News

ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆದು ಸುಲಭವಾಗಿ ಸಾಲಸೌಲಭ್ಯ ಪಡೆಯಿರಿ

23 August, 2020 11:25 AM IST By:

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ  ಸುಲಭವಾಗಿ ಸಾಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ವಿತರಣೆ ಮಾಡಲು ಮುಂದಾಗಿರುವ ಕಿಸಾನ್‌ ಕ್ರೆಡಿಟ್‌ ಕಾರ್ಡ್‌  (Kisan Credit Card) ಜಾಗೃತಿಯ ಕೊರತೆಯಿಂದಾಗಿ ಇನ್ನೂ ಹಲವಾರು ರೈತರು ಕಾರ್ಡ್ ಪಡೆಯಲಾಗುತ್ತಿಲ್ಲ. ಈ  ಯೋಜನೆಯಡಿ ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರದಿಂದ ಹೆಚ್ಚುವರಿಯಾಗಿ ಅನುದಾನ ಬಂದಿದ್ದರೂ ಸರ್ಕಾರ ಜಾಗೃತಿ ಮೂಡಿಸುವಲ್ಲಿ ಹಿಂದುಳಿದಿದೆ.

ರೈತರಿಗೆ ಆರ್ಥಿಕ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ಕಾರ್ಡ್‌ ಮೂಲಕ ರೈತರು (Farmers) ಸುಲಭವಾಗಿ ಬ್ಯಾಂಕ್‌ಗಳಿಂದ ದೀರ್ಘಾವಧಿ ಸಾಲ (Bank loan) ಸೌಲಭ್ಯವನ್ನು ಪಡೆಯಬಹುದು. ಗೊಬ್ಬರ, ಬಿತ್ತನೆ ಬೀಜಗಳ ಖರೀದಿಗೂ ಸಹಾಯವಾಗಲಿದೆ. ಆದರೆ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮಹತ್ವದ ಕುರಿತು ಜಾಗೃತಿ ಮೂಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ ಎಂಬ ಆರೋಪ ರೈತರದ್ದಾಗಿದೆ. ರಾಜ್ಯದಲ್ಲಿ ಒಟ್ಟು 86,77,00 ರೈತ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ ಇನ್ನೂ ಶೇ 30 ಲಕ್ಷಕ್ಕಿಂತ  ಹೆಚ್ಚು ರೈತರು ಕಾರ್ಡ್ ಪಡೆದಿಲ್ಲ ಎನ್ನಲಾಗುತ್ತಿದೆ.

ಕಿಸಾನ್ ಕ್ರೇಡಿಟ್ ಕಾರ್ಡ್‌ ಮೂಲಕ ರೈತರು ಸುಲಭವಾಗಿ ಬ್ಯಾಂಕ್‌ಗಳಿಂದ ದೀರ್ಘಾವಧಿ ಸಾಲ ಸೌಲಭ್ಯವನ್ನು ಪಡೆಯಬಹುದು. ಸಾಲ ಮರುಪಾವತಿಯೂ ಸುಲಭವಾಗಿದೆ. ಗೊಬ್ಬರ, ಬಿತ್ತನೆ ಬೀಜಗಳ ಖರೀದಿಯಲ್ಲಿ ಸಹಕಾರಿಯಾಗಲಿದ್ದು, ಕಡಿಮೆ ದಾಖಲೆಗಳನ್ನು ಸಲ್ಲಿಸಿ ಲಾಭ ಪಡೆಯಬಹುದು, ಕಾರ್ಡ್‌ ಮೂಲಕ ರೈತರಿಗೆ ಮೂರು ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತದೆ.  ಇತ್ತೀಚೆಗೆ ಮೀನುಗಾರಿಕೆ ಮತ್ತು ಪಶುಸಂಗೋಪನೆ ವೃತ್ತಿಯಲ್ಲಿರುವವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡುವುದಾಗಿ ಸರ್ಕಾರ ಹೇಳಿದೆ. ಹೆಚ್ಚಿನ ರೈತರು ಈ ಸೌಲಭ್ಯ ಪಡೆದುಕೊಳ್ಳಬೇಕು.

ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆಯದ ರೈತರು ಈ ಕೆಳಗಿನ ದಾಖಲಾತಿ ಸಲ್ಲಿಸಿ ಪಡೆಯಬಹುದು.

ಬೇಕಾಗುವ ದಾಖಲೆಗಳು (Documents):

ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ ಅಥವಾ ಖುದ್ದಾಗಿ ಬ್ಯಾಂಕ್‌ನಲ್ಲಿ ಅರ್ಜಿ ಪಡೆದುಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ವಾಸಸ್ಥಳ ದೃಢೀಕರಣ ಪತ್ರ, ಪಹಣಿ, ಎರಡು ಭಾವಚಿತ್ರ ಅರ್ಜಿ ಸಲ್ಲಿಸಬೇಕು. ಒಂದು ವರ್ಷದ ಅವಧಿಗೆ ಸಾಲ ಮಂಜೂರಾದ ಕಾರ್ಡ್‌ನ ಅಲ್ಪಾವಧಿ ಸಾಲದ ಭಾಗವು ನಗದು ಮುಂಗಡದ ರೂಪದಲ್ಲಿದ್ದು, ತನಗೆ ಅಗತ್ಯ ಬೀಳುವ ಸಂದರ್ಭದಲ್ಲಿ ಕಾರ್ಡ್‌ದಾರರು ಬೇಕಾದಷ್ಟೇ ಮೊತ್ತವನ್ನು ತನ್ನ ಖಾತೆಯಿಂದ ಪಡೆಯಬಹುದಾಗಿದೆ. ಖಾತೆಯಿಂದ ಪಡೆದ ಪ್ರತಿ ಕಂತಿನ ಮೊತ್ತ ಒಂದು ವರ್ಷ ಅವಧಿಯ ಒಳಗಾಗಿ ಮರುಪಾವತಿಯಾಗಬೇಕು.

ಸಾಲಕ್ಕೆ ಅರ್ಹತೆಗಳೇನು (Eligibility):

ಬಾಡಿಗೆ ಕೃಷಿಕರು, ಸ್ವಂತ ಹಿಡುವಳಿದಾರರು, ಸ್ವಂತ ಹಿಡುವಳಿಯುಳ್ಳ ಬೆಳೆ ಪಾಲುದಾರರು, ಭೋಗ್ಯ ಕೃಷಿಕರು, ಸ್ವ ಸಹಾಯ ಸಂಘಗಳು, ಕೃಷಿಕರು, ಕೃಷಿಕರ ಸಂಯುಕ್ತ ಋಣಭಾರ ಗುಂಪುಗಳು ಸಾಲ ಸೌಲಭ್ಯ ಪಡೆಯಬಹುದು.

ಯಾವುದಕ್ಕೆ ಸಾಲ:

ಬೆಳೆ ಬೆಳೆಯಲು ಬೇಕಾಗುವ ಬೀಜ, ಗೊಬ್ಬರ ಇತ್ಯಾದಿ ಅಲ್ಪಾವಧಿ ಖರ್ಚುಗಳಿಗೆ, ಫ‌ಸಲು ಬಂದ ಅನಂತರ ಬೆಳೆಯ ಸಂಸ್ಕರಣೆಗೆ ಮಾಡಬೇಕಾದ ಖರ್ಚು ವೆಚ್ಚಗಳಿಗೆ, ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ದರ ಬರುವವರೆಗೆ ಕಾಯ್ದಿಡಬೇಕಾದ ಅವಧಿಯಲ್ಲಿ ಅಗತ್ಯವಿರುವ ಕೃಷಿ ಖರ್ಚು, ರೈತನ ಮನೆಯ ಗೃಹಸಂಬಂಧಿ ಖರ್ಚು, ಕೃಷಿಗೆ ಸಂಬಂಧಿಸಿದ ಪರಿಕರಗಳ ರಿಪೇರಿ ಮತ್ತು ನಿರ್ವಹಣೆಗೆ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಇತ್ಯಾದಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನಲ್ಲಿ ಸಾಲ ಪಡೆಯಬಹುದು.

ಬಡ್ಡಿ ದರ (Interest rate):

ತೆಯ ಅವಶ್ಯಕತೆ ಇಲ್ಲ. ಮೂರು ಲಕ್ಷದವರೆಗಿನ ಅಲ್ಪಾವಧಿ ಸಾಲಕ್ಕೆ ಈಗ ಶೇ.7 ಬಡ್ಡಿ ಇದ್ದು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದವರಿಗೆ ಶೇ.4 ರ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ. ಅವಧಿ ಸಾಲಗಳಿಗೆ ತುಸು ಹೆಚ್ಚಿನ ಬಡ್ಡಿ ಅಂದರೆ, ಶೇ.10.50 ರಿಂದ ಶೇ.11ರ ವರೆಗೆ ಇದೆ. ಒಂದು ಲಕ್ಷದವರೆಗಿನ ಸಾಲಕ್ಕೆ ಯಾವುದೇ ಭದ್ರತೆಯ ಅವಶ್ಯಕತೆಯಿಲ್ಲ.

ಸಾಲ ಮಿತಿ ನಿರ್ಧಾರ ಹೇಗೆ:

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನ ಅವಧಿ 5 ವರ್ಷಗಳವರೆಗಿದ್ದು, ಮೊದಲ ವರ್ಷದ ಸಾಲಮಿತಿಯನ್ನು ಕಾರ್ಡ್‌ದಾರನ ಹಿಡುವಳಿಯ ಪ್ರಮಾಣ, ಕೈಗೊಳ್ಳುವ ವಿವಿಧ ಬೆಳೆಗಳ ಹಿಡುವಳಿ ವಿಸ್ತಾರ, ಪ್ರತಿ ಎಕರೆಗೆ ಸಾಲ ನೀಡುವ ಮಿತಿ (ಜಿಲ್ಲಾಮಟ್ಟದ ತಾಂತ್ರಿಕ ಸಮಿತಿ ನಿರ್ಧರಿಸಿದಂತೆ) ಇತ್ಯಾದಿಗಳನ್ನು ನಿರ್ಧರಿಸಿ ಪರಿಗಣಿಸಿ ನೀಡಲಾಗುತ್ತದೆ.