News

ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಬಂದಿಲ್ಲವೇ? ಹಾಗಾದ್ರೆ ನೀವು ಈ ತಪ್ಪು ಮಾಡಿರಬಹುದು...

31 July, 2021 2:02 PM IST By:

ನೀವು ಸಣ್ಣ ಹಿಡುವಳಿದಾರರಾಗಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸಮ್ಮಾನ ಧನ ಪಡೆಯಲು ಅರ್ಜಿ ಸಲ್ಲಿಸಿ ಕಾಯುತ್ತಿದ್ದೀರಾ? ನಿಮ್ಮ ಪಕ್ಕದ ಮನೆಯಲ್ಲಿರುವ ಅಥವಾ ಪಕ್ಕದ ಹೊಲದ ರೈತರಿಗೆ ಬಂದಿರುವ ಕಂತಿನ ಹಣ ನಿಮಗೆ ಮಾತ್ರ ಇನ್ನೂ ಬಂದಿಲ್ಲವೇ? ಹಾಗಾದರೆ ನೀವು ಅರ್ಜಿ ಸಲ್ಲಿಸುವಾಗ ಕೆಲವೊಂದು ತಪ್ಪು ಮಾಡಿದ್ದೀರಿ ಎಂದರ್ಥ!

ಹೌದು, ರೈತರು ಅರ್ಜಿ ಸಲ್ಲಿಸುವಾಗ, ಸಲ್ಲಿಸಿದ ನಂತರ ಮಾಡಿರುವ ಕೆಲವು ಸಣ್ಣ-ಪುಟ್ಟ ತಪ್ಪುಗಳಿಂದಾಗಿ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ. ಅದು ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿರಬಹುದು, ಮೊಬೈಲ್ ಸಂಖ್ಯೆ ತಪ್ಪಾಗಿರಬಹುದು ಅಥವಾ ಬ್ಯಾಂಕ್ ಖಾತೆಯೊಂದಿಗೆ ಆಧಾರ್-ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡಿರದೇ ಇರಬಹುದು ಇಲ್ಲವೇ ನೀವು ನೀಡಿರುವ ಬ್ಯಾಂಕ್ ಖಾತೆ ವಿವರಗಳು ತಪ್ಪಾಗಿರಬಹುದು. ಹೀಗೆ ಹತ್ತು ಹಲವು ಕಾರಣಗಳಿಂದಾಗಿ ರೈತರ ಖಾತೆಗೆ ಹಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಕೇಂದ್ರ ಸರ್ಕಾರವೇ ಹೇಳಿದೆ.

ಕೇಂದ್ರ ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ ದೇಶದಾದ್ಯಂತ ಸುಮಾರು 40 ಲಕ್ಷಕ್ಕೂ ಅಧಿಕ ರೈತರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ರೈತರು ತಪ್ಪು ಮಾಹಿತಿ ನೀಡಿರುವುದೇ ಇದಕ್ಕೆ ಕಾರಣ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಡಿಯಲ್ಲಿ ಈಗಾಗಲೇ 8 ಕುಂತುಗಳ ಹಣವನ್ನು ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ. ಇದೀಗ 9ನೇ ಕಂತಿನ ಹಣ ಖಾತೆ ಸೇರುವುದನ್ನೇ ರೈತರು ಎದುರು ನೋಡುತ್ತಿದ್ದಾರೆ. ದೇಶದ ಸುಮಾರು 13 ಕೋಟಿ ರೈತರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ವೇಳೆ, ಲಕ್ಷಾಂತರ ರೈತರಿಗೆ ಒಂದೇ ಒಂದು ಕಂತಿನ ಹಣ ಕೂಡ ಬಂದಿಲ್ಲ. ಇವರೆಲ್ಲರೂ ನಮಗೇಕೆ ಸಮ್ಮಾನ ನಿಧಿಯ ಹಣ ಬಂದಿಲ್ಲ ಎಂಬ ಚಿಂತೆಯಲ್ಲಿದ್ದಾರೆ.

ಎರಡು ಹೆಕ್ಟೇರ್‌ಗಿಂತಲೂ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದೊಂದಿಗೆ 2018ರಲ್ಲಿ ಕೆಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ’ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿ ರೈತರಿಗೆ ವರ್ಷಕ್ಕೆ 6,000 ರೂಪಾಯಿ ಗೌರವಧನವನ್ನು ನೀಡಲಾಗುತ್ತದೆ. ಈ ಹಣವು ನಾಲ್ಕು ತಿಂಗಳಿಗೆ ಒಮ್ಮೆ, ವರ್ಷದಲ್ಲಿ ಮೂರು ಬಾರಿ, ಅಂದರೆ ಮೂರು ಕಂತುಗಳಲ್ಲಿ (ಒಂದು ಕಂತಿಗೆ 2000 ರೂಪಾಯಿಯಂತೆ) ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಸೇರುತ್ತದೆ.

ಯೋಜನೆಯಡಿ 9ನೆಯ ಕಂತಿನ ಗೌರವ ಧನವನ್ನು ಸರ್ಕಾರ ಆಗಸ್ಟ್ ತಿಂಗಳಿನಲ್ಲಿ ರೈತರ ಖಾತೆಗೆ ವರ್ಗಾಯಿಸಲಿದೆ. ಆದರೆ, ಇದುವರೆಗೂ 40 ಲಕ್ಷಕ್ಕೂ ಹೆಚ್ಚು ರೈತರ ಖಾತೆಗೆ ಗೌರವ ಧನ ತಲುಪಲೇ ಇಲ್ಲ. ಅಂದರೆ ಈ ಖಾತೆಗಳಿಗೆ ಹಣ ವರ್ಗಾವಣೆ ಪ್ರಕ್ರಿಯೆ ವಿಫಲವಾಗಿದೆ. 2021ರ ಜೂನ್ ತಿಂಗಳವರೆಗೆ ಪಿಎಂ ಕಿಸಾನ್ ಸಮ್ಮಾನ ಯೋಜನೆಯ 40,16,867 ರೈತ ಫಲಾನುಭವಿಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ವಹಿವಾಟುಗಳು ವಿಫಲವಾಗಿದ್ದು, ಇದಕ್ಕೆ ಹಲವು ಕಾರಣಗಳಿವೆ.

ವಹಿವಾಟು ವಿಫಲವಾಗಲು ಏಳು ಕಾರಣಗಳು

1 ಫಲಾನುಭವಿ ರೈತರ ಬ್ಯಾಂಕ್ ಖಾತೆ ಕಾರ್ಯನಿರ್ವಹಿಸುತ್ತಿಲ್ಲ. ಅಂದರೆ ಯೋಜನೆಯಡಿ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಯನ್ನು ರೈತರು ಬಹು ದಿನಗಳಿಂದ ಬಳಸಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ಖಾತೆಯನ್ನು ಬ್ಯಾಂಕ್, ‘ನಿಷ್ಕ್ರಿಯ ಖಾತೆ’ ಎಂದು ತೀರ್ಮಾನಿಸಿ ಸ್ಥಗಿತಗೊಳಿಸಿರುತ್ತದೆ.

  1. ಬ್ಯಾಂಕ್ ಖಾತೆ ವರ್ಗಾವಣೆಯಿಂದಾಗಿ ವಹಿವಾಟು ವಿಫಲ. ಫಲಾನುಭವಿ ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸಿಕೊಂಡಿದ್ದರೂ ವಹಿವಾಟು ವಿಫಲವಾಗಿರುತ್ತದೆ.
  1. ಐಎಫ್‌ಎಸ್‌ಸಿ ಕೋಡ್ ತಪ್ಪಾಗಿ ನಮೂದಿಸಿದ್ದೀರಿ. ಆನ್‌ಲೈನ್ ಮೂಲಕ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದರೆ ಐಎಫ್‌ಎಸ್‌ಸಿ (ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ ಕೋಡ್) ಬೇಕೇ ಬೇಕು. ಈ ಕೋಡ್ ತಪ್ಪಾಗಿದ್ದರೆ, ಬ್ಯಾಂಕ್ ಖಾತೆ ಸಂಖ್ಯೆ ಸರಿಯಾಗಿದ್ದರೂ ಹಣ ವರ್ಗಾವಣೆ ಆಗುವುದಿಲ್ಲ.
  2. ರೈತರ ಖಾತೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಹಣದ ವಹಿವಾಟು ನಡೆದಿದ್ದ ಸಂದರ್ಭದಲ್ಲೂ ಹಣ ವರ್ಗಾವಣೆ ವಿಫಲವಾಗಿರುವ ಸಾಧ್ಯತೆ ಇರುತ್ತದೆ. ಅಂದರೆ, ಫಲಾನುಭವಿ ರೈತರ ಖಾತೆಯಲ್ಲಿ ವಾರ್ಷಿಕ ಇಂತಿಷ್ಟೇ ಹಣದ ವಹಿವಾಟು ಆಗಬೇಕು ಎಂಬ ಮಿತಿ ಇದೆ. ಆ ಮಿತಿ ಮೀರಿ ವಹಿವಾಟು ನಡೆದಿದ್ದರೆ ಪಿಎಂ ಕೃಷಿ ಸಮ್ಮಾನ ನಿಧಿಯ ಹಣ ಬರುವುದಿಲ್ಲ.
  3. ಯೋಜನೆ ಅಡಿ ನೋಂದಣಿ ಮಾಡಿಕೊಂಡಿರುವ ಫಲಾನುಭವಿ ರೈತರು ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಅವರ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ. ವಾರಸುದಾರರು ಅಥವಾ ನಾಮಿನಿಗೆ ಗೌರವ ಧನ ನೀಡಲು ಯೋಜನೆ ಅಡಿ ಅವಕಾಶವಿಲ್ಲ. ಹೀಗಾಗಿ ಮೃತ ಫಲಾನುಭವಿಯ ವಾರಸುದಾರರು ಹೊಸದಾಗಿ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
  4. ಬ್ಯಾಂಕ್ ಖಾತೆ ಬ್ಲಾಕ್ ಆಗಿದೆಯೇ ಪರಿಶೀಲಿಸಿ. ಒಂದೊಮ್ಮೆ ವಿವಿಧ ಕಾರಣಗಳಿಂದಾಗಿ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದರೆ ಅಥವಾ ನಿರ್ಬಂಧಿಸಲ್ಪಟ್ಟಿದ್ದರೆ ಗೌರವ ಧನ ಖಾತೆಗೆ ಬರುವುದಿಲ್ಲ. ರೈತರು ಸಾಲ ಪಾವತಿಸದೆ ಸುಸ್ತೀದಾರರಾಗಿದ್ದ ಸಂದರ್ಭದಲ್ಲಿ ಖಾತೆಗಳನ್ನು ಬ್ಲಾಕ್ ಮಾಡಲಾಗುತ್ತದೆ.
  5. ಆಧಾರ್ ಸಂಖ್ಯೆ ತಪ್ಪಾಗಿದ್ದರೆ ಇಲ್ಲವೇ ಸಕ್ರಿಯವಾಗಿರದ ಆಧಾರ್ ಸಂಖ್ಯೆ ನೀಡಿದ್ದರೂ ಪಿಎಂ ಕಿಸಾನ್ ಸಮ್ಮಾನ ನಿಧಿ ರೈತರ ಖಾತೆಗೆ ಸೇರುವುದಿಲ್ಲ. ಆದ್ದರಿಂದ ಮೊದಲು ನಿಮ್ಮ ಆಧಾರ್ ಸಂಖ್ಯೆಯನ್ನು ಆಕ್ಟಿವೇಟ್ ಮಾಡಿಸಿ. ಬಳಿಕ ಈ ಕೆಳಗೆ ನೀಡಿರುವ ವಿಧಾನ ಅನುಸರಿಸಿ ಆಧಾರ್ ಸಂಖ್ಯೆ ಅಪ್‌ಡೇಟ್ ಮಾಡಿ.

ಯೋಜನೆ ವೆಬ್‌ಸೈಟಿನಲ್ಲಿ ಆಧಾರ್ ತಿದ್ದುಪಡಿ ಹೇಗೆ?

* ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್‌ಸೈಟ್ pmkisan.gov.in ಗೆ ಲಾಗಿನ್ ಆಗಿ.

* ಅಲ್ಲಿ ‘ಫಾರ್ಮರ್ಸ್ ಕಾರ್ನರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

* ಬಳಿಕ ತೆರೆದುಕೊಳ್ಳುವ ಆಯ್ಕೆಗಳಲ್ಲಿ ‘ಆಧಾರ್ ಎಡಿಟ್’ ಲಿಂಕ್ ಮೇಲೆ ಒತ್ತಿ.

* ನಂತರ ಓಪನ್ ಆಗುವ ಪುಟದಲ್ಲಿ ಆಧಾರ್ ಸಂಖ್ಯೆ ಸರಿಪಡಿಸಿ ಸೇವ್ ಮಾಡಿ.

ಮೇಲೆ ತಿಳಿಸಲಾಗಿರುವ ತಪ್ಪುಗಳತ್ತ ಗಮನಹರಿಸಿ, ಅವುಗಳನ್ನು ಸರಿಪಡಿಸಿದ್ದೇ ಆದರೆ ಯೋಜನೆಯ ಮುಂದಿನ ಕಂತಿನ ಹಣ ನಿಮ್ಮ ಖಾತೆ ಸೇರುವುದರಲ್ಲಿ ಅನುಮಾನವೇ ಇಲ್ಲ.