News

ಹೊಸ ಮನೆ ಖರೀದಿ ಮಾಡುವವರಿಗೆ ಗುಡ್‌ ನ್ಯೂಸ್‌; ಮುದ್ರಾಂಕ ಶುಲ್ಕ ಇಳಿಕೆ

10 March, 2021 11:44 AM IST By:

ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಹೊಸ ಮನೆ‌ ಖರೀದಿದಾರಿಗೆ ಗುಡ್ ನ್ಯೂಸ್  ನೀಡಿದ್ದಾರೆ. ಮುದ್ರಾಂಕ ಶುಲ್ಕವನ್ನು ಶೇ.5 ರಿಂದ ಶೇ.3 ಕ್ಕೆ ಇಳಿಕೆ ಮಾಡಿ ಸಿಹಿ ಸುದ್ದಿ ನೀಡಿದ್ದಾರೆ.
ಕೈಗೆಟುಕುವ ದರಗಳ ಮನೆಗಳನ್ನು ಪ್ರೋತ್ಸಾಹಿಸಲು 35 ಲಕ್ಷ ರುಪಾಯಿಗಳಿಂದ ಹಿಡಿದು 45 ಲಕ್ಷ ರುಪಾಯಿ ಮೌಲ್ಯದ ವರೆಗಿನ ಅಪಾರ್ಟ್‌ಮೆಂಟ್‌ಗಳ ಮೊದಲ ನೋಂದಣಿಗೆ ಮುಂದ್ರಾಂಕ ಶುಲ್ಕವನ್ನು ಶೇ.5 ರಿಂದ ಶೇ.3 ಕ್ಕೆ ಇಳಿಕೆ ಮಾಡುವ ಪ್ರಸ್ತಾಪ ಬಜೆಟ್‌ನಲ್ಲಿದೆ. ಸ್ಟಾಂಪ್‌ಗೆಂದು ಖರ್ಚು ಮಾಡುತ್ತಿದ್ದ ಹಣ ಉಳಿತಾಯವಾಗಲಿದೆ.

ಇದೇ ವೇಳೆ 2021-22ನೇ ಆರ್ಥಿಕ ಸಾಲಿನಲ್ಲಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕದಿಂದ 12,655 ಕೋಟಿ ರುಪಾಯಿಯಷ್ಟು ತೆರಿಗೆ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ನಾರಿ ಶಕ್ತಿಯನ್ನು ಸ್ಮರಿಸುವ ಮೂಲಕ ಬಜೆಟ್‌ಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳು 37,188 ಕೋಟಿ ರೂ. ಮೌಲ್ಯದ ಅನೇಕ ಮಹಿಳಾ ಯೋಜನೆಗಳನ್ನು ಘೋಷಿಸಿದ್ದಾರೆ. ಪ್ರಮುಖವಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ 2 ಪ್ರಮುಖ ಸರಕಾರಿ ಕಚೇರಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಬಿಎಸ್‌ ಯಡಿಯೂರಪ್ಪ ಘೋಷಿಸಿದ್ದಾರೆ. ಶೇ.4ರ ಬಡ್ಡಿದರದಲ್ಲಿ ಮಹಿಳಾ ಉದ್ಯಮಿಗಳಿಗೆ ಸಾಲ ನೀಡಲು ಸರಕಾರ ಮುಂದಾಗಿದ್ದು, 2 ಕೋಟಿ ರೂ.ವರೆಗೂ ಮಹಿಳಾ ಉದ್ಯಮಿಗಳಿಗೆ ಸಾಲ ನೀಡುವುದಾಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ ಸೃಷ್ಟಿಸಲು ಸರಕಾರ ಮುಂದಾಗಿದೆ. ಹಪ್ಪಳ, ಉಪ್ಪಿನಕಾಯಿಯಂತಹ ಗೃಹ ಉದ್ಯಮಗಳಿಗೆ ಆನ್‌ಲೈನ್‌ ಮಾರುಕಟ್ಟೆ ಸೃಷ್ಟಿ ಮಾಡುವುದಾಗಿ ಸರಕಾರ ಘೋಷಿಸಿದೆ. ಅದರೊಂದಿಗೆ ವನಿತಾ ಸಂಗಾತಿ ಹೆಸರಲ್ಲಿ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್‌ಪಾಸ್‌ ನೀಡುವುದಾಗಿ ಘೋಷಿಸಿದ್ದಾರೆ.

ಪ್ರತಿ ತಾಲೂಕಿನಲ್ಲಿ 10 ರಂತೆ 25 ಸಾವಿರ ಮಹಿಳೆಯರಿಗೆ ಕಿರುಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುವುದು. ಬೆಂಗಳೂರಿನಲ್ಲಿ ನಿರ್ಭಯಾ ಯೋಜನೆಯಲ್ಲಿ 7500 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗಿದ್ದು, ಸರಕಾರಿ ಕಚೇರಿ ಸಿಬ್ಬಂದಿಗೆ 6 ತಿಂಗಳು ಪ್ರಸೂತಿ ರಜೆ ನೀಡಲಾಗಿದೆ.