರ ಅನುದಾನದಡಿ ವೈಯಕ್ತಿಕ ಸೌಲಭ್ಯಗಳು: ಸಿರುಗುಪ್ಪ ನಗರದಲ್ಲಿರುವ ಅಂಗವಿಕಲರಿಗೆ ಜೀವನೋಪಾಯಕ್ಕಾಗಿ ಸ್ವಯಂ ವ್ಯಾಪಾರ ಮಾಡಿಕೊಳ್ಳಲು ವಾಣಿಜ್ಯ ಮಳಿಗೆಗಳ ರೆಡಿಮೇಡ್ ಟಿನ್‍ಶೆಡ್‍ಗಳನ್ನು ನಿರ್ಮಾಣ ಮಾಡಲು ಅರ್ಜಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಬೇಕಾದ ದಾಖಲೆಗಳು: 2-ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ರೇಷನ್‍ಕಾರ್ಡ್, ಆಧಾರ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ, ಚಾಲ್ತಿ ವರ್ಷದ ಆಸ್ತಿ ತೆರಿಗೆಯ ಪ್ರತಿ, ಚಾಲ್ತಿ ವರ್ಷದ ನಮೂನೆ-3ರ ಪ್ರತಿ, ಬ್ಯಾಂಕ್ ಪಾಸ್‍ಬುಕ್ ಪ್ರತಿ, ಅಂಗವಿಕಲರು ಅಂಗವಿಕಲತೆ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರದ ಪ್ರತಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ನಗರಸಭೆ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.