News

ಮಳೆ ಬಾರದಿದ್ದರೂ ಬೀಜ ಮೊಳಕೆಯೊಡೆಯಲಿದೆ- ಏಕ ಬೆಳೆಯೊಂದಿಗೆ ಅಂತರ್ ಬೆಳೆ ಬಿತ್ತನೆಗೂ ಅವಕಾಶ

14 November, 2020 9:20 AM IST By:

ಭೂಮಿಯಲ್ಲಿ ಹಸಿಯಿದ್ದಾಗ ಬಿತ್ತನೆ ಮಾಡುವುದು ಸಹಜ. ಇನ್ನೂ ಕೆಲವು ಸಲ ಅತೀ ಕಡಿಮೆ ಹಸಿಯಿದ್ದರೂ ಸಹ ಬಿತ್ತನೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಿತ್ತನೆಮಾಡಿದ ಬೀಜಗಳು ಕೆಲವು ಸಲ ಮೊಳಕೆಯೊಡೆಯುವದಿಲ್ಲ. ಇದರಿಂದಾಗಿ ಸಂದರ್ಭದಲ್ಲಿ ರೈತರಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ರೈತರ ಈ ಸಂಕಷ್ಟಗಳನ್ನರಿತು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಳೆ ಬಾರದಿದ್ದರೂ ಸಹ ಮೊಳಕೆಯೊಡೆಯುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಹೌದು ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿಮೇಳದಲ್ಲಿ  ಏಕ ಬೆಳೆಯೊಂದಿಗೆ ಅಂತರ ಬೆಳೆ ಬಿತ್ತನೆಗೂ ಅನುಕೂಲವಾಗುವ, ತಕ್ಷಣಕ್ಕೆ ಮಳೆ ಬಾರದಿದ್ದರೂ ಬೀಜ ಮೊಳಕೆ ಬಿಡುವ ರೀತಿಯಲ್ಲಿ ಬಿತ್ತನೆ ಮಾಡುವ ಟ್ರಾಕ್ಟರ್‌ಚಾಲಿತ ಕೂರಿಗೆಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.

ಏಕೆ ಬೆಳೆಯೊಂದಿಗೆ ಅಂತರ್ ಬೆಳೆಯನ್ನು ಸಹ ಈ ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡಬಹುದು.  ‘ರಾಗಿ, ತೊಗರಿ, ಜೋಳ, ಅವರೆ ಯಾವುದಾದರೂ ಬೆಳೆಯ ಬೀಜ ವನ್ನು ಈ ಕೂರಿಗೆ ಸಹಾಯದಿಂದ ಬಿತ್ತ ಬಹುದು. ಎಂಟು ಸಾಲು ಶೇಂಗಾ, ಎರಡು ಸಾಲು ತೊಗರಿ, ಒಂದು ಸಾಲು ಮುಸುಕಿನ ಜೋಳ ಈ ಮಾದರಿಯಲ್ಲಿ ವಿವಿಧ ಬೆಳೆಗಳ ಬಿತ್ತನೆಯನ್ನು ಇದರಿಂದ ಮಾಡಬಹುದಾಗಿದೆ’ ಎಂದು ಕೂರಿಗೆ ಅಭಿವೃದ್ಧಿ ಪಡಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ. ಕೆ. ದೇವರಾಜ್ ಮಾಧ್ಯಮದವರಿಗೆ ತಿಳಿಸಿದರು.

ಕೃಷಿ ಮೇಳದಲ್ಲಿ ಈ ಟ್ರ್ಯಾಕ್ಟರ್ ರೈತರ ಆಕರ್ಷಣೀಯ ಕೇಂದ್ರವಾಗಿತ್ತು. ನಾಡಿನ ಮೂಲೆ ಮೂಲೆಯಿಂದ ಬಂದ ರೈತರು ಈ ಕೂರಿಗೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.

ಮಾರುಕಟ್ಟೆಯಲ್ಲಿ ಈಗ ಚಾಲ್ತಿಯಲ್ಲಿರುವ ಸಂಯುಕ್ತ ಕೂರಿಗೆಗಳು ಬೀಜ ಮತ್ತು ಗೊಬ್ಬರವನ್ನು ಒಂದರ ಮೇಲೆ ಒಂದು ಬೀಳುವಂತೆ ಬಿತ್ತನೆ ಮಾಡುತ್ತವೆ. ಆದರೆ ಈ ಕೂರಿಗೆಯಲ್ಲಿ ಎಱಡು ಇಂಚು ಅಂತರದಲ್ಲಿ ಬೀಳುವಂತೆ ಮಾಡಲಾಗಿದೆ. ಬೀಜದ ಮೇಲೆ ಗೊಬ್ಬರ ಬಿದ್ದರೆ ಮಳೆ ಕಡಿಮೆಯಿದ್ದಾಗ ಅಥವಾ ತೇವಾಂಶ ಇರದಿದ್ದರೆ ಗೊಬ್ಬರದಿಂದ ಬೀಜ ಸುಟ್ಟಂತಾಗುತ್ತದೆ. ಇದರಿಂದಾಗಿ ಬೀಜ ಮೊಳಕೆಯೊಡೆಯುವುದಿಲ್ಲ.

ಈಗ ಮಾರುಕಟ್ಟೆಯಲ್ಲಿರುವ ಕೂರಿಗೆಗಳ ಗುಳ (ಟೈನ್) ಒಂದೇ ಮಟ್ಟದಲ್ಲಿ ಇರುತ್ತವೆ. ಅಂದರೆ ಬೀಜ ಭೂಮಿಯಲ್ಲಿ ಒಂದೇ ಆಳಕ್ಕೆ ಬೀಳುವಂತಿರುತ್ತದೆ. ಆದರೆ ಈ ಕುರಿಗೆಯಲ್ಲಿ ಟ್ರ್ಟಾಕ್ಟರ ನ ಚಕ್ರ ಹೋಗುವ ಕಡೆಯಲ್ಲಿ ಗುಳಗಳನ್ನು ಒಂದು ಇಂಚು ಉದ್ದ ಮಾಡಲಾಗಿದೆ. ಚಕ್ರ ಮುಂದೆ ಹೋದಂತೆ, ಒಂದು ಇಂಚು ಮಣ್ಣು ಕೂಡ ಒಳಗೆ ಹೋಗುತ್ತದೆ. ಬಿತ್ತನೆ ಬೀಜ ಬೀಳುವ ಹಿಂಬಾಗವೇ ಟೈರ್ ಗಳನ್ನು ಅಳವಡಿಸಲಾಗಿದ್ದು, ಈ ಟೈರ್ ಗಳು ಮಣ್ಣನ್ನು ಮುಚ್ಚಿಕೊಂಡು ಬರುತ್ತವೆ. ಬೀಜ ಬಿತ್ತಿದ ಕೂಡಲೇ ಮಣ್ಣನ್ನು ಒತ್ತಿ ಪ್ಯಾಕ್ ಮಾಡುವುದರಿಂದ ಬಿತ್ತನೆ ನಂತರದ ದಿನಗಳಲ್ಲಿ ಮಳೆ ಬಾರದಿದ್ದರೂ ನೀರು ಆವಿಯಾಗುವುದು ಇದರಿಂದ ತಪ್ಪುತ್ತದೆ. ನೀರು ಆವಿಯಾಗದಿದ್ದಾಗ ತೇವಾಂಶ ಹಾಗೆಯೇ ಇರುತ್ತದೆ. ಆಗ ಬೀಜ ಮೊಳಕೆಯೊಡೆಯುತ್ತದೆ, ಆದರೆ ಬೇರೆ ಕೂರಿಗೆಯ ಬಿತ್ತನೆ ವೇಳ ಮಣ್ಣು ಸಡಿಲಗೊಂಡಿರುತ್ತದೆ. ನೀರು ಆವಿಯಾಗಿ ತೇವಾಂಶವೂ ಹೋಗುವುದರಿಂದ ಮೊಳಕೆ ಬಾರದೆ ಬೀಜ ಸರಿಯಾಗಿ ಹುಟ್ಟುವುದಿಲ್ಲ ಎಂದು ವಿವರಿಸುತ್ತಿದ್ದರು.