ಈ ದಿನದ ಪ್ರಮುಖ ಕೃಷಿ ಸುದ್ದಿಗಳ ವಿವರ ಇಲ್ಲಿದೆ....
1. ರಾಜ್ಯದಲ್ಲಿ ಹಾಲು ಸಂಗ್ರಹಣೆ ಕುಸಿತ : ಐದು ವರ್ಷಗಳಲ್ಲಿ ಇದೇ ಮೊದಲು
2. ಸಿಕ್ಕಿಂನಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಸಿಗಲಿದೆ ಬಡ್ತಿ, ಮುಂಬಡ್ತಿ!
3. ರಾಜ್ಯದಲ್ಲಿ ಮುಂದುವರಿದ ಚಳಿ ವಾತಾವರಣ
4. ಗಂಗಾಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ: 2 ಲಕ್ಷ ಸಹಾಯಧನ
5. ಚಿಕ್ಕಮಗಳೂರಲ್ಲಿ ಆಕರ್ಷಕ ವಸ್ತು ಪ್ರದರ್ಶನ
6. ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪರಿಷ್ಕೃತ ವೇಳಾಪಟ್ಟಿ ಪ್ರಕಟ
7. ಗಣರಾಜ್ಯೋತ್ಸವದ ಭಾಗವಾಗಿ ನವದೆಹಲಿಯಲ್ಲಿ ವಿಶೇಷ ಪಥಸಂಚಲ
8. ಕೃಷಿ ಯಂತ್ರೋಪಕರಣ ಖರೀದಿಸಲು ಅರ್ಜಿ ಆಹ್ವಾನ
9. ರಾಜ್ಯದಲ್ಲಿ 3 ಲಕ್ಷ ಜಾನುವಾರುಗಳಲ್ಲಿ ಚರ್ಮಗಂಟು ಸೋಂಕು
10. ಚರ್ಮಗಂಟು ರೋಗಕ್ಕೆ ಭಾರತೀಯ ಪಶುವೈದ್ಯಕೀಯ ಸಂಶೋಧನೆ ಸಂಸ್ಥೆಯಿಂದ ಲಸಿಕೆ ಅಭಿವೃದ್ಧಿ
----------------
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಾಲು ಸಂಗ್ರಹಣೆಯಲ್ಲಿ ಕುಸಿತ ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು, ಕಾಲುಬಾಯಿ ರೋಗ, ಮೇವಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಾಲು ಸಂಗ್ರಹಣೆಯಲ್ಲಿ ಕುಸಿತ ಕಂಡಿದೆ. ಕೆಎಂಎಫ್ ನೀಡಿರುವ ಮಾಹಿತಿಯ ಅನ್ವಯ 2022 ಜುಲೈ ತಿಂಗಳಿಂದ ಪ್ರತಿನಿತ್ಯ 9-10 ಲಕ್ಷ ಲೀಟರ್ ಹಾಲು ಕಡಿಮೆ ಸಂಗ್ರಹವಾಗುತ್ತಿದೆ. ಕೆಎಂಎಫ್ ಅಧೀನದ 14 ಒಕ್ಕೂಟಗಳಿಂದ ನಿತ್ಯ ಸರಾಸರಿ 75.6 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. 2021-22ರಲ್ಲಿ 26 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿಂದ ಒಟ್ಟು 84.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಚರ್ಮಗಂಟು ರೋಗ (ಎಲ್‌ಎಸ್‌ಡಿ), ಕಾಲು ಬಾಯಿ ರೋಗ (ಎಫ್‌ಎಂಡಿ), ಪ್ರವಾಹ, ಕಳಪೆ ಮೇವಿನಿಂದಾಗಿ ಹಾಲಿನ ಉತ್ಪಾದನೆ ಕುಸಿದಿದೆ. ಬೇಸಿಗೆಯಲ್ಲಿ ಹಸಿರು ಮೇವಿನ ಕೊರತೆ ಉಂಟಾಗಿ, ಹಾಲಿನ ಉತ್ಪಾದನೆ ಮತ್ತಷ್ಟು ಕುಸಿಯುವ ಆತಂಕವೂ ಎದುರಾಗಿದೆ. ಈ ಬೆಳವಣಿಗೆ ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವವರಿಗೆ ಆತಂಕ ಮೂಡಿಸಿದೆ. ಇದು ಪರೋಕ್ಷವಾಗಿ ಗ್ರಾಹಕರಿಗೂ ಹೊರೆಯಾಗುವ ಸಾಧ್ಯತೆ ಇದೆ. ಹಾಲಿನ ಸಂಗ್ರಹ ದಿಢೀರ್ ಕುಸಿತದಿಂದಾಗಿ ಉಪ ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಪನೀರ್ ಮತ್ತು ಇತರೆ ಉತ್ಪನ್ನಗಳ ಬೆಲೆ ಹೆಚ್ಚಲಿದೆ. ಅಲ್ಲದೇ ತುಪ್ಪ ಮತ್ತು ಬೆಣ್ಣೆ ಪ್ರತಿ ಕೆ.ಜಿ.ಗೆ 30 ರಿಂದ 40 ರೂಪಾಯಿ ಹೆಚ್ಚಾಗುವ ಸಾಧ್ಯತೆ ಇದೆ. ಕೆಎಂಎಫ್ ಅಧೀನದ 16 ಹಾಲು ಒಕ್ಕೂಟಗಳು ಕ್ಷೀರ ಭಾಗ್ಯ ಯೋಜನೆಯಡಿ ಶಾಲೆಗಳಿಗೆ ಸರಬರಾಜು ಮಾಡುವ ಹಾಲಿನ ಪುಡಿ ಉತ್ಪಾದನೆಯೂ ಕುಸಿಯಲಿದೆ. ಇನ್ನು ಈಗಾಗಲೇ, ಶಾಲೆಗಳಲ್ಲಿ ಏಪ್ರಿಲ್‌ವರೆಗೆ ಸಾಕಷ್ಟು ದಾಸ್ತಾನು ಇರುವುದರಿಂದ ಹಾಲಿನ ಪುಡಿ ಬೇಡಿಕೆ ಸ್ಥಿರವಾಗಿದೆ ಎಂದು ಒಕ್ಕೂಟಗಳ ವ್ಯವಸ್ಥಾಪಕರು ತಿಳಿಸಿದ್ದಾರೆ. ಹಾಲಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಉತ್ಪಾದನೆ ಕುಸಿದಿದೆ. ಪೂರೈಕೆ ಕೊರತೆಯಿಂದಾಗಿ ಸಣ್ಣ ಚಿಲ್ಲರೆ ಮಳಿಗೆಗಳು ಮಾರಾಟ ಸ್ಥಗಿತಗೊಳಿಸಿವೆ.
----------------
ಭಾರತವು ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಮೊದಲ ಹಂತಕ್ಕೆ ತಲುಪುವ ಹಾದಿಯಲ್ಲಿದೆ. ಈ ಸಂದರ್ಭದಲ್ಲಿ ಜನಸಂಖ್ಯೆ ನಿಯಂತ್ರಣ ಮಾಡುವುದಕ್ಕೆ ಕಾನೂನು ರೂಪಿಸಬೇಕು ಎನ್ನುವ ವಿಷಯ ತೀವ್ರವಾಗಿ ಚರ್ಚೆ ಆಗುತ್ತಿದೆ. ಈ ನಡುವೆ ಸಿಕ್ಕಿಂ ರಾಜ್ಯವು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಗುಡ್ ನ್ಯೂಸ್ ನೀಡಿದೆ. ಹೌದು ಸಿಕ್ಕಿಂ ರಾಜ್ಯ ಸರ್ಕಾರವು ಹೆಚ್ಚು ಮಕ್ಕಳು ಇರುವವರಿಗೆ ಪ್ರೋತ್ಸಾಹ ನೀಡುವ ಪ್ರಸ್ತಾವನೆ ಮಾಡಿದೆ. ಮಕ್ಕಳಿಗೆ ಸರ್ಕಾರದ ಪ್ರೋತ್ಸಾಹದ ಜೊತೆಗೆ ಒಂದು ವರ್ಷದ ಹೆರಿಗೆ ರಜೆ, ತಂದೆಗೂ ರಜೆ, ಮಕ್ಕಳಿರುವ ಸರ್ಕಾರಿ ನೌಕರರಿಗೆ ಸಂಬಳ ಹೆಚ್ಚಳ. ಇಬ್ಬರು ಮಕ್ಕಳಿಗೆ ಒಂದು ಬಡ್ತಿ ಮತ್ತು ಮೂರು ಮಕ್ಕಳಿಗೆ ಎರಡು ಬಡ್ತಿ ನೀಡುವುದಾಗಿ ಹೇಳಿ ಸಂಚಲನ ಮೂಡಿಸಿದೆ. ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಸಿಕ್ಕಿಂನ ಫಲವತ್ತತೆ ಪ್ರಮಾಣವು ಇತ್ತೀಚೆಗೆ ತೀವ್ರವಾಗಿ ಕಡಿಮೆಯಾಗಿದೆ ಎಂದು ಹೇಳಿದರು. ಸಿಕ್ಕಿಂ ಅತ್ಯಂತ ಕಡಿಮೆ ಬೆಳವಣಿಗೆ ದರವನ್ನು ದಾಖಲಿಸಿದೆ. ಜನಸಂಖ್ಯೆಯು ಕುಸಿದಿದೆ. ಹಿಂದಿನ ಸರ್ಕಾರಗಳು ಒಂದೇ ಮಗು ಎಂಬ ಘೋಷಣೆ ಮಾಡಿದ್ದವು. ಹೀಗಾಗಿ, ರಾಜ್ಯದ ಜನಸಂಖ್ಯೆ ಈಗ 7 ಲಕ್ಷ, ಹಿಂದಿನ ಸರ್ಕಾರಗಳ ನಿರ್ಧಾರಗಳ ಫಲವಾಗಿ ಇಂದು ರಾಜ್ಯದ ಜನಸಂಖ್ಯೆ ಕುಸಿದಿದೆ ಎಂದು ಸಿಎಂ ತಮಂಗ್ ಹೇಳಿದರು. ರಾಜ್ಯದ ಜನಸಂಖ್ಯೆ ಹೆಚ್ಚಿಸುವ ಅಗತ್ಯವಿದ್ದು, ಹೆಚ್ಚಿನ ಮಕ್ಕಳನ್ನು ಹೊಂದಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
----------------
ರಾಜ್ಯದಲ್ಲಿ ಚಳಿ ವಾತಾವರಣ ಮುಂದುವರಿದಿದ್ದು, ವಿವಿಧೆಡೆ ಕನಿಷ್ಠ ತಾಪಮಾನ ವರದಿಯಾಗಿದೆ. ಇದೀಗ ಚಳಿ ಜೊತೆಗೆ ತೀವ್ರ ಮಂಜಿನ ವಾತಾವರಣ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ವರದಿ ಆಗಿದೆ. ಈ ವಾತಾವರಣವು ವಾರ ಪೂರ್ತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಎರಡು ದಿನ ಬೆಂಗಳೂರಿನಲ್ಲಿ ಅತಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಉಳಿದ ಕೆಲವು ಭಾಗಗಳಲ್ಲಿ ಮಂಜು ದಟ್ಟವಾಗಿತ್ತು. ಈ ಚಳಿ ಹಾಗೂ ಮಂಜು ಕವಿದ ವಾತಾವರಣ ಈ ವಾರಾಂತ್ಯದವರೆಗೂ ಮುಂದುವರಿ
ಯಲಿದೆ. ಈ ವೇಳೆ ಚಳಿ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ತಾಪಮಾನ ಕನಿಷ್ಠ 14ರಿಂದ 16ಡಿಗ್ರಿ ಸೆಲ್ಸಿಯಸ್ ವರೆಗೂ ದಾಖಲಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ತಿಳಿಸಿದೆ. ಇನ್ನು ಮುಂದಿನ 24 ಗಂಟೆಗಳ ಕಾಲ ಕನಿಷ್ಠ ಉಷ್ಣಾಂಶವು ಕರಾವಳಿಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3ರಿಂದ 4 ಡಿಗ್ರಿ ಸೆಲ್ಸಿಯಸ್ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 4ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರು ನಗರದಲ್ಲಿ ಬೆಳಗಿನ ಜಾವ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ನಂತರ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಹೆಚ್ಚು ಸಾಂದ್ರತೆಯ ದಟ್ಟಮಂಜು, ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತವೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
----------------
PM Kisan| ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ: ಪಿಎಂ ಕಿಸಾನ್ ಮೊತ್ತದಲ್ಲಿ ಹೆಚ್ಚಳ ಸಾಧ್ಯತೆ!
ಗಂಗಾಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಗಂಗಾ ಕಲ್ಯಾಣ ನೀರಾವರಿ ಯೋಜನೆಯನ್ನು ಉಪ್ಪಾರ ಮತ್ತು ಇದರ ಉಪಜಾತಿಗೆ ಒಳಪಡುವ ಅರ್ಹರಿಂದ ಅರ್ಜಿಗಳನ್ನು ಆನ್‍ಲೈನ್ ಮೂಲಕ ಆಹ್ವಾನಿಸಲಾಗಿದೆ. ಅರ್ಜಿದಾರರು ಮಾರ್ಚ್ 2ರ ಒಳಗಾಗಿ ಸೇವಾ ಸಿಂಧು ಪೋರ್ಟೆಲ್ ಮುಖಾಂತರ ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಉಪ್ಪಾರ ಮತ್ತು ಇದರ ಉಪಜಾತಿಯವರು ಸಮಾಜದ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಈ ಯೋಜನೆಯ ಅಡಿ ಘಟಕ ವೆಚ್ಚಕ್ಕೆ 2.50ಲಕ್ಷ ರೂಪಾಯಿ ಇದ್ದು, ಇದರಲ್ಲಿ 2 ಲಕ್ಷ ಸಹಾಯಧನ ಮತ್ತು ಹೆಚ್ಚುವರಿಯಾಗಿ ಅಗತ್ಯವಿದ್ದಲ್ಲಿ 50 ಸಾವಿರ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ 3 ವರ್ಷಗಳ ಮರುಪಾವತಿ ಅವಧಿಯೊಂದಿಗೆ ನೀಡಲಾಗುತ್ತದೆ. ಆಸಕ್ತರು ಮಾರ್ಚ್ 2ರ ಒಳಗಾಗಿ ಸೇವಾ ಸಿಂಧು ಪೋರ್ಟೆಲ್ ಮೂಲಕ ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
----------------
ಚಿಕ್ಕಮಗಳೂರು ಉತ್ಸವದ ಅಂಗವಾಗಿ ಇಲ್ಲಿನ ಎಐಟಿ ಕಾಲೇಜು ಆರಣದಲ್ಲಿ ಜ್ಞಾನ ವೈಭವ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಉತ್ಸವದಲ್ಲಿ ಫಲಪುಷ್ಪ ಕೃಷಿ, ತಂತ್ರಜ್ಞಾನ ಮತ್ತು ಆಕರ್ಷಕ ವಸ್ತು ಪ್ರದರ್ಶನ ನಡೆಯುತ್ತಿದೆ. ಕೃಷಿ ಹಾಗೂ ವಿವಿಧ ಮಾದರಿಗಳ ಪ್ರದರ್ಶನ, ಚಲನಚಿತ್ರೋತ್ಸವ, ನಾಟಕೋತ್ಸವ, ಎತ್ತಿನಗಾಡಿ ಮೆರವಣಿಗೆ ಮತ್ತು ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಹೂವಿನ ಕಲಾಕೃತಿಗಳು, ತರಕಾರಿ ಕೆತ್ತನೆಗಳ ಕಲಾಕೃತಿಗಳು, ಪುನೀತ್ ರಾಜ್ ಕುಮಾರ್ ಹೂವಿನ ಪುತ್ಥಳಿ, ರಂಗೋಲಿ ಕಲಾಕೃತಿ, ಬೋನ್ಸಾಯ್ ಗಿಡಗಳು, ತರಕಾರಿ ಮತ್ತು ಹಣ್ಣುಗಳು, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳು, ಹನಿ ನೀರಾವರಿ ಮಾದರಿ, ಜೇನು ಕೃಷಿ, ವಿವಿಧ ಯಂತ್ರೋಪಕರಣಗಳು ಆಕರ್ಷಕವಾಗಿದ್ದವು. ಹೆಸರಾಂತ ಇಸ್ರೋ, ನೆಹರು ತಾರಾಲಯ ಹಾಗೂ ಎಚ್‌ಎಎಲ್ ವೈಜ್ಞಾನಿಕ ಆವಿಷ್ಕಾರಗಳನ್ನು ಪ್ರದರ್ಶನ ಮಾಡುತ್ತಿದ್ದು, ವಿದ್ಯಾರ್ಥಿಗಳು ಅತ್ಯಂತ ಕುತೂಹಲದಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ವತಿಯಿಂದ ಗ್ರಾಮೀಣ ಪ್ರದೇಶದ ಜನರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಸಹಸ್ರಾರು ಜನರು ಜ್ಞಾನ ವೈಭವವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿ.ಪಂ. ಸಿಇಓ ಜಿ.ಪ್ರಭು ಇದ್ದರು.
----------------
2022- 2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಏ.4ರಂದು ಮಹಾವೀರ ಜಯಂತಿಯಂದು ಇದ್ದು, ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಹೊಸದಾಗಿ ಬದಲಾಯಿ
ಸಲಾಗಿದೆ. ಮಾರ್ಚ್ 31 ರಿಂದ ಏಪ್ರಿಲ್ 15 ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಈ ಹಿಂದೆ ಘೋಷಿಸಿದಂತೆ ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 4 ರಂದು ನಡೆಯಬೇಕಿದ್ದ ಗಣಿತ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳು ಈಗ ಏಪ್ರಿಲ್ 3 ರಂದು ನಡೆಯಲಿದೆ. ಏಪ್ರಿಲ್ 4 ರಂದು ಸರ್ಕಾರಿ ರಜೆ ಇರುವ ಕಾರಣ ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ ಎಚ್.ಎನ್ ತಿಳಿಸಿದ್ದಾರೆ.
----------------
ಗಣರಾಜ್ಯೋತ್ಸವದ ಅಂಗವಾಗಿ ಈ ಬಾರಿ ನವದೆಹಲಿಯಲ್ಲಿ ಜನವರಿ 26ರಂದು ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಪಡೆಗಳ ತುಕಡಿಗಳಿಂದ ಭವ್ಯವಾದ ಮೆರವಣಿಗೆ ನಡೆಯಲಿದೆ. ಕರ್ತವ್ಯ ಪಥದಲ್ಲಿ ಸಾಂಪ್ರದಾಯಿಕ ತುಕಡಿಗಳ ಮೆರವಣಿಗೆ ನಡೆಯಲಿದೆ. ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯ ಮತ್ತು ವಿವಿಧ ಇಲಾಖೆಗಳಿಂದ ಟೇಬಲ್‌ಆಕ್ಸ್ ಪ್ರದರ್ಶನ; ಮಕ್ಕಳಿಂದ ಸಾಂಸ್ಕೃತಿಕ ಪ್ರದರ್ಶನ; ವಿಜಯ್ ಚೌಕ್ ಹಾಗೂ ಮೋಟಾರ್ ಸವಾರಿಗಳು ಮತ್ತು ಫ್ಲೈ-ಪಾಸ್ಟ್ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
----------------
ಕೃಷಿ ಯಂತ್ರೋಪಕರಣ ಖರೀದಿಸಲು ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ವಿವಿಧ ಘಟಕಗಳಡಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ತೋಟಗಾರಿಕೆ ಇಲಾಖೆಯ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನ ಯೋಜನೆ, ಕೃಷಿ ಯಾಂತ್ರೀಕರಣ ಉಪ ಅಭಿಯಾನದಡಿ ಕೃಷಿ ಯಂತ್ರೋಪಕರಣ ಖರೀದಿಸುವ ತೋಟಗಾರಿಕೆ ಬೆಳೆ ರೈತರಿಗೆ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ರೈತರು ಖರೀದಿಸುವ ಕೃಷಿ ಯಂತ್ರೋಪಕರಣಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತೀ ಸಣ್ಣ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ. 50ರಷ್ಟು ಸಹಾಯಧನ ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ಶೇ.40 ರಷ್ಟು ಸಹಾಯಧನ ಲಭ್ಯವಿರುತ್ತದೆ. ಪ್ರಸಕ್ತ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ವಿವಿಧ ಘಟಕಗಳಡಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಸಹಾಯಧನ ಸೌಲಭ್ಯ ನೀಡಲಾಗುವುದು. ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆಸಕ್ತ ರೈತರು ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------------
----------------
ರಾಜ್ಯದಲ್ಲಿ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಜಾನುವಾರುಗಳಲ್ಲಿ ಚರ್ಮಗಂಟು ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ವೈರಸ್ ರಾಜ್ಯದಲ್ಲಿ 27 ಸಾವಿರ ಜಾನುವಾರುಗಳನ್ನು ಬಲಿ ಪಡೆದುಕೊಂಡಿದೆ. ಎಲ್‌ಎಸ್‌ಡಿ ಝೂನೋಟಿಕ್ ಕಾಯಿಲೆಯಲ್ಲ. ಆದರೆ, ಸೋಂಕು ಪ್ರಾಣಿಗಳ ಅಥವಾ ಸೋಂಕುಳ್ಳ ಪ್ರದೇಶದಿಂದ ಹಾಲನ್ನು ಮಾನವ ಬಳಕೆಗಾಗಿ ಕುದಿಸಬೇಕು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ವೈರಸ್ ನೇರ ಸಂಪರ್ಕ, ಸೊಳ್ಳೆಗಳು, ನೊಣಗಳು ಮತ್ತು ಉಣ್ಣಿಗಳಂತಹ ವಾಹಕಗಳು ಮತ್ತು ಲಾಲಾರಸ ಮತ್ತು ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ. ಭಾರತದಲ್ಲಿ, ರಾಜಸ್ಥಾನ ಮತ್ತು ಗುಜರಾತ್‌ನಂತಹ ರಾಜ್ಯಗಳು ಕಳೆದ ವರ್ಷ ಶೇಕಡಾ 10ರಷ್ಟು ಹೆಚ್ಚಿನ ಮರಣ ಪ್ರಮಾಣವನ್ನು ವರದಿ ಮಾಡಿದೆ. ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಏಕೈಕ ಮಾರ್ಗವೆಂದರೆ ಸಾಮೂಹಿಕ ಲಸಿಕೆಯಾಗಿದೆ ಎಂದು ತಿಳಿಸಿದ್ದಾರೆ.
----------------
ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿಪಡೆದು
ಕೊಂಡಿರುವ ಚರ್ಮಗಂಟು ರೋಗಕ್ಕೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಭಾರತೀಯ ಪಶುವೈದ್ಯಕೀಯ ಸಂಶೋಧನೆ ಸಂಸ್ಥೆ ಲಸಿಕೆ ಅಭಿವೃದ್ಧಿಪಡಿಸಿದೆ. ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಅಂಡ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ನ ನಿರ್ದೇಶಕ ಡಾ.ಬಿ.ಆರ್.ಗುಲಾಟಿ ಅವರು ಮಾತನಾಡಿ, ಎಲ್‌ಎಸ್‌ಡಿಗೆ ಕಾರಣವಾಗುವ ಅದೇ ವೈರಸ್ ಅನ್ನು ಬಳಸುವ ಹೋಮೋಲೋಗಸ್ ಲಸಿಕೆ ವೈರಸ್ ವಿರುದ್ಧ 100 ಪ್ರತಿಶತದಷ್ಟು ರಕ್ಷಣೆ ನೀಡುವುದು ಸಾಬೀತಾಗಿದೆ ಎಂದರು. ಲಸಿಕೆಯ ಪರೀಕ್ಷಾ ಬ್ಯಾಚ್‌ಗಳನ್ನು ಪರೀಕ್ಷೆಗಾಗಿ ಐವಿಆರ್‌ಐಗೆ ಸಲ್ಲಿಸಿದೆ. ಒಮ್ಮೆ ಒಪ್ಪಿಗೆ ನೀಡಿದ ಬಳಿಕ ಲಸಿಕೆ ಮಾರುಕಟ್ಟೆಯಲ್ಲಿ ಬರಲಿದೆ. ಚರ್ಮಗಂಟು ರೋಗ ಒಂದು ಪಾಕ್ಸ್ ವೈರಸ್ ಆಗಿದ್ದು. ಅದು ಕುರಿ ಪಾಕ್ಸ್ ಮತ್ತು ಮೇಕೆ ಪೋಕ್ಸ್ ವೈರಸ್‌ಗಳಂತೆಯೇ ಅದೇ ಕುಲಕ್ಕೆ ಸೇರಿದ್ದಾಗಿದೆ. ಪ್ರಸ್ತುತ ಜಾನುವಾರುಗಳಲ್ಲಿ ಕಂಡು ಬರುತ್ತಿರುವ ರೋಗ ತಡೆಗಟ್ಟಲು ಮೇಕೆಪೋಕ್ಸ್ ಲಸಿಕೆಯನ್ನು ನೀಡಲಾಗುತ್ತಿದೆ. ಮೇಕೆ ಪೋಕ್ಸ್ ಒಂದು ವೈವಿಧ್ಯಮಯ ಲಸಿಕೆಯಾಗಿದೆ. ಇದು ರೋಗದಿಂದ ಶೇ.70ರಿಂದ 80ರಷ್ಟು ರಕ್ಷಣೆ ನೀಡುತ್ತದೆ ಎಂದು ಗುಲಾಟಿ ತಿಳಿಸಿದ್ದಾರೆ.
----------------