News

ಸುಕನ್ಯಾ ಸಮೃದ್ಧಿ'ಯಲ್ಲಿ 'ಭಾಗ್ಯಲಕ್ಷ್ಮಿ' ಯೋಜನೆ ವಿಲೀನಕ್ಕೆ ರಾಜ್ಯ ಸಂಪುಟ ಒಪ್ಪಿಗೆ

23 October, 2020 7:31 AM IST By:

ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೆಚ್ಚಿನ 'ಭಾಗ್ಯಲಕ್ಷ್ಮೀ' ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಬದಲು ಅಂಚೆ ಇಲಾಖೆಯ 'ಸುಕನ್ಯಾ ಸಮೃದ್ಧಿ' ಮೂಲಕ ಮುಂದುವರಿಸಲು ರಾಜ್ಯ ಸಂಪುಟ ಸಭೆ ಆಡಳಿತಾತ್ಮಕ ಸಮ್ಮತಿ ನೀಡಿದೆ.

ಭಾಗ್ಯಲಕ್ಷ್ಮೀ ಯೋಜನೆಯು ಇನ್ನುಮುಂದೆ ಎಲ್ಐಸಿ ಬದಲು ಅಂಚೆ ಇಲಾಖೆಯ 'ಸುಕನ್ಯಾ ಸಮೃದ್ಧಿ' ಯೋಜನೆ ಹೆಸರಲ್ಲಿ ಮುಂದುವರಿಯಲಿದೆ. ಈ ಯೋಜನೆಗೆ ಎಲ್‌ಐಸಿ ಬದಲು ಅಂಚೆ ಇಲಾಖೆಯೇ ಏಜೆನ್ಸಿಯಾಗಿರುತ್ತದೆ. ಈ ಕುರಿತು ರಾಜ್ಯ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ  ಸಚಿವ ಸಂಪುಟದ ಒಪ್ಪಿಗೆ ಸಿಗಬೇಕಿತ್ತು. ಭಾಗ್ಯಲಕ್ಷ್ಮೀ ಯೋಜನೆಯನ್ನು ಮರು ವಿನ್ಯಾಸಗೊಳಿಸಿ ಜಾರಿ ಮಾಡುವುದರಿಂದ ಫಲಾನುಭವಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ. ಸರ್ಕಾರ ನೀಡಿದ್ದ ಭರವಸೆಯಂತೆಯೇ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ 1 ಲಕ್ಷ ರೂಪಾಯಿ ಸಿಗುತ್ತದೆ.

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ವು  ಈ ಹಿಂದೆ ಭಾಗ್ಯಲಕ್ಷ್ಮೀ ಬಾಂಡುಗಳ ಮೆಚ್ಯೂರಿಟಿ ನಂತರ ಫಲಾನುಭವಿಗೆ 1 ಲಕ್ಷ ರೂಪಾಯಿ ನೀಡಲು ತಕರಾರು ಮಾಡುತ್ತಲೇ ಇತ್ತು. ಈ ಕುರಿತ ಕಳೆದ ಬಜೆಟ್‌ ತಯಾರಿಕೆ ಸಂದರ್ಭ ಚರ್ಚೆಗೆ ಬಂದಿತ್ತು. ಬಡ್ಡಿದರ ಕಡಿಮೆ ಇರುವುದರಿಂದ, ಕಡಿಮೆ ಬೀಳುವ ಮೊತ್ತವನ್ನು ಸರಕಾರವೇ ಭರಿಸಬೇಕು ಎಂದುದು ಎಲ್‌ಐಸಿಯ ವಾದವಾಗಿತ್ತು. ಇದೇ ಕಾರಣದಿಂದ ಭಾಗ್ಯಲಕ್ಷ್ಮೀ ಯೋಜನೆಯನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ವರ್ಗಾಯಿಸಲಾಗಿದೆ.  ಭಾಗ್ಯಲಕ್ಷ್ಮೀ ಯೋಜನೆಯನ್ನು ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದಿದ್ದರು. ಈ ಯೋಜನೆಯು ರಾಜ್ಯಾದ್ಯಂತ ಹೆಚ್ಚು ಪ್ರಸಿದ್ಧಿಯೂ ಪಡೆದಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾರಿಗೆ ತಂದ ಪ್ರಮುಖ ಯೋಜನೆಗಳಲ್ಲಿ ಇದೂ ಸಹ ಒಂದಾಗಿದೆ.

ಪ್ರತಿ ಮಗುವಿಗೆ 1 ಲಕ್ಷ ಬದಲು 1.27 ಮೆಚ್ಯುರಿಟಿ ಹಣ:

ಈಗ ಪ್ರತಿ ಮಗುವಿಗೆ 1 ಲಕ್ಷ ರೂಪಾಯಿ ಬದಲಿಗೆ 1.27 ಲಕ್ಷ ರೂಪಾಯಿ ಬಾಂಡ್ ಮೆಚ್ಯುರಿಯಿ ಹಣ ಸಿಗಲಿದೆ. ಈಗಾಗಲೇ ಬಾಂಡ್ ಮಾಡಿಸಿದವರಿಗೆ ಎಲ್‌ಐಸಿಯಿಂದಲೇ ಹಣ ಬರಲಿದೆ.. ಸುಕನ್ಯಾ ಸಮೃದ್ಧಿ ಯೋಜನೆ ಅಡಿ ರಾಜ್ಯ ಸರ್ಕಾರ ಪ್ರತಿವರ್ಷ ಮಗುವಿಗೆ 3 ಸಾವಿರ ರೂಪಾಯಿಯಂತೆ 15 ವರ್ಷ 45 ಸಾವಿರ ರೂಪಾಯಿ ಪಾವತಿಸುವುದರಿಂದ ಇನ್ನೂ ಮುಂದೆ ಪ್ರತಿ ಫಲಾನುಭವಿ ಮಗುವಿಗೆ 21 ವರ್ಷ ತುಂಬಿದಾಗ 1.27 ಲಕ್ಷ ರೂಪಾಯಿ ಹಣ ಸಿಗಲಿದೆ.

ಇದನ್ನೂ ಓದಿ: ಭಾಗ್ಯಲಕ್ಷ್ಮೀ ಯೋಜನೆ ಸುಕನ್ಯಾ ಸಮೃದ್ಧಿಯಾಗಿ ಬದಲಾವಣೆ- ಫಲಾನುಭವಿಗಳಿಗೆ 1 ಲಕ್ಷ ಬದಲು 1.27 ಲಕ್ಷ ರೂ.

ಶಿಕ್ಷಣಕ್ಕೆ ಹಣ ಪಡಯಲು ಅವಕಾಶ:

ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಎಸ್‌ಎಸ್‌ಎಲ್‌ಸಿ/ ಪಿಯುಸಿ ಓದಲು ಹಣ ಪಡೆಯಲಾಗುತ್ತಿರಲಿಲ್ಲ.  ಆದರೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶಿಕ್ಷಣಕ್ಕೆ ಹಣ ಬೇಕಿದ್ದಲ್ಲಿ ಪಡೆಯುವ ಅವಕಾಶವಿದೆ. ಹಿಂದಿನ ಬಿಪಿಎಲ್‌ ಕುಟುಂಬಗಳಲ್ಲಿ ಹೆಣ್ಣು ಮಗು ಜನಿಸಿದ 2 ವರ್ಷದೊಳಗೆ ಬಾಂಡ್‌ ಮಾಡಿಸಬೇಕಿತ್ತು. ಅದೇ ಷರತ್ತುಗಳು ಸುಕನ್ಯಾ ಸಮೃದ್ಧಿಯಲ್ಲೂ ಅನ್ವಯವಾಗುತ್ತವೆ. ಪೋಷಕರು ನಿಧನರಾದರೆ ವಿಮೆ ಸೌಲಭ್ಯ ಇರುವುದಿಲ್ಲ. ಎಲ್‌ಐಸಿಯಲ್ಲಿ ವಿಮೆ ಸೌಲಭ್ಯ ಇತ್ತು.