News

ಎಸ್ಸೆಸ್ಸೆಲ್ಸಿ ಫಲಿತಾಂಶ: ಎಂದಿನಂತೆ ಬಾಲಕಿಯರೇ ಮೇಲುಗೈ-ಆರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ

11 August, 2020 10:03 AM IST By:

ಕೊರೋನಾ ಸೋಂಕಿನ ಹಲವು ಗೋಜಲು-ಗೊಂದಲಗಳ ನಡುವೆ ನಡೆದಿದ್ದ ಎಸ್.ಎಸ್.ಎಲ್.ಸಿ  ಬಹುನೀರಿಕ್ಷಿತ 2019-20ನೇ ಸಾಲಿನ ಫಲಿತಾಂಶ ಸೋಮವಾರ (SSLC Examination 2020 result declared) ಪ್ರಕಟವಾಗಿದ್ದು, ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.1.9 ಕಡಿಮೆ. ಈ ಬಾರಿ ಫಲಿತಾಂಶ ಕಡಿಮೆಯಾಗಲು ವಿದ್ಯಾರ್ಥಿಗಳಲ್ಲಿದ್ದ ಪರೀಕ್ಷೆ ಭಯವೇ ಕಾರಣ ಎನ್ನಲಾಗಿದೆ.

ಫಲಿತಾಂಶದಲ್ಲಿ ಮತ್ತೆ ಎಂದಿನಂತೆ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಅಲ್ಲದೆ, ನಗರ-ಪಟ್ಟಣಗಳಿಗಿಂತ ಗ್ರಾಮಾಂತರ ಪ್ರದೇಶದ ಮಕ್ಕಳು (ಶೇ.77.18) ಅಧಿಕ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ಜಿಲ್ಲಾವಾರು ರ‍್ಯಾಂಕಿಂಗ್ (Ranking) ಬದಲಾಗಿ ಶ್ರೇಣಿಕೃತ ರ‍್ಯಾಂಕಿಂಗ್ ನೀಡಿದ್ದು, ಚಿಕ್ಕಬಳ್ಳಾಪುರ ಮೊದಲ ಸ್ಥಾನ ಪಡೆದಿದ್ದರೆ ಯಾದಗಿರಿ ಕೊನೇ ಸ್ಥಾನದಲ್ಲಿದೆ.

ಇಂಗ್ಲೀಷ್ ಮಾಧ್ಯಮದಲ್ಲಿ (English Medium)  ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು 625ಕ್ಕೆ 625 ಹಾಗೂ 11 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರಲ್ಲಿ 625ಕ್ಕೆ ಮೂವರು 623, ಐವರು 622, ನಾಲ್ಕು ಜನ 621 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ (Suresh Kumar) ಸೋಮವಾರ ಫಲಿತಾಂಶ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಲಾಕ್​ಡೌನ್ ಕಾರಣಕ್ಕಾಗಿ ಮಾರ್ಚ್-ಏಪ್ರಿಲ್​ನಲ್ಲಿ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಜೂನ್-ಜುಲೈನಲ್ಲಿ ನಡೆಸಲಾಗಿತ್ತು. ಈ ವರ್ಷ 8,48,203 ಅಭ್ಯರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದರು. 8,11,050 ಹಾಜರಾಗಿದ್ದು, 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.71.80 ಫಲಿತಾಂಶ ಬಂದಿದ್ದು, ಕಳೆದ ವರ್ಷ 73.70 ಇತ್ತು. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ನಡೆಯುತ್ತೋ.. ನಡೆಯುವುದಿಲ್ಲವೋ ಎಂಬ ಆತಂಕ ಫಲಿತಾಂಶ ಕಡಿಮೆಗೆ ಕಾರಣವಾಗಿರಬಹುದು ಎಂದರು.

ಅಂಗ್ಲಮಾಧ್ಯಮದ ಟಾಪರ್: 

ಮೊದಲ ಮತ್ತು ದ್ವಿತೀಯ ರ್ಯಾಂಕ್ ಪಡೆದಿರುವ ಒಟ್ಟಾರೆ 17 ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದವ ರಾಗಿದ್ದಾರೆ. 3,4,5ನೇ ಸ್ಥಾನ ಗಳಿಸಿರುವ 12 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದವರಾಗಿದ್ದಾರೆ.

ಶಿರಸಿ ಮಾರಿಕಾಂಬಾ ಪಿಯು ಕಾಲೇಜಿನ ಸನ್ನಿದಿ ಮಹಾಬಳೇಶ್ವರ ಹೆಗಡೆ, ಬೆಂಗಳೂರಿನ ಸೇಂಟ್ ಮೇರಿ ಹೈಸ್ಲೂಲಿನ ಚಿರಾಯು, ಕೆಎಸ್. ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರದ ನಿಖಿಲೇಶ ಎಸ್. ಮುರಳಿ, ಮಂಡ್ಯದ ಸತ್ಯಸಾಯಿ ಸರಸ್ವತಿ ಇಂಗ್ಲೀಷ್ ಮಾಧ್ಯಮ ಶಾಲೆಯ ಧೀರಜ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕುಮಾರಸ್ವಾಮಿ, ಇಂಗ್ಲೀಷ ಮಾಧ್ಯಮ ಶಾಲೆಯ ಅನುಷ್, ಎ.ಎಲ್. ಚಿಕ್ಕಮಗಳೂರು ಸೇಂಟ್ ಜೋಸೇಫ್ ಕಾನ್ವೆಂಟ್ ಶಾಲೆಯ ತನ್ಮಯಿ ಶೇ. 100 ರಷ್ಟು ಅಂಕಪಡೆದಿದ್ದಾರೆ.

11 ದ್ವಿತೀಯ ರ್ಯಾಂಕ್: 

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನಿರುದ್ಧ ಸುರೇಶ್ ಗುಟ್ಟಿಕಾರ್, ಬೆಂಗಳೂರು ಉತ್ತರ ವಿವಿಎಸ್ ಸರ್ದಾರ್ ಪಟೇಲ್ ಆಂಗ್ಲ ಮಾಧ್ಯಮ ಶಾಲೆಯ ಜಿ.ಕೆ.ಅಮೋಘ್ ಮತ್ತು ಪ್ರಣವ್ ವಿಜಯ್ ನಾಡಿಗೇರ್, ಬೆಂಗಳೂರು ಸದಾಶಿವನಗರದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಎಂ.ಡಿ.ವೀಣಾ ಹಾಗೂ ನಿಹಾರಿಕಾ ಸಂತೋಷ್ ಕುಲಕರ್ಣಿ, ಬೆಂಗಳೂರು ವಿಜಯನಗರದ ನ್ಯೂ ಕ್ರೇಂಬಿಡ್ಜ್ ಶಾಲೆಯ ಎ.ಎಸ್.ಸ್ಪೂರ್ತಿ, ತುಮಕೂರು ಜಿಲ್ಲೆಯ ಕುಣಿಗಲ್ ಜ್ಞಾನಭಾರತಿ ಆಂಗ್ಲ ಮಾಧ್ಯಮ ಶಾಲೆಯ ಜಿ.ಎಂ.ಮಹೇಶ, ಉಡುಪಿ ಬೈಂದೂರು ಕಿರಿಮಂಜೇಶ್ವರದ ಸಂದೀಪ್ನಾ ಆಂಗ್ಲ ಮಾಧ್ಯಮ ಶಾಲೆಯ ಸುರಭಿ ಎಸ್.ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶ್ರೀಸತ್ಯಸಾಯಿ ಲೋಕೇಶ್ವರ ಫ್ರೌಢಶಾಲೆಯ ಸುಮುಖ ಸುಬ್ರಹ್ಮಣ್ಯ ಶೆಟ್ಟಿ, ದಕ್ಷಿಣ ಕನ್ನಡದ ಮಂಗಳೂರು ಕೆನರಾ ಹೈಸ್ಕೂಲ್​ನ ನಿಧಿ ರಾವ್, ಶಿವಮೊಗ್ಗ ಜಿಲ್ಲೆ ಸಾಗರದ ಪ್ರಗತಿ ಬಾಲಭವನ ಆಂಗ್ಲ ಮಾಧ್ಯಮ ಶಾಲೆಯ ಟಿ.ಎಸ್.ಅಬ್ರಾಹಂ 625ಕ್ಕೆ 624 ಅಂಕ ಗಳಿಸಿ ದ್ವಿತೀಯ ರ್ಯಾಂಕ್ ಹಂಚಿಕೊಂಡಿದ್ದಾರೆ.

ಸೆಪ್ಟೆಂಬರ್​ನಲ್ಲಿ ಪೂರಕ ಪರೀಕ್ಷೆ: 

ಸೆಪ್ಟೆಂಬರ್​ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ವಿವರಿಸಿರುವಂತೆ ಅರ್ಜಿಗಳನ್ನು ಜಾಲತಾಣದಲ್ಲಿ ಅಪ್​ಲೋಡ್ ಮಾಡಬೇಕಿದೆ.

ಇಂದಿನಿಂದ ಸ್ಕಾ್ಯನ್ ಪ್ರತಿಗೆ ಅರ್ಜಿ: 

ಸ್ಕಾ್ಯನ್ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಆನ್​ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಭೌತಿಕವಾಗಿ ಅರ್ಜಿ ಪಡೆಯುವುದನ್ನು ರದ್ದುಗೊಳಿಸಲಾಗಿದೆ. ಎಸ್​ಎಎಸ್​ಎಲ್​ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಸ್ಕಾ್ಯನ್ ಪ್ರತಿಯನ್ನು ಆ.11ರಿಂದ 20ರವರೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.