News

ರಾಜ್ಯ ಬಜೆಟ್ ಕೃಷಿ ವಲಯಕ್ಕೆ 31,28 ಕೋಟಿ ರೂಪಾಯಿ ಅನುದಾನ

08 March, 2021 9:02 PM IST By:

ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದ ಕೃಷಿ ವಲಯಕ್ಕೆ ಮುಂಗಡಪತ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರಪೂರ ಕೊಡುಗೆ ನೀಡಿದ್ದು, ಒಟ್ಟಾರೆ 31,028 ಕೋಟಿ ರೂಪಾಯಿ ಅನುದಾನ ಒದಗಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಬೆಳೆಗಳನ್ನು ಮಾರಾಟ ಮಾಡಲಾಗದೆ ಹಾಗೂ ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ಬೆಳೆದಿದ್ದ ಬೆಳೆ ನಾಶವಾಗಿತ್ತು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅನ್ನದಾತರ ಆದಾಯವನ್ನು 2023 ರ ವೇಳೆಗೆ ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರಮೋದಿ ಅವರ ಕನಸನ್ನು ನನಸು ಮಾಡಲು ಹತ್ತು ಹಲವು ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ.
ಗುಣಮಟ್ಟದ ಬಿತ್ತನೆ ಬೀಜ, ಬೆಳೆ ನಿರ್ವಹಣೆ, ಕೊಯ್ಲೋತ್ತರ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಹೀಗೆ ಪ್ರತಿಯೊಂದು ಹಂತದಲ್ಲೂ ರೈತಾಪಿ ವರ್ಗದವರಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ಮುಂದಾಗಿದೆ.
ಪ್ರಧಾನಮಂತ್ರಿ ಫಸಲ್‌ಭಿಮಾ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಸೇರಿದಂತೆ ಇತರ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತೀರ್ಮಾನಗೊಳಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಫಸಲ್‌ಭಿಮಾ ಯೋಜನೆಗೆ 900 ಕೋಟಿ ರೂ.ಗಳನ್ನು ಹಾಗೂ ಕೃಷಿ ಸಿಂಚಾಯಿ ಯೋಜನೆಗಳಿಗೆ 831 ಕೋಟಿ ರೂ.ಗಳನ್ನು ಒದಗಿಸಿದ್ದಾರೆ.

ಪ್ರತಿ ಜಿಲ್ಲೆಗಳಿಗೆ ಗೋಶಾಲೆ

ಗೋ ಹತ್ಯಾ ನಿಷೇಧದ ಬೆನ್ನಲ್ಲೇ ಗೋ ಸಂರಕ್ಷಣೆಗಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಗೋ ಶಾಲೆ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಒಂದು ಗೋ ಶಾಲೆಯನ್ನು ಸ್ಥಾಪನೆ ಮಾಡುವುದಾಗಿ ರಾಜ್ಯ ಬಜೆಟ್ ನಲ್ಲಿ ಸಿಎಂ ಘೋಷಿಸಿದ್ದಾರೆ. ಇದಲ್ಲದೆ ಸಮಗ್ರ ಗೋ ಸ‌ಂಕುಲ ಸಮೃದ್ಧಿ ಯೋಜನೆಯನ್ನೂ ಯಡಿಯೂರಪ್ಪ ಸರ್ಕಾರ ಜಾರಿಗೆ ತಂದಿದೆ. ಹಾಗೆಯೇ ಹೊರ ರಾಜ್ಯದ ದೇಶಿ ತಳಿಗಳನ್ನು ಅಭಿವೃದ್ಧಿಪಡಿಸಿ ರಾಜ್ಯದ ರೈತರಿಗೆ ಪರಿಚಯಿಸಲು ಯೋಜನೆ ಜಾರಿ ಮಾಡಿರೋದಾಗಿ ತಿಳಿಸಿದರು.

ರೈತ ಮಕ್ಕಳ ಮೀಸಲಾತಿ ಶೇ. 50ಕ್ಕೆ ಹೆಚ್ಚಳ

ಈ ಬಾರಿಯ ಮುಂಗಡಪತ್ರದಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೈತ ಮಕ್ಕಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ. 40 ರಿಂದ ಶೇ. 5೦ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಕೃಷಿ ಪದವಿ ಪಡೆಯಲು ಈವರೆಗೆ ಶೇಕಡಾ 40ರಷ್ಟು ಸೀಟುಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ಬಾರಿಯ ಬಜೆಟ್‌ನಲ್ಲಿ ಈ ಮಿತಿಯನ್ನು ಶೇಕಡಾ 50ಕ್ಕೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.