ಹೊಸದಿಲ್ಲಿ: ಷೇರು ಮಾರುಕಟ್ಟೆಯಲ್ಲಿ ಮತ್ತೆ ಕುಸಿತ ಕಂಡಿದ್ದು, ನಷ್ಟದಿಂದ ಷೇರು ಹೂಡಿಕೆದಾರರು ಮತ್ತೆ ತತ್ತರಿಸಿ ಹೋಗಿದ್ದಾರೆ. ರೂಪಾಯಿ ಅಪಮೌಲ್ಯಗೊಂಡಿರುವುದರಿಂದ ಬಿಎಸ್ಇ ಸೆನ್ಸೆಕ್ಸ್ 800ಕ್ಕೂ ಅಧಿಕ ಅಂಶಗಳಷ್ಟು ಕುಸಿತ ಕಂಡಿದೆ.
35,820.53ರಲ್ಲಿ ಆರಂಭಗೊಂಡ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಮಾರುಕಟ್ಟೆ ಬೆಳಗ್ಗೆಯೇ 150 ಅಂಶಗಳಷ್ಟು ಕುಸಿತ ಕಂಡಿತು. ಬಳಿಕ, ಕೆಲವೇ ಹೊತ್ತಿನಲ್ಲಿ 35,300 ಅಂಶಗಳ ಕೆಳಗಿಳಿದ ಸೂಚ್ಯಂಕ, ಮಧ್ಯಾಹ್ನ 1.45ರ ವೇಳೆಗೆ ಸುಮಾರು 857.50 ಅಂಶಗಳಷ್ಟು ದೀರ್ಘ ಕುಸಿತ ಕಂಡಿದ್ದು, 35,118.13 ಸೂಚ್ಯಂಕಕ್ಕೆ ಇಳಿದಿದೆ. ಇನ್ನೊಂದೆಡೆ, 50 ಷೇರುಗಳ ಎನ್ಎಸ್ಇ ಷೇರು ಮೌಲ್ಯ ಸಹ ಶೇ. 2.5ರಷ್ಟು ಇಳಿಕೆಯಾಗಿದ್ದು, 10,600 ರ ಆಸುಪಾಸಿಗೆ ಕುಸಿತ ಕಂಡಿದೆ.
ಇನ್ನೊಂದೆಡೆ, ರೂಪಾಯಿ ಮೌಲ್ಯದಲ್ಲೂ ಭಾರಿ ಕುಸಿತ ಕಂಡಿದ್ದು ಮತ್ತೆ 43 ಪೈಸೆ ಅಪಮೌಲ್ಯಗೊಂಡಿದೆ. ಯುಎಸ್ ಡಾಲರ್ ಎದುರು ನಿನ್ನೆ 73.34ರಷ್ಟಿದ್ದ ರೂಪಾಯಿ ಮೌಲ್ಯ ಇಂದು 73.77ಕ್ಕೆ ಅಪಮೌಲ್ಯಗೊಂಡಿದೆ. ಅಮೆರಿಕ ಡಾಲರ್ಗೆ ಹೆಚ್ಚು ಡಿಮ್ಯಾಂಡ್, ವಿದೇಶಿ ನಿಧಿ ಹೊರಹರಿವು ಹಾಗೂ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಿಂದಾಗಿ ರೂಪಾಯಿ ಮೌಲ್ಯ ಹಲವು ದಿನಗಳಿಂದ ಕುಸಿಯುತ್ತಿದೆ.