ಭಾರತೀಯ ಸಿನಿಮಾ ಸಂಗೀತ ಲೋಕದ ಮೇರು ಪ್ರತಿಭೆ , ಅಸಂಖ್ಯ ಹಾಡುಗಳ ಮೂಲಕ ಕೋಟ್ಯಂತರ ಜನರನ್ನು ರಂಜಿಸಿದ ಖ್ಯಾತ ಗಾಯಕ, ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ನಿಧನರಾಗಿದ್ದಾರೆ.
ಎಸ್‌ಪಿ ಬಾಲಸುಬ್ರಹ್ಮಣ್ಯಂ ಕೊರೋನಾ ಸೋಂಕಿನಿಂದ ಬಳಲುತ್ತಿದ್ದರು. ಅವರನ್ನು ಆ.5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಿಂಗಳ ನಂತರ ಕೊರೋನಾ ನೆಗೆಟಿವ್ ಎಂದು ಬಂದಿತ್ತಾದರೂ ಆರೋಗ್ಯದ ಸ್ಥಿತಿಯಲ್ಲಿ ಏರುಪೇರಾಗಿದ್ದರಿಂದ ಚಿಕಿತ್ಸೆ ಮುಂದುವರಿಸಲಾಗಿತ್ತು. ಆ ಧ್ವನಿ ಬದುಕುಳಿಯಬೇಕೆಂದು ಕಳೆದ ಒಂದು ತಿಂಗಳುಗಳಿಂದ ಕೋಟ್ಯಂತರ ಸಂಗೀತ ಪ್ರೇಮಿಗಳು ನಿರಂತರವಾಗಿ ಪ್ರಾರ್ಥಿಸುತ್ತಲೇ ಇದ್ದರು. ಆ ಜೀವವೂ ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿತ್ತು. .ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ 74 ವರ್ಷ ವಯಸ್ಸಾಗಿತ್ತು. ಈ ವಯಸ್ಸಿನಲ್ಲೂ ಅವರು ಹಾಡುವುದನ್ನು ನಿಲ್ಲಿಸಿರಲಿಲ್ಲ. ಪತ್ನಿ ಸಾವಿತ್ರಿ, ಪುತ್ರ ಎಸ್.ಪಿ. ಚರಣ್, ಪುತ್ರಿ ಪಲ್ಲವಿ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಸ್ವರ ಸಂಗೀತ ಲೋಕದ ಮೋಡಿಗಾರ ಎಂದೇ ಪ್ರಸಿದ್ಧರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು 16 ಭಾಷಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. 6 ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ್ದ ಇವರು ಗಾಯನದಲ್ಲಷ್ಟೇ ಅಲ್ಲ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆಯಲ್ಲೂ ಸಾಧನೆ ಮಾಡಿದ್ದರು.
‘ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ..’ ಎಂದು ಭಾವ ತುಂಬಿ ಹಾಡಿದಾತ ‘ಕಥೆಯು ಮುಗಿದೇ ಹೋದರೂ ಮುಗಿಯದಿರಲೀ ಬಂಧನ…’ ಎಂದು ಹೇಳಿ ಹೊರಟೇ ಬಿಟ್ಟಿದ್ದಾರೆ…!