ದೀಪಾವಳಿ ಹಬ್ಬದ ಅಂಗವಾಗಿ ನವೆಂಬರ್ 11 ಮತ್ತು 17ರಂದು ಕಲಬುರಗಿಯಿಂದ ಮುಂಬೈಗೆ ವಿಮಾನ ಹಾರಾಟ ನಡೆಯಲಿದೆ.
ಬಿಸಿಲ ನಾಡು ಕಲಬುರಗಿ ಮತ್ತು ವಾಣಿಜ್ಯ ನಗರಿ ಮುಂಬೈ ಮಧ್ಯೆ ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ವಿಮಾನ ಸೇವೆ ಒದಗಿಸಲು ಮುಂದಾಗಿದೆ. ಹಬ್ಬದ ಸಂದರ್ಭದಲ್ಲಿ ಸಹಜವಾಗಿ ಕಲಬುರಗಿ ಮತ್ತು ಮುಂಬೈ ಮಧ್ಯೆ ಜನರು ಓಡಾಟ ಹೆಚ್ಚಿರುವುದರಿಂದ ಸ್ಟಾರ್ ಏರ್ ವಿಮಾನಯಾನ ಈ ಸೌಲಭ್ಯ ಒದಗಿಸಿದೆ.
ಹಬ್ಬಕ್ಕಾಗಿ ಜಿಲ್ಲೆಗೆ ಆಗಮಿಸುವ ಜನರ ಅನುಕೂಲಕ್ಕಾಗಿ ನ.11ರಂದು ಮುಂಬೈಗೆ ಮೊದಲ ಲೋಹದ ಹಕ್ಕಿ ಹಾರಲಿದೆ. ಅಂದು ಬೆಳಿಗ್ಗೆ 10:20ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಒಜಿ-9141 ವಿಮಾನ ಮುಂಬೈಗೆ ಟೇಕ್‍ಆಫ್ ಮಾಡಲಿದ್ದು, 11.30ಕ್ಕೆ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ಅದೇ ದಿನ ಮಧ್ಯಾಹ್ನ 12.05ಕ್ಕೆ ಒಜಿ-9142 ವಿಮಾನ ಮುಂಬೈನಿಂದ ಕಲಬುರಗಿಗೆ ಪ್ರಯಾಣಿಸಲಿದ್ದು, 1.15ಕ್ಕೆ ಬಂದು ಇಳಿಯಲಿದೆ.
ನವೆಂಬರ್ 17 ರಂದು ಬೆಳಗ್ಗೆ 10.20 ಕ್ಕೆ ಕಲಬುರಗಿಯಿಂದ ಹೊರಟು 11.30ಕ್ಕೆ ತಲುಪಲಿದೆ. ಅದೇ ದಿನ ಮಧ್ಯಾಹ್ನ 12.05 ಕ್ಕೆಮಂಬೈನಿಂದ ಹೊರಟು ಮಧ್ಯಾಹ್ನ 1.15ಕ್ಕೆ ಕಲಬುರಗಿ ತಲುಪಲಿದೆ.
ಈಗಾಗಲೇ ಕಲಬುರಗಿ ಬೆಂಗಳೂರು-ಮೈಸೂರು ಮಧ್ಯೆ ಸ್ಟಾರ್ ಏರ್ ಮತ್ತು ಅಲಯನ್ಸ್ ಸಂಸ್ಥೆಗಳು ನಿತ್ಯ ತಮ್ಮ ವಿಮಾನ ಹಾರಾಟ ನಡೆಸುತ್ತಿದೆ.
ಈ ಅವಧಿಯಲ್ಲಿ ಉತ್ತಮ ಸ್ಪಂದನೆ ಸಿಕ್ಕರೆ ಉಭಯ ನಗರಗಳ ಮಧ್ಯೆ ನಿರಂತರವಾಗಿ ವಿಮಾನ ಹಾರಾಟ ಮುಂದುವರೆಯಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.