News

ಹೊಸ ತಾಲೂಕುಗಳಿಗೆ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಬದ್ಧ -ಸಚಿವ ಕೃಷ್ಣ ಬೈರೇಗೌಡ

01 August, 2023 1:46 PM IST By: Maltesh

ರಾಜ್ಯದಲ್ಲಿ ಹೊಸದಾಗಿ ರಚಿಸಲಾಗಿರುವ 63 ತಾಲೂಕುಗಳಲ್ಲಿ ತಾಲೂಕು ಮಟ್ಟದ ಕಚೇರಿ ಪೈಕಿ 20 ತಾಲೂಕುಗಳಲ್ಲಿ ಮೂಲಸೌಕರ್ಯ ಕಲ್ಪಿಸಿದ್ದು, ಉಳಿದ ತಾಲೂಕುಗಳಲ್ಲಿ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸೋಮವಾರ ಕಲಬುರ್ಗಿಯ  ಡಿ.ಸಿ.ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನಂತರ 

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೂತನ ತಾಲೂಕುಗಳಲ್ಲಿ ಆದ್ಯತೆ ಮೇಲೆ ಮೂಲಸೌಕರ್ಯ ನೀಡಲಾಗುವುದು ಎಂದರು. 

ಈ ದಿನ ಪ್ರಗತಿ ಪರಿಶೀಲನೆಯಲ್ಲಿ ಇತ್ತೀಚಿನ ನೆರೆ ಹಾವಳಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇನೆ. ಹೊಸ ಸರ್ಕಾರದ ಆಶಯಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಅಧಿಕಾರಿಗಳು ಸಹ ಇರುವ ವ್ಯವಸ್ಥೆಯಲ್ಲಿ ಮತ್ತಷ್ಟು ಸರಳೀಕರಣಕ್ಕೆ ಸಲಹೆ ನೀಡಿದ್ದಾರೆ ಎಂದರು.

ನೆರೆ ಹಾವಳಿ ಪರಿಹಾರಕ್ಕೆಂದೆ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಗೆ 141 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನು ಧೀರ್ಘಾವಧಿ ಯೋಜನೆಗಳ ಸಾಕಾರಕ್ಕೆ 39 ಕೋಟಿ ರೂ. ಹಾಗೂ ಇನ್ನಿತರ ಕೆಲಸಗಳಿಗೆ 13 ಕೋಟಿ ರೂ. ಅನುದಾನ ಒದಗಿಸಲಾಗಿದೆ. ನೆರೆ ಹಾವಳಿ ಪರಿಹಾರ ಮತ್ತು ಮಳೆ ಹಾನಿಯಿಂದ ತ್ವರಿತ ರೀತಿಯಲ್ಲಿ ಕೆಲಸ ನಿರ್ವಹಿಸಲು ಯಾವುದೇ ಅನುದಾನ ಕೊರತೆಯಿಲ್ಲ. ಅವಶ್ಯಕತೆ ಇದ್ದಲ್ಲಿ ಇನ್ನೂ ಅನುದಾನ ನಿಡಲಾಗುವುದು ಎಂದರು.

ಕಲಬುರಗಿ ವಿಭಾಗದಲ್ಲಿ ಪಹಣಿ ತಿದ್ದುಪಡಿ, ವರ್ಗಾವಣೆ, ಕಂದಾಯ ನ್ಯಾಯಲಯಗಳ ಪ್ರಕರಣಗಳು ಸೇರಿದಂತೆ ಒಟ್ಟು 1.50 ಲಕ್ಷ ಕೇಸ್ ಬಾಕಿ ಇವೆ. ಇದರಲ್ಲಿ ಶೇ.75ರಷ್ಟು ಕ್ಲಿಷ್ಟಕರ ಅಲ್ಲದ ಪ್ರಕರಣಗಳಿದ್ದುಇವುಗಳನ್ನು ಮುಂದಿನ 3 ತಿಂಗಳಲ್ಲಿ ಅಭಿಯಾನದ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.

ಹೊಸದಾಗಿ ಸಬ್ ರಿಜಿಸ್ಟಾರ್ ಕಚೇರಿ ಸ್ಥಾಪನೆಗೆ ಮಾಹಿತಿ ಸಂಗ್ರಹ: ರಾಜ್ಯದಲ್ಲಿ ಹೊಸದಾಗಿ ಸಬ್ ರಿಜಿಸ್ಟಾರ್ ಕಚೇರಿ ಸ್ಥಾಪನೆ ಸಂಬಂಧ ಪ್ರಸ್ತುತ ಇರುವ ಎಸ್.ಆರ್.ಓ. ಕಚೇರಿಯಲ್ಲಿ ದೈನಂದಿನ ವ್ಯವಹಾರಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. 2 ತಿಂಗಳಿನಲ್ಲಿ ಮಾಹಿತಿ ಸಿಗಲಿದ್ದು, ತದನಂತರ ಹೆಚ್ಚಿನ ಕಾರ್ಯದೊತ್ತಡ ಇರುವ ತಾಲೂಕಿನಲ್ಲಿ ಹೊಸದಾಗಿ ಎಸ್.ಆರ್.ಓ. ಕಚೇರಿ ಸ್ಥಾಪಿಸಲು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ನೋಂದಣಿ ಸೋರಿಕೆ ತಡೆಗೆ ಕ್ರಮ: ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಆಸ್ತಿಗಳ ಮಾರಾಟ, ಒಪ್ಪಂದ ಪ್ರಕರಣದಲ್ಲಿ ನಿಗದಿತ ಮೌಲ್ಯಕ್ಕಿಂತ ಕಡಿಮೆ ಮೌಲ್ಯ ದಾಖಲಿಸಿ ಸರ್ಕಾರಕ್ಕೆ ಬರಬೇಕಾದ ಕಂದಾಯ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಪರಿಶೀಲನೆಗೆ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳ ತಂಡ ಸಬ್ ರಿಜಿಸ್ಟಾçರ್ ಕಚೇರಿಗೆ ಕಳುಹಿಸಿ ತಪಾಸಣೆ ಮಾಡಲಾಗುತ್ತದೆ. ಈ ಮೂಲಕ ಸರ್ಕಾರಕ್ಕೆ ಆಗುತ್ತಿರುವ ನಷ್ಠ ತಪ್ಪಿಸಲಾಗುವುದು ಎಂದರು.