ಈಗಾಗಲೇ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, 2021ರ ಜೂನ್, ಜುಲೈ ತಿಂಗಳಿನಲ್ಲಿ ವಿದ್ಯಾರ್ಥಿಗಳ ಬಸ್ ಪಾಸಿನ ಅವಧಿ ಮುಕ್ತಾಯವಾದ್ದಲ್ಲಿ, ವಿದ್ಯಾರ್ಥಿಗಳು ಕಳೆದ ವರ್ಷದ ಬಸ್‌ಪಾಸ್‌ನಲ್ಲಿ ನಮೂದಿಸಿದ ಕಾಲೇಜನ್ನು ಹೊರತುಪಡಿಸಿ ಹೊಸ ಕಾಲೇಜ್‌ಗೆ ಪ್ರವೇಶ ಪಡೆದಲ್ಲಿ, ಸ್ಥಳ ಬದಲಾವಣೆ ಇದ್ದರೂ ಸಹ ವಿದ್ಯಾರ್ಥಿಗಳು ಸದರಿ ಬಸ್‌ಪಾಸ್‌ದೊಂದಿಗೆ ಶಾಲಾ/ಕಾಲೇಜನಲ್ಲಿ ಶುಲ್ಕ ಪಾವತಿಸಿದ ರಶೀದಿ ತೋರಿಸಿ ತಾತ್ಕಾಲಿಕವಾಗಿ 2021ರ ಆಗಸ್ಟ್ 31 ರವರೆಗೆ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಅದೇ ರೀತಿ ಸರ್ಕಾರದ ಆದೇಶದ ಮೇರೆಗೆ ಈಗಾಗಲೇ ಆಗಸ್ಟ್ 23 ರಿಂದ 9ನೇ ತರಗತಿಯಿಂದ, ಶಾಲಾ/ಕಾಲೇಜುಗಳು ಪ್ರಾರಂಭವಾಗಿದ್ದು, ಪ್ರಸಕ್ತ ವರ್ಷ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಬಸ್ ಪಾಸ್ ಪಡೆಯಬೇಕಿತ್ತು. ಆದರೆ ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡುವ ಉದ್ದೇಶದಿಂದ 2020-21 ನೇ ಸಾಲಿನಲ್ಲಿ ಪಡೆದಿರುವ ವಿದ್ಯಾರ್ಥಿ ಬಸ್‌ಪಾಸ್‌ಗಳನ್ನು ಬಳಸಿ ಪ್ರಯಾಣಿಸಲು ಹಾಗೂ ಕಳೆದ ಸಾಲಿನಲ್ಲಿ ವಿದ್ಯಾರ್ಥಿ ಬಸ್‌ಪಾಸ್‌ಗಳನ್ನು ಪಡೆದಿರುವ
ವಿದ್ಯಾರ್ಥಿಗಳು ಹೊಸದಾಗಿ ಶಾಲಾ / ಕಾಲೇಜುಗಳಲ್ಲಿ ಪಾವತಿಸಿರುವ ರಶೀದಿ ಹಾಗೂ ವಿದ್ಯಾ ಸಂಸ್ಥೆಯ ಗುರುತಿನ ಚೀಟಿಯೊಂದಿಗೆ ನಿಗಮದ ಬಸ್ಸುಗಳಲ್ಲಿ ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ ಕಾಲೇಜುಗಳಿಗೆ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ 2021ರ ಸೆಪ್ಟೆಂಬರ್ 15 ರವರೆಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಉಚಿತ / ರಿಯಾಯಿತಿ ಪಾಸ್‌ಗಳನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ (URL- sevasindhu.karnataka.gov.in) ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
BMTC ಬಸ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ವ್ಯವಸ್ಥೆ
ಆಗಸ್ಟ್ 28 ರಿಂದ 9 ರಿಂದ 12ನೆ ತರಗತಿಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುವಾಗುವಂತೆ 9 ರಿಂದ 12ನೆ ತರಗತಿಯ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
2020-21ನೆ ಸಾಲಿನಲ್ಲಿ ವಿತರಣೆ ಮಾಡಿರುವ ಸ್ಮಾರ್ಟ್‍ಕಾರ್ಡ್, ವಿದ್ಯಾರ್ಥಿ ಪಾಸು ಅಥವಾ ಪ್ರಸಕ್ತ ಸಾಲಿನಲ್ಲಿ ಶಾಲಾ-ಕಾಲೇಜಿಗೆ ದಾಖಲಾಗಿರುವ ಶುಲ್ಕ ರಸೀದಿ ಅಥವಾ ಶಾಲಾ0ಕಾಲೇಜಿನ ಗುರುತಿನ ಚೀಟಿಯೊಂದಿಗೆ ನಾಳೆಯಿಂದ ಮುಂದಿನ ಆದೇಶದವರೆಗೂ ಸಂಸ್ಥೆಯ ಸಾಮಾನ್ಯ ಸಾರಿಗೆಗಳಲ್ಲಿ ವಿದ್ಯಾರ್ಥಿಗಳ ವಾಸಸ್ಥಳದಿಂದ ಶಾಲಾ-ಕಾಲೇಜಿನವರೆಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.