News

ಕನ್ನಡಿಗರ ಮೇಲೆ ಹಿಂದಿ ಹೇರಿಕೆ ನಿಲ್ಲಲಿ: ರೂಪೇಶ್ ರಾಜಣ್ಣ

13 August, 2023 3:00 PM IST By: Hitesh
Stop imposing Hindi on Kannadigas: Rupesh Rajanna

ಕನ್ನಡಿಗರ ಮೇಲೆ ಆಗುತ್ತಿರುವ ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಆಗ್ರಹಿಸಿದ್ದಾರೆ.

ಎಲ್ಲಾ ಸ್ವಾಭಿಮಾನಿ ಕನ್ನಡಿಗರಿಗೂ ಅರಿವು ಮೂಡಿಸೋಣ. ಕನ್ನಡಿಗರ ಗುರುತೇ ಕನ್ನಡ ಅದನ್ನು ಅಳಿಸೋ ಪ್ರಯತ್ನ ಬೇಡ.  

ನಾವು ಒಂದು ಭಾಷೆಯಾಗಿ ಹಿಂದಿಯನ್ನು ಗೌರವಿಸುತ್ತೇವೆ ಆದ್ರೆ ಒಂದು ರಾಜ್ಯದ ಮೇಲೆ ಕಡ್ಡಾಯವಾಗಿ ಮಾಡುತ್ತಿರೋ

ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇನ್ನು ಭಾರತ ಯಾವುದೇ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಅಂಗೀಕರಿಸಿಲ್ಲ !

ಪ್ರಾದೇಶಿಕ ಭಾಷೆಗಳ ಆಧಾರದ ಮೇಲೆ ಭಾರತದಲ್ಲಿ ರಾಜ್ಯಗಳನ್ನು ರಚಿಸಲಾಗಿದ್ದು, ಒಟ್ಟಾರೆಯಾಗಿ

ಭಾರತದಲ್ಲಿ 22 ಅಧಿಕೃತ ಭಾಷೆಗಳಿವೆ. ಪ್ರತಿಯೊಂದು ಭಾಷೆಯೂ ತನ್ನದೇಯಾದ ಐತಿಹಾಸಿಕ ಹಿನ್ನೆಲೆಯೊಂದಿದ್ದು

ಶ್ರೀಮಂತ ಸಂಸ್ಕೃತಿ ಪರಂಪರೆಗಳಿಗೆ ಸಾಕ್ಷಿಯಾಗಿವೆ.

ಅದರಲ್ಲೂ ದ್ರಾವಿಡ ಭಾಷೆಗಳು ಕೊಂಚ ವಿಭಿನ್ನವಾಗಿ ಈ ನೆಲಮೂಲದ ಇತಿಹಾಸವನ್ನು ವೈಭವೀಕರಿಸಿವೆ.

ಒಕ್ಕೂಟ ರಾಷ್ಟ್ರದ ಹಿತದೃಷ್ಟಿಯಲ್ಲಿ ಭಾರತದದಲ್ಲಿರುವ ಎಲ್ಲಾ ಭಾಷೆಗಳು ಸಮಾನವಾಗಿವೆ

ಮತ್ತು ಯಾವುದೇ ಭಾಷೆಯಮೇಲೆ ಇನ್ನೊಂದು ಭಾಷೆಯನ್ನು ಹೇರಿಕೆ ಮಾಡುವುದು

ಒಕ್ಕೂಟ ವ್ಯವಸ್ಥೆಗೆ ಕೊಡಲಿಪೆಟ್ಟು ಕೊಟ್ಟಂತಾಗುವುದು ಎಂದು ಹೇಳಿದ್ದಾರೆ.

ಪ್ರಸ್ತುತ ಸರ್ಕಾರಗಳು ಪ್ರಾದೇಶಿಕ ಭಾಷೆಗಳಮೇಲೆ ಹಿಂದಿಯನ್ನು ಬಲವಂತವಾಗಿ ಹೇರಿ ಆಯಾ ಪ್ರದೇಶದ

ಭಾಷಿಗರಿಗೆ ಉಸಿರುಗಟ್ಟಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿವೆ.

 ಹಿಂದಿ ಪ್ರಚಾರ ಸಮಿತಿಗೆ ಕೋಟ್ಯಾಂತರ ಹಣ ಸುರಿದು ಕೇಂದ್ರದ ಪ್ರತಿಯೊಂದು ಸೇವೆಗಳಲ್ಲು

ಹಿಂದಿಗೆ ಪ್ರಾಮುಖ್ಯತೆ ಕೊಟ್ಟು ಭಾರತದ ಇತರ ಭಾಷೆಗಳನ್ನು ಬೇಕಂತಲೇ ಕಡೆಗಣಿಸಲಾಗುತ್ತಿದೆ.

ನಮ್ಮ ಶಾಲಾ ಪಠ್ಯದಲ್ಲು ಬಲವಂತವಾಗಿ ಹಿಂದಿಯನ್ನು ತುರುಕಿ ನಾವೆಲ್ಲರೂ ಕಡ್ಡಾಯವಾಗಿ ಹಿಂದಿ

ಕಲಿಯಬೇಕಾದ ಸ್ಥಿತಿಗೆ ನಮ್ಮನ್ನು ತಂದಿರಿಸಿವೆ ದೇಶದ ಉನ್ನತ ಹುದ್ದೆಗಳನ್ನು ಪಡೆಯಲು ಹಿಂದಿ ಕಲಿಯುವುದು ಕಡ್ಡಾಯವಾಗಿದ್ದು,

ಈ ರೀತಿ ಮಾಡಿರುವುದರಿಂದ ಹಿಂದಿ ಪ್ರದೇಶಗಳ ಜನರು ತಮ್ಮ

ಭಾಷೆಯಲ್ಲಿ ಪರೀಕ್ಷೆ ಸುಲಭವಾಗಿ ಪಾಸ್ ಮಾಡಿ ಎಲ್ಲಾ ಹುದ್ದೆಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆಯ ನಡುವೆ ದಕ್ಷಿಣ ಭಾರತದ ಪ್ರತಿಭಾನ್ವಿತ ಯುವಜನತೆ ಹಿಂದಿ ಅಥವಾ ಆಂಗ್ಲದಲ್ಲೇ ಪರೀಕ್ಷೆ ಬರೆಯಬೇಕಿದ್ದು,

ತಮ್ಮ ಭಾಷೆಯಲ್ಲಿ ಪರೀಕ್ಷೆ ಸಿಗದೆ ಇಂದು ಆ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ.

ಉತ್ತರ ಭಾರತೀಯರ ಮುಂದೆ ಗುಲಾಮರಂತೆ ಬದುಕಬೇಕಾಗಿದೆ.

ಇದು ಭಾರತದ ಇತರೆ ಭಾಷೆಗಳನ್ನು ತುಳಿದು ಹಿಂದಿಯನ್ನಷ್ಟೇ ಭಾರತದಲ್ಲಿ ಬೆಳೆಸುವ ಮತ್ತು ಉಳಿಸುವ ಪ್ರಯತ್ನವಾಗಿದ್ದು

ಇನ್ನುಮುಂದಾದರೂ ನಾವೆಲ್ಲರೂ ಎಚ್ಚೆತ್ತುಕೊಂಡು ನಮ್ಮ ಭಾಷೆಗಳನ್ನು ಹಿಂದಿಯ ದಬ್ಬಾಳಿಕೆಯ

ವಿರುದ್ಧ ರಕ್ಷಿಸಿಕೊಳ್ಳಬೇಕಿದೆ ಯಾಕೆಂದರೆ ಕನ್ನಡ ಮಾತನಾಡುವ ನಮ್ಮ ಗುರುತು 'ಕನ್ನಡಿಗರು' ಎಂಬುದೇ

ಆಗಿರುವಾಗ ಭಾಷೆ ಉಳಿದಾಗ ಮಾತ್ರ ನಮ್ಮ ಅಸ್ತಿತ್ವ ಉಳಿಯುತ್ತದೆ ಎಂದಿದ್ದಾರೆ.

ಈ ದೇಶದ ಶೇ 70 ಕ್ಕಿಂತಲೂ ಹೆಚ್ಚು ಜನರು ಇಂದಿಗೂ ಹಿಂದಿಯನ್ನು ರಾಷ್ಟ್ರ ಭಾಷೆಯೆಂದೇ ತಿಳಿದು ಬದುಕುತ್ತಿದ್ದಾರೆ.

ನಮ್ಮ ಶಾಲೆಗಳಲ್ಲು ಸಹ ಮಕ್ಕಳಿಗೆ ಹಿಂದಿ ನಮ್ಮ ರಾಷ್ಟ್ರ ಭಾಷೆಯೆಂದೇ ತಪ್ಪಾಗಿ ಹೇಳಿಕೊಡುತ್ತ ನಮ್ಮನ್ನು

ಹಿಂದಿಯ ಗುಲಾಮರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಆದ್ದರಿಂದ ಇನ್ನುಮುಂದಾದರೂ ಪ್ರತಿಯೊಬ್ಬರಿಗೂ

ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ತಿಳಿಸಿಕೊಡುವ ಪ್ರಯತ್ನ ಮಾಡಬೇಕಿದ್ದು,

ಭಾರತದಲ್ಲಿರಲು ಹಿಂದಿ ಕಲಿಯುವ ಯಾವ ಅವಶ್ಯಕತೆಯೂ ಇಲ್ಲವೆಂಬುದನ್ನು ಮನವರಿಕೆ ಮಾಡಿಕೊಟ್ಟು ಮಾತೃಭಾಷೆಯಮೇಲೆ

ಅಭಿಮಾನ ಹೆಚ್ಚುವಂತೆ ಮಾಡಬೇಕಿದೆ. ನಮ್ಮ ಶಾಲಾ ಪಠ್ಯಗಳಿಂದ ತ್ರಿ ಭಾಷ ಸೂತ್ರವನ್ನು ಕೈಬಿಟ್ಟು

ಉಪಯೋಗವಿಲ್ಲದ ಹಿಂದಿ ಕಲಿಕೆಯನ್ನು ನಿಲ್ಲಿಸುವುದರ ಜೊತೆಗೆ ಭಾರತದ ಎಲ್ಲಾ ಅಧಿಕೃತ ಭಾಷೆಗಳಲ್ಲು

ಸಮಾನವಾಗಿ ಕೇಂದ್ರ ಸರ್ಕಾರದ ಸೇವೆಗಳು ದೊರಕುವಂತೆ ಮಾಡಬೇಕಿದೆ ಇದೆಲ್ಲಾ ಸಾಧ್ಯವಾಗುವುದು

ನಾವೆಲ್ಲರೂ ಜಾತಿ ಧರ್ಮ ಪಕ್ಷ ಇತ್ಯಾದಿ ಭೇದಗಳನ್ನು ಮರೆತು

ನಮ್ಮ ಭಾಷೆಯೇ ಮೊದಲು ಅದೇ ನಮಗೆ ಮುಖ್ಯವೆಂದು ಒಗ್ಗಟ್ಟಾದಾಗ ಮಾತ್ರ !

ಕನ್ನಡಿಗರ ಮೇಲೆ ಹಿಂದಿ ಹೇರಿಕೆ ನಿಲ್ಲಲಿ... ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ..💛❤️ ಎಂದು ಹೇಳಿದ್ದಾರೆ.