News

ಹಿಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಿದ್ದತೆ

06 November, 2020 9:06 PM IST By:

ಪ್ರಸಕ್ತ ಸಾಲಿನ (2020-21) ಹಿಂಗಾರು ಹಂಗಾಮಿನಲ್ಲಿ 32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. 

 ಕಳೆದ ವರ್ಷಕ್ಕೆ ಹೋಲಿಕೆ ಮಾಡಿದೆ ಈ ವರ್ಷ ಉತ್ತಮ ಮಳೆಯಾಗಿದೆ. ಮುಂಗಾರಿನಂತೆ ಹಿಂಗಾರಿನಲ್ಲಿಯೂ ಕೂಡ ಹೆಚ್ಚಿನ ಬಿತ್ತನೆಯಾಗುವ ನಿರೀಕ್ಷೆಯಿದೆ. ಮುಂಗಾರು ಬಿತ್ತನೆ ದಾಖಲೆಯ ಪ್ರಮಾಣದಲ್ಲಿ ಆಗಿತ್ತು. ಹಿಂಗಾರು ಸಹ ಹೆಚ್ಚು ಬಿತ್ತನೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹಿಂಗಾರು ಬಿತ್ತನೆಗೆ ಬೇಕಾದ ರಸಗೊಬ್ಬರ ಯೂರಿಯಾ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನಿರೀಕ್ಷಿತ 32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಈಗಾಗಲೇ 11.19 ಲಕ್ಷ ಹೆಕ್ಟೇರ್ (ಶೇ 35) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಿಂಗಾರು ಅವಧಿಯಲ್ಲಿ ಜೋಳ ಮತ್ತು ಕಡಲೆ ಪ್ರಮುಖ ಬೆಳೆಗಳು. ಅ. 29ರವರೆಗೆ ದ್ವಿದಳ ಧಾನ್ಯಗಳು 14.28 ಲಕ್ಷ ಹೆಕ್ಟೇರ್ ಗುರಿಯಲ್ಲಿ 5.94 ಲಕ್ಷ ಹೆಕ್ಟೇರ್ ಸಾಧನೆಯಾಗಿದೆ. ಒಟ್ಟು ಆಹಾರ ಧಾನ್ಯಗಳ 27.54 ಲಕ್ಷ ಹೆಕ್ಟೇರ್ ಗುರಿಯ ಪೈಕಿ 9.73ರಷ್ಟು ಸಾಧನೆಯಾಗಿದ್ದು, 26.02 ಲಕ್ಷ ಟನ್ ಉತ್ಪಾದನೆಯಾಗಿದೆ ಎಂದರು.

ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಪ್ರಮಾಣಿತ ಬಿತ್ತನೆ ಬೀಜದ ಅಂದಾಜು ಬೇಡಿಕೆ 3.28 ಲಕ್ಷ ಕ್ವಿಂಟಲ್‌ಗಳಷ್ಟಿದೆ. ಈವರೆಗೆ 1,55,989 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.

ಇನ್ನು 3.53ರಷ್ಟು ಎಣ್ಣೆಕಾಳುಗಳ ಗುರಿಯಿದ್ದು, ಈ ಪೈಕಿ 0.89 ಲಕ್ಷ ಹೆಕ್ಟೇರ್ ಸಾಧನೆಯಾಗಿ 2.81 ಲಕ್ಷ ಟನ್ ಉತ್ಪಾದನೆ. 0.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಗುರಿಯಿದ್ದು, ಇದರಲ್ಲಿ 0.08 ಲಕ್ಷ ಹೆಕ್ಟೇರ್ ಸಾಧನೆ,0.98 ಲಕ್ಷ ಟನ್ ಉತ್ಪಾದನೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹಂಗಾಮಿನಲ್ಲಿ 2.93 ಲಕ್ಷ ಟನ್ ವಿವಿಧ ರಾಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಲಾಗಿದ್ದು, ಸಕಾಲದಲ್ಲಿ ಪೂರೈಕೆಗಾಗಿ ಜಿಲ್ಲಾವಾರು, ತಿಂಗಳುವಾರು ಮತ್ತು ಸಂಸ್ಥೆವಾರು ಸರಬರಾಜು ಮಾಡಲು ಸಿದ್ದತೆ ಮಾಡಲಾಗಿದೆ.. ಅಕ್ಟೋಬರ್ 1ರಿಂದ 31ರವರೆಗೆ ಹಿಂಗಾರಿಗೆ 9.39 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಸರಬರಾಜು ಹಾಗೂ 9.62 ಲಕ್ಷ ಟನ್ ದಾಸ್ತಾನು ಇರುತ್ತದೆ ಎಂದರು.