ಸರ್ಕಾರ ಮೂರು ವರ್ಷಗಳಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹಧನ ಸ್ಥಗಿತಗೊಂಡಿದೆ. ಇದರಿಂದಾಗಿ ಸಿರಿಧಾನ್ಯ ಬೆಳೆಯುವ ರೈತರಿಗೆ ಬಿಗ್ ಶಾಕ್ ನೀಡಿದಂತಾಗಿದೆ.
ಇತ್ತೀಚೆಗೆ ಸಿರಿಧಾನ್ಯಗಳಿಗೆ ಹೆಚ್ಚು ಬೇಡಿಕೆಯೂ ಬರುತ್ತಿತ್ತು. ಇದರಿಂದಾಗಿ ರೈತರು ಸಿರಿಧಾನ್ಯ ಬೆಳೆಗಳ ಕಡೆ ಮನಸ್ಸು ಮಾಡಿದ್ದರು. ಸರ್ಕಾರದ ಪ್ರೋತ್ಸಾಹ ಧನ ಸಿಗುತ್ತದೆ ಎಂಬ ಭರವಸೆಯಿಟ್ಟುಕೊಂಡು ಸಿರಿಧಾನ್ಯ ಬೆಳೆದ ರೈತರಿಗೆ ನಿರಾಶೆಯಾಗಿದೆ.
ರಾಜ್ಯ ಸರ್ಕಾರವು ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ರೈತಸಿರಿ’ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆಯಡಿ ಸಾಮೆ, ಊದಲು, ನವಣೆ, ಅರ್ಕ, ಕೊರ್ಲೆ, ಬರಗು ಸೇರಿ 6 ಸಿರಿಧಾನ್ಯಗಳಿಗೆ ಪ್ರೋತ್ಸಾಹಧನ ನೀಡಲು ನಿರ್ಧರಿಸಿತ್ತು.
ಒಂದು ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ 10,000 ನಗದು ಪ್ರೋತ್ಸಾಹಧನವನ್ನು 2 ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮುಖಾಂತರ ನೀಡಲಾಗುವುದು. ಪ್ರತಿ ಫಲಾನುಭವಿ ರೈತರಿಗೆ ಬಿತ್ತನೆ ಪ್ರದೇಶದಲ್ಲಿ ಗರಿಷ್ಠ ಎರಡು ಹೆಕ್ಟೇರ್‌ಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ ಈ ವರ್ಷ ಅರ್ಜಿ ಪಡೆಯದೆ ಪ್ರೋತ್ಸಾಹಧನ ನಿಲ್ಲಿಸಿದೆ.
ಏಕದಳ ಧಾನ್ಯಗಳಿಗಿಂತ ಸಿರಿಧಾನ್ಯ ಅತ್ಯಂತ ಪೌಷ್ಟಿಕಾಂಶಗಳಿಂದ ಕೂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ (ಪ್ರೋಟೀನ್), ನಾರಿನಾಂಶ, ಕ್ಯಾಲ್ಸಿಯಂ ಮತ್ತು ಖನಿಜಾಂಶ ಹೊಂದಿರುತ್ತವೆ. ಆಹಾರ ಕ್ರಮದಲ್ಲಿ ವಿವಿಧ ಆಹಾರ ಪದಾರ್ಥ ಪಡೆಯಲು ಸಾಧ್ಯವಾಗದ ಜನಸಾಮಾನ್ಯರಿಗೆ ಪೌಷ್ಟಿಕಾಂಶದ ಭದ್ರತೆ ಸಿರಿಧಾನ್ಯ ಖಾತರಿಪಡಿಸುತ್ತಿದ್ದರಿಂದ ರೈತರು ಸಿರಿಧಾನ್ಯಗಳ ಬೆಳೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಈ ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪ್ರತಿ ಹೆಕ್ಟೇರ್ ಸಿರಿಧಾನ್ಯಕ್ಕೆ 6,000 ಪ್ರೋತ್ಸಾಹಧನ ನೀಡಿದರೆ ಇನ್ನುಳಿದ 4,000 ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ನೀಡುತ್ತದೆ. ಆದರೆ ಏಕಾಏಕಿ ಸ್ಥಗಿತಗೊಳಿಸಿದರಿಂದ ಸಿರಿಧಾನ್ಯ ಬೆಳೆದ ರೈತರಿಗೆ ಬರಸಿಡಿಲು ಬಡಿದತಾಗಿದೆ.